ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಂಬಂಧ ಜಿಲ್ಲಾಡಳಿತವು ಸೋಮವಾರ ಜಮನೆತನದವರಿಗೆ ಸಾಂಪ್ರದಾಯಿಕವಾಗಿ ಆಮಂತ್ರಣ ನೀಡಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೈಸೂರು ಅರಮನೆಯಲ್ಲಿ ರಾಜಮನೆತದವರ ಖಾಸಗಿ ನಿವಾಸದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಶಾಲು, ಫಲ, ತಾಂಬೂಲದೊಂದಿಗೆ ದಸರೆಗೆ ಆಮಂತ್ರಿಸಿದರು. ಇದೇ ವೇಳೆ ಸರ್ಕಾರದಿಂದ ರಾಜಮನೆತನಕ್ಕೆ ನೀಡುವ ಗೌರವಧನದ 36 ಲಕ್ಷ ರೂ. ಮೊತ್ತದ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಮಹಾ ನಗರಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್, ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ರಾಜು, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಹದೇವಪ್ಪ, ದಸರೆಗೆ ರಾಜಮನೆತನದವರನ್ನು ಆಹ್ವಾನಿಸಿದ್ದೇವೆ. ಅವರು ಕೂಡ ದಸರೆಯಲ್ಲಿ ಸಂತೋಷದಿಂದ ಭಾಗಿಯಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ರಾಜಮನೆತನದವರಿಗೆ ಕಳೆದ ವರ್ಷ 35 ಲಕ್ಷ ರೂ. ನೀಡಲಾಗಿತ್ತು, ಈ ವರ್ಷ 36 ಲಕ್ಷ ರೂ. ಗೌರವಧನ ನೀಡಿದ್ದೇವೆ ಎಂದು ತಿಳಿಸಿದರು.
ಎಲ್ಲ ರೀತಿಯ ಸಹಕಾರ -ಪ್ರಮೋದಾದೇವಿ: ದಸರೆಗೆ ಆಮಂತ್ರಣ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದಾದೇವಿ, ಸರ್ಕಾರ ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಿಂದೆಯೂ ಇರಲಿಲ್ಲ, ಮುಂದೆಯೂ ಬರುವುದಿಲ್ಲ. ಸರ್ಕಾರಿ ದಸರೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ದಸರಾ ಮಹೋತ್ಸವ ಸಂಬಂಧ ಸರ್ಕಾರಕ್ಕೆ ಯಾವುದೇ ಪತ್ರ ಬರೆದಿಲ್ಲ ಎಂದರು. ಇದೇ ವೇಳೆ ಗನ್‌ಹೌಸ್ ವೃತ್ತದ ಬಳಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆ ನಿರ್ಮಾಣ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.