Advertisement

ದಸರಾ ಗಜಪಡೆ ತಾಲೀಮು ಆರಂಭ

08:13 PM Aug 27, 2019 | Lakshmi GovindaRaj |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗಾಗಿ ಕಾಡಿನಿಂದ ಕರೆತರಲಾಗಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳ ಮೊದಲ ತಂಡ ಮಂಗಳವಾರ ಮೈಸೂರಿನ ರಸ್ತೆಯಲ್ಲಿ ತಾಲೀಮು ಆರಂಭಿಸಿದೆ.

Advertisement

ಕಾಡಿನ ಪ್ರಶಾಂತ ವಾತಾವರಣದಲ್ಲಿ ಸ್ವತ್ಛಂದವಾಗಿದ್ದ ಆನೆಗಳನ್ನು ನಾಡಿಗೆ ಕರೆತಂದು ನಗರದ ಗೌಜು-ಗದ್ದಲಕ್ಕೆ ಬೆದರದಂತೆ ಅವುಗಳನ್ನು ಹೊಂದಿಸಬೇಕಿರುವುದರಿಂದ ಅರಮನೆಯ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿತ್ಯ ಎರಡು ಬಾರಿ ತಾಲೀಮು ಮಾಡಿಸಲಾಗುತ್ತದೆ.

ತೂಕ ಪರಿಶೀಲನೆ: ಜಂಬೂಸವಾರಿಯಂದು ಅರ್ಜುನ 750 ಕೇಜಿ ತೂಕದ ಅಂಬಾರಿ ಹೊರಲಿದ್ದು, ಇನ್ನಿತರೆ ಆನೆಗಳಿಗೆ ಬೇರೆ ಬೇರೆ ಜವಾಬ್ದಾರಿ ಹಂಚಿಕೆ ಮಾಡಲಾಗುವುದರಿಂದ ಅವುಗಳ ಆರೋಗ್ಯ ಕಾಪಾಡಲು ಹೆಚ್ಚಿನ ನಿಗಾ ವಹಿಸಬೇಕಿರುವುದರಿಂದ ದಸರೆಯ ವರೆಗೂ ವಿಶೇಷ ಆರೈಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ತಾಲೀಮಿಗೂ ಮುನ್ನ ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಆ್ಯಂಡ್‌ ಕಂಪನಿ ಎಲೆಕ್ಟ್ರಾನಿಕ್‌ ತೂಕ ಮಾಪನ ಕೇಂದ್ರದಲ್ಲಿ ಎಲ್ಲಾ ಆರು ಆನೆಗಳ ತೂಕ ಪರಿಶೀಲನೆ ಮಾಡಿಸಲಾಯಿತು.

ಸದೃಢ ಗಜಪಡೆ: ದಸರಾ ಆನೆಗಳ ಉಸ್ತುವಾರಿ ಹೊಣೆ ಹೊತ್ತಿರುವ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜ್‌, ಮೊದಲ ತಂಡದಲ್ಲಿ ಕರೆತರಲಾಗಿರುವ ಎಲ್ಲಾ ಆರು ಆನೆಗಳೂ ಆರೋಗ್ಯವಾಗಿದ್ದು, ಆನೆಗಳ ತೂಕ ಸಹ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಇಂದಿನಿಂದ ಗಜಪಡೆಯ ತಾಲೀಮು ಆರಂಭಿಸಲಾಗಿದ್ದು, ವಿಜಯದಶಮಿ ದಿನ ಲಕ್ಷಾಂತರ ಜನರ ಮಧ್ಯೆ ಆನೆಗಳು ಸುಮಾರು 5 ಗಂಟೆಗಳ ಕಾಲ 5 ಕಿ.ಮೀ. ದೂರವನ್ನು ಕ್ರಮಿಸಬೇಕಿರುವುದರಿಂದ ತಾಲೀಮಿಗೆ ಮುನ್ನ ಮತ್ತು ಜಂಬೂಸವಾರಿ ಹಿಂದಿನ ದಿನ ಗಜಪಡೆಯ ದೈಹಿಕ ಸಾಮರ್ಥ್ಯ ತಿಳಿಯಲು ತೂಕ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಆರೈಕೆ: ಸೋಮವಾರದಿಂದಲೇ ಆನೆಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಮಾವುತರು ಮತ್ತು ಕಾವಾಡಿಗಳು ನಿತ್ಯ ಆನೆಗಳ ಮೈತೊಳೆದು ಹಣೆಗೆ ಹರಳೆಣ್ಣೆ ಹಚ್ಚಿ, ಭತ್ತದ ಕುಸುರೆ, ತೆಂಗಿನ ಕಾಯಿ, ಬೆಲ್ಲ , ಮುದ್ದೆ, ಬೆಣ್ಣೆ ಸೇರಿದಂತೆ ಪೌಷ್ಟಿಕ ಆಹಾರದ ಜೊತೆಗೆ ಹೆಚ್ಚಾಗಿ ಹಸಿರು ಮೇವನ್ನು ತಿನ್ನಿಸಿ ವಿಶೇಷ ಆರೈಕೆ ಮಾಡಲಾಗುತ್ತದೆ.

Advertisement

ದಸರಾ ಗಜಪಡೆಯ ಎರಡನೇ ತಂಡವನ್ನು ಮೈಸೂರಿಗೆ ಕರೆತರುವ ಸಂಬಂಧ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಚರ್ಚಿಸಿ ದಿನಾಂಕ ನಿಗದಿಪಡಿಸಲಿದ್ದಾರೆ. ಎರಡೂ ತಂಡಗಳ ಆನೆಗಳು ಒಟ್ಟಾಗಿ ತಾಲೀಮು ಆರಂಭಿಸಿದ ನಂತರದ ದಿನಗಳಲ್ಲಿ ಮರಳು ಮೂಟೆ ಹೊರುವ, ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಗುವುದು ಎಂದು ಅವರು ತಿಳಿಸಿದರು.

200 ಕೇಜಿ ತೂಕ ಹೆಚ್ಚಿಸಿಕೊಂಡ ಗಜಪಡೆಯ ಕ್ಯಾಪ್ಟನ್‌ ಅರ್ಜುನ: ಕಳೆದ ವರ್ಷ ದಸರಾ ಮುಗಿಸಿ ಮೈಸೂರಿನಿಂದ ತೆರಳುವಾಗ 5,600 ಕೇಜಿ ಇದ್ದ ಗಜಪಡೆಯ ಕ್ಯಾಪ್ಟನ್‌ ಅರ್ಜುನ ಒಂದು ವರ್ಷದಲ್ಲಿ 200 ಕೇಜಿ ತೂಕ ಹೆಚ್ಚಿಸಿ ಕೊಂಡಿದ್ದಾನೆ. ಉಳಿದಂತೆ ವರಲಕ್ಷ್ಮೀ 3,510 ಕೇಜಿ, ಧನಂಜಯ 4,460 ಕೇಜಿ, ವಿಜಯ 2,825 ಕೇಜಿ, ಅಭಿಮನ್ಯು 5,145 ಕೇಜಿ, ಇದೇ ಮೊದಲ ಬಾರಿಗೆ ದಸರೆಗೆ ಕರೆತರಲಾಗಿರುವ ಈಶ್ವರ ಆನೆ 3,995 ಕೇಜಿ ತೂಕವಿದೆ.

Advertisement

Udayavani is now on Telegram. Click here to join our channel and stay updated with the latest news.

Next