Advertisement

ಗಜಪಡೆಗೆ ಭಾರ ಹೊರುವ ತಾಲೀಮು ; ಮೊದಲ ದಿನವೇ 550 ಕೆ.ಜಿ. ತೂಕ ಭಾರ

05:57 PM Aug 19, 2022 | Team Udayavani |

ಮೈಸೂರು: ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಗುರುವಾರದಿಂದ ಭಾರ ಹೊರಿಸುವ ತಾಲೀಮು ಆರಂಭವಾಗಿದ್ದು, ಮೊದಲ ದಿನವೇ ಕ್ಯಾಪ್ಟನ್‌ ಅಭಿಮನ್ಯು 550 ಕೆ.ಜಿ. ತೂಕ ಭಾರ ಹೊತ್ತು ಬನ್ನಿಮಂಟಪದವರೆಗೆ ನಿರಾಯಾಸವಾಗಿ ಹೆಜ್ಜೆ ಹಾಕಿದ.

Advertisement

ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಗುರುವಾರ ಬೆಳಗ್ಗೆ 7.45ಕ್ಕೆ ಭಾರ ಹೊರಿಸುವ ಮುನ್ನ ಸಂಪ್ರದಾಯದಂತೆ ಆನೆಗಳ ಬೆನ್ನಿನ ಮೇಲೆ ಇಡುವ ಗಾದಿ, ನಮಾª ಹಾಗೂ ಆನೆಗಳಿಗೆ ಅರಮನೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಡಿಸಿಎಫ್ ಕರಿಕಾಳನ್‌ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಹಣ್ಣು ಮತ್ತು ಕಬ್ಬನ್ನು ನೀಡಿದರು. ನಂತರ 8.15ಕ್ಕೆ ಅಭಿಮನ್ಯು ಬೆನ್ನಿನ ಮೇಲೆ 250 ಕೆ.ಜಿ. ತೋಕದ ಗಾದಿ, ನಮ್ದಾ ಹಾಗೂ 300 ಕೆ.ಜಿ. ತೂಕದ ಮರಳು ಮೂಟೆಯನ್ನಿಟ್ಟು ಭಾರ ಹೊರುವ ತಾಲೀಮು ಆರಂಭಿಸಲಾಯಿತು. ಅರಮನೆಯಿಂದ ಹೊರಟ ಗಜಪಡೆ ನಿರಾತಂಕವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿತು. ಈ ವೇಳೆ ಕ್ಯಾಪ್ಟನ್‌ ಅಭಿಮನ್ಯುಗೆ ಅರ್ಜುನ, ಗೋಪಾಲಸ್ವಾಮಿ ಸೇರಿದಂತೆ ಇತರೆ ಆನೆಗಳು ಜೊತೆಯಾದವು. ದಿನಕ್ಕೆ ಎರಡು ಬಾರಿಯಂತೆ 5 ಕಿ.ಮೀ. ನಡೆಸಲು ತೀರ್ಮಾನಿಸಲಾಗಿದ್ದು, 300 ಕೆ.ಜಿ. ಮರಳಿನ ಮೂಟೆ ಹೊರಿಸುವ ಮುಖಾಂತರ ತಾಲೀಮು ನಡೆಸಲಾಗಿದೆ.

ನಗರದ ವಾತಾವರಣಕ್ಕೆ ಒಗ್ಗಿದ ಮಹೇಂದ್ರ: ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮಹೇಂದ್ರ ಆನೆ ನಗರ ಪರಿಸರಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದು, ಆನೆಗಳ ಜತೆಗೆ ಯಾವುದೇ ಭಯ, ಆತಂಕವಿಲ್ಲದೇ ತಾಲೀಮಿನಲ್ಲಿ ಭಾಗವಹಿಸುತ್ತಿದೆ. ತಾಲೀಮಿನ ವೇಳೆ ಪಕ್ಕದಲ್ಲಿ ಅಧಿಕಾರಿಗಳ ಕಾರು ಸೇರಿದಂತೆ ಏನೇ ಶಬ್ಧವಾದರು ಭಯಪಡದೆ ಧೈರ್ಯದಿಂದ ಹೆಜ್ಜೆ ಇಡುವ ಮೂಲಕ ಅಧಿಕಾರಿಗಳಲ್ಲಿ ಭರವಸೆ ಮೂಡಿಸಿದ್ದಾನೆ.

