ಶಹಾಪುರ: ಸುರಪುರ ತಾಲೂಕಿನ ಮುದನೂರ ಗ್ರಾಮ ದೇವರ ದಾಸಿಮಯ್ಯನವರ ಪುಣ್ಯ ಭೂಮಿ. ಆ ಪುಣ್ಯ ಭೂಮಿಯಲ್ಲಿ ಏ.17ರಿಂದ 22ರವರೆಗೆ ನಡೆಯುವ
ವಚನಕಾರ ದಾಸಿಮಯ್ಯನವರ ಜಾತ್ರಾ ಮಹೋತ್ಸವ ಹಾಗೂ ಇತರೆ ಕಾರ್ಯಕ್ರಮಗಳ ಯಶಸ್ಸಿಗೆ ಸರ್ವರು ತನು-ಮನ-ಧನದಿಂದ ಸಹಕರಿಸಬೇಕೆಂದು
ಮುದನೂರ ಸಂಸ್ಥಾನ ಮಠದ ರಚನಾ ಸಮಿತಿ ಮುಖ್ಯಸ್ಥ ರಾಮಸ್ವಾಮಿ ಕರೆ ನೀಡಿದರು.
ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ನೇಕಾರ ಸಮುದಾಯಗಳ ಚಿಂತನ ಮಂಥನ ಹಾಗೂ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಣೆ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಲ್ಲದೆ ಅಂದು ನಡೆಯುವ ಕಾರ್ಯಕ್ರಮದಲ್ಲಿ ನೇಕಾರ ಸಮುದಾಯದ ಸ್ಥಳೀಯ ಸಂಸ್ಥೆಗಳ ಚುನಾಯಿತ ನೂತನ ಜನಪ್ರತಿನಿಧಿ ಗಳಿಗೆ ಸನ್ಮಾನ ಸಮಾರಂಭವು ಆಯೋಜಿಸಲಾಗಿದೆ. ನೇಯ್ಗೆ ಕೆಲಸ ಮಾಡುವ ಎಲ್ಲಾ ಸಮುದಾಯಗಳ ಒಗ್ಗಟ್ಟಾಗಿ ನಡೆಯ ಬೇಕಿದೆ. ಆ ನಿಟ್ಟಿನಲ್ಲಿ ಯಾವುದೇ ಭೇದಭಾವ ಮಾಡದೆ ಸಂಘಟನಾತ್ಮಕವಾಗಿ ನಡೆಯಬೇಕು ಎಂದರು.
ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ಭಂಡಾರಿ ಮಾತನಾಡಿ, ರಾಜ್ಯದಲ್ಲಿರುವ ನೇಕಾರರು ಸರ್ಕಾರದ ಮುಂಗೈ ಹಿಡಿದು ಕೆಲಸ ಮಾಡಿಸುವಂತ ಗಟ್ಟಿತನ ಮೂಡಬೇಕಿದೆ. ಒಕ್ಕೂಟದ ಜವಾಬ್ದಾರಿ ಹೊತ್ತು ಸಮಗ್ರ ನೇಕಾರ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಮಟ್ಟದಲ್ಲಿ ನೇಕಾರ ಸಮುದಾಯದ ನೋವು, ನಲಿವಿಗೆ ಸ್ಪಂ ಧಿಸಲು ವಿಧಾನಸಭೆಯಲ್ಲಿ ಓರ್ವ ಜನಪ್ರತಿನಿಧಿ ಇಲ್ಲದಿರುವುದು ನೋವಿನ ಸಂಗತಿ. ಸಮುದಾಯ ಮಠ, ಮಂದಿರ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವಲ್ಲಿ ಶ್ರಮಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ನೇಕಾರರ ಸಮುದಾಯದ ಮಹಿಳಾ ಮುಖ್ಯಸ್ಥೆ ಶೋಭಾ ಮುರಳಿ ಕೃಷ್ಣಾ, ರಾಚಮ್ಮ ಪಾಟೀಲ್ ಮಾತನಾಡಿದರು. ಬಸವರಾಜ ಹುನಗುಂದ, ರಾಜಕುಮಾರ ಚಿಲ್ಲಾಳ, ಸುರಪುರ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ವೀರಸಂಗಪ್ಪ ಹಾವೇರಿ, ಸುರೇಶ ಗುತ್ತಿ ಇದ್ದರು.
ಮೂಲ ನೇಕಾರಿಕೆ ಮಾಡುವ 30ಕ್ಕೂ ಅಧೀಕ ಸಮುದಾಯಗಳನ್ನು ಗುರುತಿಸಿ ಒಂದೇ ವೇದಿಕೆಗೆ ಕರೆ ತರಲಾಗಿದ್ದು, ನಂತರ ಸರ್ಕಾರಕ್ಕೆ ಒತ್ತಾಯಿಸಿ
ನೇಕಾರರ ಸಂತ ದೇವರ ದಾಸಿಮಯ್ಯ ಜಯಂತಿ ಆಚರಣೆಗೆ ತರಲಾಗಿದೆ. ಈ ಮೂಲಕ ಉಪ ಪಂಗಡಗಳೆಲ್ಲ ಒಂದಾಗಿ ನಾವೆಲ್ಲ ಒಂದೇ ಎಂಬ
ಭಾವನೆಯೊಂದಿಗೆ ನೇಕಾರ ಸಮುದಾಯಗಳ ಒಕ್ಕೂಟ ಮುನ್ನಡೆಯಬೇಕು ಎಂದು ಮುದನೂರ ಸಂಸ್ಥಾನದ ಈಶ್ವರಾನಂದ ಸ್ವಾಮೀಜಿ ತಿಳಿಸಿದರು.