ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ 4 ದಿನಗಳ ಚಾಮರಾಜನಗರ ದಸರಾ ಮಹೋತ್ಸವಕ್ಕೆ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಚಾಮರಾಜೇಶ್ವರ ಸ್ವಾಮಿಗೆ ಪೂಜೆ ಕೈಂಕರ್ಯದೊಂದಿಗೆ ಚಾಲನೆ ದೊರೆಯಿತು.
ಶಾಸಕ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷೆ ಆಶಾ ನಟರಾಜು ಜಾನಪದ ಕಂಸಾಳೆ, ಗೊರವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷಧಾರಿ ಮುಂತಾದ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಚಾಮರಾಜೇಶ್ವರ ದೇವಸ್ಥಾನಕ್ಕೆ ಆಗಮಿಸಿ ಚಾಮರಾಜೇಶ್ವರ, ಚಾಮುಂಡೇಶ್ವರಿ, ಕೆಂಪನಂಜಾಂಬ ಹಾಗೂ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ;–
ಗೋಹತ್ಯೆ ನಿಷೇಧ ಕಾಯ್ದೆ ಅರಿವಿಲ್ಲದ್ದನ್ನು ಕಂಡು ಸಚಿವರೇ ಸುಸ್ತು!
ಬಳಿಕ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲೆಯ ವಿವಿಧ ಕಲಾವಿದರಿಂದ ಏರ್ಪಡಿಸಲಾಗಿದ್ದ ಚಿತ್ರಕಲಾ ಪ್ರದರ್ಶನಕ್ಕೆ ಶಾಸಕರು ಹಾಗೂ ಜಿ.ಪಂ. ಸಿಇಒ ಹರ್ಷಲ್ ಬೋಯರ್‌ನಾರಾಯಣ್ ರಾವ್ ಚಾಲನೆ ನೀಡಿದರು.
ನಂತರ ಚಾಮರಾಜೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಚಾಮರಾಜ ಒಡೆಯರ್ ಅವರ ಜನನ ಮಂಟಪಕ್ಕೆ ಕಲಾತಂಡಗಳೊಂದಿಗೆ ತೆರಳಿ ಜಯ ಚಾಮರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.