Advertisement

ದಸರಾ ಸ್ಪೆಷಲ್‌ ಪಾಯಸ

12:45 PM Sep 27, 2017 | |

1.ಖರ್ಜೂರ ಮತ್ತು ಬಾದಾಮಿ ಪಾಯಸ
ಬೇಕಾಗುವ ಸಾಮಗ್ರಿಗಳು: ಖರ್ಜೂರ (ಬಿಡಿಸಿಕೊಂಡಿದ್ದು) 10 ರಿಂದ 12, ಬೆಲ್ಲ ಸಿಹಿ ಎಷ್ಟು ಬೇಕೋ ಅಷ್ಟು.ಖರ್ಜೂರ ಸಿಹಿ ಇರುತ್ತದೆ ಆದ್ದರಿಂದ ಜಾಸ್ತಿ ಬೇಕಾಗುವುದಿಲ್ಲ. ಹಾಲು ಎರಡು ಕಪ್‌, ಬಾದಾಮಿ 10- 12, ಕುಂಕುಮ ಕೇಸರಿ ದಳಗಳು ಸ್ವಲ, ಏಲಕ್ಕಿ ಕಾಯಿ 3, ಲವಂಗ 3

Advertisement

ಮಾಡುವ ವಿಧಾನ:
ಬಾದಾಮಿಯನ್ನು ಕಾಲು ಗಂಟೆ ನೀರಿನಲ್ಲಿ ನೆನೆಸಿ. ಮಿಕ್ಸಿ ಜಾರಿಗೆ ಖರ್ಜೂರ, ಬಾದಾಮಿ, ಏಲಕ್ಕಿ ಬೀಜ, ಲವಂಗ ಎಲ್ಲವನ್ನೂ ಹಾಕಿ ನುಣ್ಣಗೆ ರುಬ್ಬಿ. ಅರೆದ ಪದಾರ್ಥಗಳಿಗೆ ಎರಡು ಕಪ್‌ ನೀರು ಹಾಕಿ ಒಲೆಯ ಮೇಲೆ ಇಟ್ಟು ಕಾಯಿಸಿ. ಕುದಿ ಬರುವಾಗ ಬೆಲ್ಲದ ಪುಡಿ ಹಾಕಿ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಹಾಲಿನಲ್ಲಿ ನೆನೆಸಿದ ಕೇಸರಿ ಮಿಶ್ರಿತ ಹಾಲು ಹಾಕಿ. ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ನಂತರ ಒಲೆಯಿಂದ ಕೆಳಗಿಳಿಸಿ. ಈ ಪಾಯಸ, ದೇಹಕ್ಕೆ ತುಂಬಾ ಒಳ್ಳೆಯದು. ಖರ್ಜೂರ ರಕ್ತ ಶುದ್ಧಿ ಮಾಡುತ್ತದೆ. ಬಾದಾಮಿ ಮೆದುಳಿನ ಚಟುವಟಿಕೆಗೆ ಒಳ್ಳೆಯದು. ಹಾಗೂ ಈ ಪಾಯಸ ಮಧುಮೇಹ ಇದ್ದವರಿಗೂ ಒಳ್ಳೇದು.

2.ಸಬ್ಬಕ್ಕಿ ಪಾಯಸ 
ಬೇಕಾಗುವ ಸಾಮಗ್ರಿಗಳು:

ಸಬ್ಬಕ್ಕಿ ಒಂದು ಕಪ್‌, ಸಕ್ಕರೆ ಅರ್ಧ ಕಪ್‌ (ಸಿಹಿ ಎಷ್ಟು ಬೇಕೋ ಅಷ್ಟು ಹಾಕಿ), ಹಾಲು ಒಂದು ಕಪ್‌, ಲವಂಗ 3-4, ಏಲಕ್ಕಿ ಪುಡಿ ಅರ್ಧ ಟೀ ಚಮಚ, ತುಪ್ಪ ಎರಡು ಟೀ ಚಮಚ, ಗೋಡಂಬಿ- ದ್ರಾಕ್ಷಿ ಸ್ವಲ್ಪ$