ಡಿಸಿಎಫ್ ಡಾ.ವಿ.ಕರಿಕಾಳನ್‌ ಮಾತನಾಡಿ, ಇಂದು ಆನೆಗಳಿಗೆ ಭಾರದ ತಾಲೀಮು ನಡೆಸಲಾಗುತ್ತಿದೆ. ಮೊದಲು 300 ಕೆ.ಜಿ. ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗುತ್ತಿದೆ. ಅರ್ಜುನ ಬಿಟ್ಟು 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೆಷನ್‌ ಆಗಿ ಐದು ದಿನ ನಡೆಸಲಾಗುತ್ತದೆ. 300 ಕೆ.ಜಿ.ಆದ ನಂತರ ಮತ್ತೆ ಹೆಚ್ಚಿಸುತ್ತೇವೆ. 750 ಕೆಜಿ ಬರುವ ತನಕ ತಾಲೀಮು ಮಾಡುತ್ತೇವೆ.

Advertisement

ಇಲ್ಲಿಂದ ಬನ್ನಿಮಂಟಪ 5ಕಿ.ಮಿ.ಇದೆ. ನಾವು ನಿನ್ನೆ ಮೊನ್ನೆ ಎಲ್ಲ ಕೇವಲ ವಾಕ್‌ ಮಾಡಿಸಿದ್ದೇವೆ. ಆ ಟೈಮ್‌ ನಲ್ಲಿ ನಮಗೆ ಇಲ್ಲಿಂದ ಅಲ್ಲಿಗೆ ತಲುಪಲು ಒಂದುಕಾಲು ಗಂಟೆ ಹಿಡಿದಿದೆ. ಇವತ್ತು ತೂಕ ಹಾಕಿ ಆನೆಗಳು ಸಾಗಲಿವೆ. ಎಷ್ಟು ಗಂಟೆ ಆಗತ್ತೆ ನೋಡಬೇಕು. ಸೆಪ್ಟೆಂಬರ್ ಮೊದಲ ವಾರ ಎರಡನೇ ಹಂತದ ಆನೆ ಕರೆತರಲಾಗುತ್ತದೆ. ಮರಳ ಮೂಟೆ 300 ಕೆ.ಜಿ, ನಮ್ದಾ, ಗಾದಿ, ಹಗ್ಗ ಎಲ್ಲ ಸೇರಿ 500ರಿಂದ 550ಕೆಜಿ ತೂಕವಿರಿಸಿ ಆನೆಗಳು ನಡೆಯುತ್ತಿವೆ. ಹಂತ
ಹಂತವಾಗಿ ಭಾರ ಹೆಚ್ಚಿಸುವ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದರು.

ಮೊದಲ ಹಂತವಾಗಿ 300ಕೆಜಿ ತೂಕದ ಮರಳು ಮೂಟೆ ಸೇರಿ 550 ಕೆಜಿ ಭಾರ ಹೊರಿಸಿ ತಾಲೀಮು ನಡೆಸಲಾಗಿದೆ. ಹಂತಹಂತವಾಗಿ ತೂಕವನ್ನು ಹೆಚ್ಚಿಸಿ ಜಂಬೂ ಸವಾರಿ ವೇಳೆಗೆ 750ಕೆ.ಜಿ.ತೂಕವನ್ನು ಭಾರ ಹೊರಲು ಗಜಪಡೆಯನ್ನು ಸಜ್ಜುಗೊಳಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.
●ಡಾ.ವಿ. ಕರಿಕಾಳನ್‌, ಡಿಸಿಎಫ್

Advertisement

Udayavani is now on Telegram. Click here to join our channel and stay updated with the latest news.

Next