Advertisement

ಮೈಸೂರಿನ 26 ರಸ್ತೆಗಳಲ್ಲಿ ದಸರಾ ದೀಪಾಲಂಕಾರ

11:25 AM Oct 10, 2018 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ದಸರಾ ದೀಪಾಲಂಕಾರ ಸಮಿತಿವತಿಯಿಂದ 2.98 ಕೋಟಿ ವೆಚ್ಚದಲ್ಲಿ ನಗರದ ಹೃದಯಭಾಗದ 26 ರಸ್ತೆಗಳಲ್ಲಿ 52 ಕಿ.ಮೀ ಉದ್ದಕ್ಕೆ ದೀಪಾಲಂಕಾರ ಮಾಡಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಚ್‌.ಗೋಪಾಲಕೃಷ್ಣ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 51 ವೃತ್ತಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದು, ಈ ಪೈಕಿ 25 ವೃತ್ತಗಳಿಗೆ 49 ಲಕ್ಷದಷ್ಟು ವಿವಿಧ ಕಂಪನಿಗಳು ಪ್ರಯೋಜಕತ್ವವಹಿಸಿವೆ ಎಂದರು. ದೊಡ್ಡಕೆರೆ ಮೈದಾನ ಮತ್ತು ಏಕಲವ್ಯ ವೃತ್ತದಲ್ಲಿ ಬೇಲೂರಿನ ದರ್ಪಣ ಸುಂದರಿ ಪ್ರತಿಕೃತಿ, ಮುಡಾ ವೃತ್ತದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಕೃತಿ,

ದೊಡ್ಡಕೆರೆ ಮೈದಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಕೃತಿ, ಹಂಪಿ ಕಲ್ಲಿನ ರಥ, ಬುದ್ಧ-ಬಸವ-ಅಂಬೇಡ್ಕರ್‌, ಅಂಬಾರಿ, ಕೆಆರ್‌ಎಸ್‌ ಮಾದರಿಯ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ರೈಲು ನಿಲ್ದಾಣದ ವೃತ್ತದಲ್ಲಿ ಪಾರ್ಲಿಮೆಂಟ್‌ ಭವನ, ಬನ್ನಿಮಂಟಪ ಮೈದಾನ ವೃತ್ತದಲ್ಲಿ ವಿಧಾನಸೌಧದ ಪ್ರಕಿಕೃತಿಯನ್ನು ನಿರ್ಮಿಸಲಾಗಿದೆ. 

ಈ ದಸರೆಯಲ್ಲಿ ವಿಶೇಷವಾಗಿ ಬಹುವರ್ಣಗಳನ್ನು ಪ್ರದರ್ಶಿಸುವ ಆರ್‌ಜಿಬಿ (ರೆಡ್‌,ಗ್ರೀನ್‌, ಬ್ಲೂ) ಎಲ್‌ಇಡಿಗಳನ್ನು ಬಳಸಲಾಗಿದೆ. ದೇವರಾಜ ಅರಸು ರಸ್ತೆ, ಮಾನಸಗಂಗೋತ್ರಿಯ ಬಯಲುರಂಗಮಂದಿರದ ರಸ್ತೆಗಳನ್ನು ಈ ಬಲ್ಬ್ಗಳಿಂದ ಅಲಂಕರಿಸಲಾಗಿದೆ.

ಜೊತೆಗೆ ಈ ಬಾರಿ ಹೆಚ್ಚುವರಿಯಾಗಿ ಚಾಮುಂಡಿಬೆಟ್ಟದ ರಸ್ತೆ, ಮೈಸೂರು -ಹುಣಸೂರು ರಸ್ತೆ ಹಾಗೂ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ನಡೆಯುವ ಕೃಷ್ಣರಾಜ ಬುಲೇವಾರ್ಡ್‌ ರಸ್ತೆಗಳಲ್ಲೂ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ.

Advertisement

ಇಂಧನ ಇಲಾಖೆವತಿಯಿಂದ ಸಾರ್ವಜನಿಕರಿಗೆ ವಿದ್ಯುತ್‌ ಬಗ್ಗೆ ಅರಿವುಮೂಡಿಸಲು 75 ಲಕ್ಷ ವೆಚ್ಚದಲ್ಲಿ ವಸ್ತುಪ್ರದರ್ಶನದಲ್ಲಿ ಇಲಾಖೆಯ ಮಳಿಗೆಯನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದರು. ಸೆಸ್ಕ್ ತಾಂತ್ರಿಕ ನಿರ್ದೇಶಕ ನರಸಿಂಹೇಗೌಡ, ಮುಖ್ಯ ಲೆಕ್ಕಾಧಿಕಾರಿ ಶಿವಣ್ಣ, ಅಫ್ತಾಬ್‌ ಅಹ್ಮದ್‌, ಮುನಿಗೋಪಾಲ ರಾಜ್‌, ಸ್ವಾಮಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next