ಮಾಡುವ ವಿಧಾನ:
ಸಬ್ಬಕ್ಕಿಯನ್ನು ಒಂದು ಟೀ ಚಮಚ ತುಪ್ಪದಲ್ಲಿ ಹುರಿಯಿರಿ. ಹದವಾಗಿ ಹುರಿದರೆ ಅರಳಿನಂತೆ ಆಗುತ್ತದೆ. ಒಂದು ಪಾತ್ರೆಯಲ್ಲಿ ಎರಡು ಕಪ್‌ ನೀರು ಹಾಕಿ ಕುದಿಸಿ. ಕುದಿಯುವ ನೀರಿಗೆ ಹುರಿದ ಸಬ್ಬಕ್ಕಿಯನ್ನು ಹಾಕಿ. ಕಾಳು ಬೆಂದ ನಂತರ ಸಕ್ಕರೆ ಹಾಕಿ. ಆಮೇಲೆ ಹಾಲು ಹಾಕಿ. ಏಲಕ್ಕಿ, ಲವಂಗದ ಪುಡಿ ಹಾಕಿ. ಬಾಣಲೆಯಲ್ಲಿ ಗೋಡಂಬಿ ದ್ರಾಕ್ಷಿ ಹುರಿದು ಪಾಯಸದ ಮೇಲೆ ಚಿಮುಕಿಸಿ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ. ಈ ಪಾಯಸವು ನೀರಿನಂತೆ ತೆಳ್ಳಗೆ ಇದ್ದರೆ ಕುಡಿಯಲು ಹಿತವಾಗಿರುತ್ತದೆ. ಅನಾರೋಗ್ಯದಿಂದ ಬಳಲುತ್ತಿದ್ದಾಗ ಈ ದ್ರವ ಆಹಾರ ಸೇವನೆ ತುಂಬಾ ಒಳ್ಳೆಯದು.

3.ಹಲಸಿನ ಹಣ್ಣಿನ ಪಾಯಸ
ತಯಾರಿಸುವ ವಿಧಾನ:
ಹಲಸಿನ ತೊಳೆಗಳನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ, ಬೆಲ್ಲಕ್ಕೆ ಮೂರು ಕಪ್‌ ನೀರು ಹಾಕಿ ಕುದಿಯಲು ಇಡಿ. ಬೆಲ್ಲ ನೀರಾದ ಬಳಿಕ ಹೆಚ್ಚಿದ ಹಣ್ಣುಗಳನ್ನು ಹಾಕಿ. ಮೈದಾ ಹಿಟ್ಟನ್ನು ನೀರಿನಲ್ಲಿ ಕಲಸಿ ಹಾಕಿ. ಅಥವಾ ಇದೇ ಅಳತೆಯ ಅಕ್ಕಿ ಹಿಟ್ಟು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಸ್ವಲ್ಪ ಹುರಿದು ನಂತರ ಉಪಯೋಗಿಸಬಹುದು. ಉಪ್ಪನ್ನು ಹಾಕಿ ಬೆಂದ ಬಳಿಕ ಕೆಳಗಿಳಿಸುವ ಮೊದಲು ಏಲಕ್ಕಿ ಪುಡಿ, ಕಾಯಿ ಹಾಲು ಹಾಕಿ. 

Advertisement

ಬೇಕಾಗುವ ಸಾಮಾನುಗಳು: 
ಬಲಿತ ಹಲಸಿನ ಹಣ್ಣಿನ ತೊಳೆ 10-15, ತೆಂಗಿನ ಕಾಯಿ ಹಾಲು 2 ಕಪ್‌, ಬೆಲ್ಲದ ಪುಡಿ 2 ಕಪ್‌, ಮೈದಾಹಿಟ್ಟು ಅಥವಾ ಅಕ್ಕಿ ಹಿಟ್ಟು 3 ಟೀ ಚಮಚ, ಉಪ್ಪು ಕಾಲು ಟೀ ಚಮಚ.

4. ಹೀರೇಕಾಯಿ ಪಾಯಸ
ಬೇಕಾಗುವ ಸಾಮಗ್ರಿಗಳು:
ಮಧ್ಯಮ ಗಾತ್ರದ ಹೀರೇಕಾಯಿ 1, ಹೆಸರು ಬೇಳೆ 1 ಟೇಬಲ… ಚಮಚ, ಕಾಯಿ ಹಾಲು 2 ಕಪ್‌, ಬೆಲ್ಲದ ಪುಡಿ 2 ಕಪ್‌, ಮೈದಾ ಹಿಟ್ಟು 2 ಟೀ ಚಮಚ, ಏಲಕ್ಕಿ ಪುಡಿ 1 ಟೀ ಚಮಚ. 

