ಚಿಕ್ಕಮಗಳೂರು: ಶರನ್ನವರಾತ್ರಿ ಹಬ್ಬದ ಅಂಗವಾಗಿ ನಗರದ ಸುಗ್ಗೀಕಲ್ಲು ಬಡಾವಣೆಯ ಪುರೋಹಿತ ಅಶ್ವತ್ಥ ನಾರಾಯಣಾ ಚಾರ್ಯ ವಿ.ಜೋಷಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು, ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ.
ನಾಡನ್ನು ಆಳಿದ ಯದು ವಂಶಸ್ಥರ ಪರಂಪರೆಯ ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂ ಸವಾರಿ, ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳ ವೈಭವ ಅನಾವರಣಗೊಳಿಸಿದ್ದರೆ ಇನ್ನು ಕೆಲವು ಗೊಂಬೆಗಳು ವಿವಿಧ ದೇವತೆಗಳ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿವೆ.
ಪದ್ಮಾವತಿ ಹಾಗೂ ಶ್ರೀನಿವಾಸನ ವಿವಾಹದ ವೈಭವವನ್ನು ಸಾರುವ ಶ್ರೀನಿವಾಸ ಕಲ್ಯಾಣದ ಗೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ. ವರನ ದಿಬ್ಬಣವನ್ನು ಎದುರುಗೊಳ್ಳುವುದು, ವರಪೂಜೆ, ಮಾಂಗಲ್ಯಧಾರಣೆ. ಲಾಜಾಹೋಮ, ಸಪ್ತಪದಿ ತುಳಿಯುವುದು ಸೇರಿದಂತೆ ಮದುವೆಯ ವಿವಿಧ ಆಚರಣೆಗಳ ದೃಶ್ಯಗಳು ಕಣ್ಮನ ತಣಿಸುತ್ತಿವೆ. ಕೃಷಿ ಚಟುವಟಿಕೆ, ಸಂತೆ ದೃಶ್ಯಗಳು, ಭಾರತೀಯ ಹಬ್ಬ, ಹರಿದಿನಗಳ ವಿವಿಧ ಆಚರಣೆಗಳನ್ನು ತೆರೆದಿಡುವ ನೂರಾರು ಗೊಂಬೆಗಳು ಮನಸ್ಸಿಗೆ ಮುದ ನೀಡುತ್ತಿವೆ. ಗೋಪಾಲಕರನ್ನು ರಕ್ಷಿಸಲು ಗೋಪಾಲಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ದೃಶ್ಯ, ಮಹಾವಿಷ್ಣುವಿನ ದಶಾವತಾರದ ಚಿತ್ರಣ, ಕೈಲಾಸ ಪರ್ವತ ಮನ ಸೆಳೆಯುತ್ತಿವೆ.
ಪುರೋಹಿತ ಅಶ್ವತ್ಥನಾರಾಯಣಾಚಾರ್ಯ ವಿ.ಜೋಷಿ ಮಾತನಾಡಿ, ಆಧುನಿಕತೆಯಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ಅರಿವೇ ಇಲ್ಲದಿರುವ ಇಂದಿನ ಪೀಳಿಗೆ ಮಕ್ಕಳಿಗೆ. ಈ ಮೂಲಕ ಸಾಂಸ್ಕೃತಿಕತೆ ಪರಿಚಯಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಉದ್ದೇಶದಿಂದ ಕಳೆದ ಎರಡು ದಶಕಗಳಿಂದ ಪ್ರತಿ ವರ್ಷ ಮನೆಯಲ್ಲಿ ಪಟ್ಟದ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು.
ನವರಾತ್ರಿಯ ಒಂಬತ್ತು ದಿನಗಳ ಕಾಲ ಪ್ರತಿದಿನ ಸಂಜೆ ಶ್ರೀನಿವಾಸ ಕಲ್ಯಾಣದ ಪ್ರವಚನ ಮಾಡಲಾಗುತ್ತಿದೆ. ತಮ್ಮ ತವರು ಮನೆಯ ನವರಾತ್ರಿ ಹಬ್ಬದ ಸಂಪ್ರದಾಯ ತಾವುಮುಂದುವರಿಸಿಕೊಂಡು ಬರುತ್ತಿದ್ದು, ತವರಿನಿಂದ ಬಳುವಳಿಯಾಗಿ ಬಂದಿರುವ ಪಟ್ಟದ ಗೊಂಬೆಗಳನ್ನು ಪ್ರದರ್ಶಿಸಲಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಉಳಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ಆಯೋಜಕಿ ಅನುರಾಧಾ ಜೋಷಿ ಹೇಳಿದರು.