ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ದಸರಾ ಗಜಪಡೆಯ 7 ಆನೆಗಳ 2ನೇ ತಂಡ ಗುರುವಾರ ಅರಮನೆ ಪ್ರವೇಶಿಸಿತು. ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ದಸರಾ ವಿಶೇಷಾಧಿಕಾರಿಗಳಾದ ಜಿಲ್ಲಾಧಿಕಾರಿ ರಂದೀಪ್ ಡಿ.ನೇತೃತ್ವದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ಗಜಪಡೆಗೆ ಪೂಜೆ ಸಲ್ಲಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದ ಗೋಪಾಲಸ್ವಾಮಿ, ಕೃಷ್ಣ ಮತ್ತು ದ್ರೋಣ. ದುಬಾರೆ ಆನೆ ಶಿಬಿರದಿಂದ ವಿಕ್ರಮ್, ಗೋಪಿ, ಹರ್ಷ ಮತ್ತು ಪ್ರಶಾಂತ ಆನೆಗಳನ್ನು ಕರೆತರಲಾಗಿದ್ದು, 2ನೇ ತಂಡದಲ್ಲಿ ಬಂದ 7 ಆನೆಗಳು, ಆ.17ರಂದು ಅರಮನೆ ಪ್ರವೇಶಿಸಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ 8 ಆನೆಗಳ ಮೊದಲ ತಂಡವನ್ನು ಸೇರಿಕೊಂಡವು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರಂದೀಪ್, ಈ ಬಾರಿಯ ದಸರಾ ಮಹೋತ್ಸವದ ಜಂಬೂಸವಾರಿಗೆ 15 ಆನೆಗಳನ್ನು ಆಯ್ಕೆ ಮಾಡಲಾಗಿತ್ತು. ಆ ಪೈಕಿ ಅರ್ಜುನ ನೇತೃತ್ವದ ಮೊದಲ ತಂಡದ 8 ಆನೆಗಳು ಆ.12ರಂದು ನಾಗಾಪುರ ಗಿರಿಜನಾಶ್ರಮ ಶಾಲೆ ಬಳಿ ಗಜಪಯಣದ ಮೂಲಕ ಸ್ವಾಗತಿಸಿ, ಆ.17ರಂದು ಅರಮನೆಗೆ ಕರೆತರಲಾಯಿತು.
2ನೇ ತಂಡದ ಆನೆಗಳಿಗೂ ಅರಮನೆ ಮಂಡಳಿ ವತಿಯಿಂದ ಸ್ವಾಗತ ನೀಡಲಾಗಿದ್ದು, ಈ ಆನೆಗಳ ಮಾವುತರು ಮತ್ತು ಕಾವಾಡಿಗರ ಕುಟುಂಬಗಳಿಗೆ ವಾಸ್ತವ್ಯಕ್ಕಾಗಿ ಈಗಾಗಲೇ ಶೆಡ್‌ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮಾವುತರು ಮತ್ತು ಕಾವಾಡಿಗರ ಕುಟುಂಬಗಳಿಗೆ ನಿತ್ಯ ಬಳಕೆ ವಸ್ತುಗಳ ಕಿಟ್‌ಗಳನ್ನು ಅರಮನೆ ಮಂಡಳಿ ವತಿಯಿಂದ ನೀಡಲಾಯಿತು.
ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ದಸರಾ ಮಹೋತ್ಸಕ್ಕಾಗಿ ಕರೆತರಲಾಗಿರುವ ಎಲ್ಲಾ 15 ಆನೆಗಳೂ ಆರೋಗ್ಯದಿಂದಿದ್ದು, ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು. ಆನೆ ವೈದ್ಯ ಡಾ.ನಾಗರಾಜ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತಿತರರಿದ್ದರು.