ಮಾಡುವ ವಿಧಾನ: 
ಹೀರೇಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ. ಹೆಚ್ಚಿದ ಹೋಳು ಮುಳುಗುವಷ್ಟು ನೀರು ಹಾಕಿ. ಹೆಸರು ಬೇಳೆಯನ್ನು ಸಹ ಆ ಹೋಳುಗಳು ಜೊತೆಯಲ್ಲಿ ತೊಳೆದು ಹಾಕಿ. ಬೆಲ್ಲದ ಪುಡಿ ಹಾಕಿ ಕುದಿಸಿ. ಕುದಿಯುತ್ತ ಬಂದಾಗ, ಮೈದಾ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಡಿಸಿ ಹಾಕಿ ಅದರೊಂದಿಗೆ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕಾಯಿ ಹಾಲು ಹಾಕಿ. ಏಲಕ್ಕಿ ಪುಡಿ ಸೇರಿಸಿ. ಗೋಡಂಬಿ ದ್ರಾಕ್ಷಿ ತುಪ್ಪದಲ್ಲಿ ಹುರಿದು ಹಾಕಿ. ತುಂಬಾ ಸರಳ ವಿಧಾನದಲ್ಲಿ ಹೀರೇಕಾಯಿ ಪಾಯಸ ಮಾಡಿ ನೋಡಿ. 

5.ಗಸಗಸೆ ಪಾಯಸ
ಬೇಕಾಗುವ ಸಾಮಗ್ರಿಗಳು:
ಗಸಗಸೆ 50 ಗ್ರಾಂ, ಅಕ್ಕಿ 50 ಗ್ರಾಂ, ಕೊಬ್ಬರಿ ತುರಿ ಅರ್ಧ ಕಪ್‌, ಬೆಲ್ಲ ಸಿಹಿ ಬೇಕಾದಷ್ಟು, ಅರ್ಧ ಕಪ್‌ ಬೇಕಾಗುತ್ತದೆ. ನೋಡಿ ಹಾಕಿ. ಏಲಕ್ಕಿ ಪುಡಿ ಅರ್ಧ ಚಮಚ ಗೋಡಂಬಿ 8-10, ದ್ರಾಕ್ಷಿ 8-10, ಹಾಲು ಅರ್ಧ ಲೀಟರ್‌, ತುಪ್ಪ 2 ಚಮಚ

ಮಾಡುವ ವಿಧಾನ:
ಗಸಗಸೆಯನ್ನು ಮತ್ತು ಅಕ್ಕಿಯನ್ನು ಒಲೆ ಮೇಲೆ ಒಂದು ಬಾಣಲೆಯಲ್ಲಿ ಹಾಕಿ ಅದನ್ನು ಹದವಾಗಿ ಹುರಿದುಕೊಳ್ಳಿ (ಕಪ್ಪಾಗಬಾರದು). ಒಂದು ಮಿಕ್ಸಿ ಜಾರಿಗೆ ಕೊಬ್ಬರಿ ತುರಿ, ಹುರಿದುಕೊಂಡ ಗಸಗಸೆ, ಅಕ್ಕಿ, ಏಲಕ್ಕಿ ಪುಡಿ ಎಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ರುಬ್ಬಿಕೊಂಡ ಮಿಶ್ರಣವನ್ನು ಮತ್ತು ಅದರ ಜೊತೆಗೆ ಒಂದೆರಡು ಕಪ್‌ ನೀರು ಹಾಕಿ. ಒಲೆಯ ಮೇಲೆ ಇಟ್ಟು ಸಿಹಿ ಎಷ್ಟು ಬೇಕೋ ಅಷ್ಟು ಬೆಲ್ಲವನ್ನು ಹಾಕಿ, ಚೆನ್ನಾಗಿ ಕುದಿಸಿ. ನಂತರ ಹಾಲನ್ನು ಹಾಕಿ ಕುದಿಸಬೇಕು. ಆದು ಉಕ್ಕದಂತೆ ಸೌಟಿನಿಂದ ಕಲಕುತ್ತಿರಿ. ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಕೆಂಪಗೆ ಹುರಿಯಿರಿ. ನಂತರ ಅದನ್ನು ಕುದಿಯುತ್ತಿರುವ ಪಾಯಸಕ್ಕೆ ಹಾಕಿ. 

ಇನ್ನೊಂದು ವಿಧಾನವೆಂದರೆ, ಗಸಗಸೆಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿ. ಕೊಬ್ಬರಿ ತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮೇಲೆ ಹೇಳಿದ ವಿಧಾನದಲ್ಲಿ ಮಾಡಿ. ಇದು ತಂಪು ಮತ್ತು ನಿದ್ದೆ ಬರದೆ ಇದ್ದಾಗ ಇದನ್ನು ಮಾಡಿ ಕುಡಿದರೆ ಒಳ್ಳೆಯದು. 

ವೇದಾವತಿ ಎಚ್‌.ಎಸ್‌., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next