Advertisement

ದಾಸಿಮಯ್ಯರ ವಚನ ಇಂದಿಗೂ ಪ್ರಸ್ತುತ; ಜಿಲ್ಲಾಧಿಕಾರಿ

05:50 PM Apr 07, 2022 | Team Udayavani |

ಚಿಕ್ಕಬಳ್ಳಾಪುರ: 11ನೇ ಶತಮಾನದಲ್ಲೇ ಸರ್ವಧರ್ಮ ಸಮನ್ವಯ ಕುರಿತು ತನ್ನ ವಚನಗಳಲ್ಲಿ ರಚಿಸಿದ ಮೊದಲ ವಚನಕಾರ ದೇವರ ದಾಸಿಮಯ್ಯ. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಎಚ್‌. ಅಮರೇಶ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ನೇಕಾರರ ವರ್ಗದವರ ಅಭಿವೃದ್ಧಿಗಾಗಿ ಸರ್ಕಾರವು ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ನೇಕಾರರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಶರಣರಲ್ಲಿ ಮೊದಲು ವಚನಗಳನ್ನು ರಚಿಸಿದವರು ದೇವರ ದಾಸಿಮಯ್ಯ. ಈವರೆಗೆ ಅವರ ಸುಮಾರು 176 ವಚನಗಳು ದೊರೆತಿವೆ. ನೇರ, ಸರಳ, ಹಾಡು ಭಾಷೆ ಹಾಗೂ ಉಪಮೇಯವಾಗಿ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದ್ದಾರೆ. ಆ ನಂತರ ಬಂದತಹ ಶರಣರ ವಚನಗಳಲ್ಲೂ ದಾಸಿಮಯ್ಯನವರ ವಚನಗಳು ಗಾಢ ಪ್ರಭಾವ ಬೀರಿರುವುದನ್ನು ಕಾಣಬಹುದು ಎಂದರು.

ತತ್ವಾದರ್ಶ ಅಳವಡಿಸಿಕೊಳ್ಳಿ: ಕೈಮಗ್ಗ ಹಾಗೂ ಜವಳಿ ಇಲಾಖೆ ಉಪನಿರ್ದೇಶಕ ಶಿವಕುಮಾರ್‌ ಮಾತನಾಡಿ, ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಕ್ರಾಂತಿ ಮೂಡಿಸಿ, ಸಾಮಾಜಿಕ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಆದ್ದರಿಂದ, ಅವರ ವಚನ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯ ನೇಕಾರ ವರ್ಗದವರಿಗೆ ಸರ್ಕಾರದಿಂದ ದೊರೆಯುವಂತಹ ಸೌಲಭ್ಯ ಒದಗಿಸುತ್ತಿದ್ದೇವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನೇಕಾರರ ವರ್ಗದವರು ವಿದ್ಯುತ್‌ ಮಗ್ಗ ನೇಕಾರರ ಘಟಕಕ್ಕೆ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಶ್ರೇಯೋಭಿವೃದ್ಧಿಗೆ ಶ್ರಮಿಸಿ: ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ.ಲಕ್ಷ್ಮೀಪತಿ ಮಾತನಾಡಿ, ನೇಕಾರ ವರ್ಗದವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದ್ದು, ವರ್ಗದ ಶ್ರೇಯೋಭಿವೃದ್ಧಿಗೆ ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಸಂಪೂರ್ಣವಾಗಿ ಕಟ್ಟ ಕಡೆಯ ವ್ಯಕ್ತಿಗೂ ದೊರೆಯುವಂತಹ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.

ವಿಶೇಷ ಉಪನ್ಯಾಸ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಲ್‌.ಎಂ. ಗಿರಿಜಾಕಲ್ಯಾಣಿ ಅವರು ದೇವರ ದಾಸಿಮಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಂಗೀತ ಕಲಾವಿದ ನಟರಾಜು ದಾಸಿಮಯ್ಯನವರ ವಚನಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್‌, ನೇಕಾರ ಸಂಘದ ಉಪಕಾರ್ಯದರ್ಶಿ ಕುಶಾಲ್‌ ಕುಮಾರ್‌, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೇಕಾರ ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಇದ್ದರು.

ಶರಣರ ವಚನ ಜೀವನದಲ್ಲಿ ಅಳವಡಿಸಿಕೊಳ್ಳಿ
ಕಾಯಕ ನಿಷ್ಠೆ ಉಳ್ಳವರಾಗಿದ್ದ ದಾಸಿಮಯ್ಯ ಕಾಯಕವೇ ಕೈಲಾಸವೆಂದು ನಿಷ್ಠೆ, ಭಕ್ತಿಯಿಂದ ತಮ್ಮ ವಚನಗಳ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಅಂತಹವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಕಲಿಸಿ ಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿ ಎಚ್‌.ಅಮರೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next