ಗಂಗಾವತಿ: ನಾಡಹಬ್ಬ ಮಹಾನವಮಿಯನ್ನು ನಾಡಿನಾದ್ಯಂತ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಹಾನವಮಿಯನ್ನು ನಾಡಹಬ್ಬವಾಗಿ ಆಚರಿಸಲು ನಾಂದಿ ಹಾಡಿದ್ದೇ ಕಂಪಿಲರಾಯನ ಕುಮ್ಮಟದುರ್ಗ ಗಂಡುಗಲಿ ಕುಮಾರ ರಾಮನ ರಾಜ್ಯದಲ್ಲಿ ಎಂದು ಇತಿಹಾಸಕಾರರ ಅಭಿಪ್ರಾಯ ಪಟ್ಟಿದ್ದಾರೆ.
ಕ್ರಿ.ಶ. 13ನೇ ಶತಮಾನದಲ್ಲಿ ಕಂಪಿಲರಾಯನ ಕುಮ್ಮಟದುರ್ಗದಲ್ಲಿ ಮಹಾನವಮಿ ಹಬ್ಬವನ್ನು ವೈಭವಯುತವಾಗಿ ಆಚರಿಸಲಾಗುತ್ತಿತ್ತು. ಪ್ರತಿ ಯುದ್ಧ ಸಂದರ್ಭದಲ್ಲೂ ಗ್ರಾಮದೇವತೆಯನ್ನು ಆರಾಧಿಸುವ ಮೂಲಕ ಸಮರಕ್ಕೆ ದೇವತೆ ಕೃಪೆ ಬೇಡುತ್ತಿದ್ದರು. ಕುಮ್ಮಟದುರ್ಗ ಆರಾಧ್ಯ ದೈವ ಹೇಮಗುಡ್ಡದ ದುರ್ಗಾ ಪರಮೇಶ್ವರಿಯನ್ನು ಪೂಜಿಸಲಾಗುತ್ತಿತ್ತು. ಕುಮ್ಮಟದುರ್ಗದ ಅರಸರ ನಂತರ ವಿಜಯನಗರದ ಸಾಮಂತರಾದ ಕನಕಗಿರಿ ಪಾಳೆಗಾರರು ಹೇಮಗುಡ್ಡದಲ್ಲಿರುವ ದುರ್ಗಾ ಪರಮೇಶ್ವರಿ, ಲಕ್ಷೀ ನರಸಿಂಹ ಮತ್ತು ಈಶ್ವರ ದೇಗುಲಗಳನ್ನು ಜೀರ್ಣೋದ್ಧಾರ ಮಾಡಿ ಪ್ರತಿ ವರ್ಷ ಶರನ್ನವರಾತ್ರಿಯ ಸಂದರ್ಭದಲ್ಲಿ 9 ದಿನಗಳ ಕಾಲ ದೇವಿ ಆರಾಧನೆ ಮಾಡಿ ಕೊನೆ ದಿನ ನಾಡಿನ ಸಾಂಸ್ಕೃತಿಕ ಕಲೆಯ ಮೆರವಣಿಗೆಯೊಂದಿಗೆ ಆನೆ ಮೇಲೆ ಅಂಬಾರಿಯಲ್ಲಿ ದೇವಿಯ ಮೂರ್ತಿ ಮೆರವಣಿಗೆ ಮಾಡುತ್ತಿದ್ದರು.
ಕುಮ್ಮಟ ದುರ್ಗವನ್ನು ದೆಹಲಿ ಸುಲ್ತಾನರು ನಾಶ ಮಾಡಿದ ನಂತರ 1336ರಲ್ಲಿ ಆನೆಗೊಂದಿಯಲ್ಲಿ ವಿಯನಗರ ಸಾಮ್ರಾಜ್ಯ ಸ್ಥಾಪನೆಯಾಗುವ ತನಕ ಮಹಾನವಮಿ ಹಬ್ಬ ಆಚರಣೆ ಸ್ಥಗಿತವಾಗಿತ್ತು. ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ನಂತರ ಸಂಗಮ ವಂಶದ ದೊರೆಗಳ ಕಾಲದಲ್ಲಿ ಮಹಾನವಮಿಯನ್ನು ಪುನಃ ವಿಜೃಂಭಣೆಯಿಂದ ಆಚರಿಸಲಾಯಿತು. 9 ದಿನಗಳ ಕಾಲ ಈಗಿನ ಹಾಳು ಹಂಪಿಯಲ್ಲಿರುವ ಮಹಾನವಮಿ ದಿಬ್ಬದ ಹತ್ತಿರ ಶರನ್ನವರಾತ್ರಿ ಕಾರ್ಯಕ್ರಮಗಳು ಜರುಗುತ್ತಿದ್ದವು.
ಯುದ್ಧಕಲೆ ಪ್ರದರ್ಶನ, ಶಸ್ತ್ರಾಸ್ತ್ರಗಳ ಪೂಜೆ ನಿರಂತರ ನಡೆದು ಕೊನೆಯ ದಿನ ಸೀಮೋಲ್ಲಂಘನ ಮಾಡಿ ಬನ್ನಿ ವೃಕ್ಷದ ಎಲೆಗಳನ್ನು ಪರಸ್ಪರರು ವಿನಿಯಮಯ ಮಾಡಿಕೊಳ್ಳುವ ಪದ್ಧತಿ ಇಂದಿಗೂ ಇದೆ. ವಿಜಯನಗರ ಸಾಮ್ರಾಜ್ಯ ಪತನ ನಂತರ ಮೈಸೂರಿನಲ್ಲಿ ನಿರಂತರ ಮಹಾನವಮಿ ದಸರಾ ಎಂದು ಆಚರಿಸಲಾಗುತ್ತಿದೆ.
ಕುಮ್ಮಟದುರ್ಗದಲ್ಲಿ ಆರಂಭವಾದ ಮಹಾನವಮಿ ದಸರಾ ಹಬ್ಬ ಇಂದಿಗೂ ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ಕುಮ್ಮಟದುರ್ಗ ಆರಾಧ್ಯ ದೇವತೆ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಾಲಯವನ್ನು ನಾಲ್ಕು ದಶಕಗಳ ಹಿಂದೆ ಮಾಜಿ ಸಂಸದ ಎಚ್.ಜಿ. ರಾಮುಲು ಕುಟುಂಬದವರು ಜೀರ್ಣೋದ್ಧಾರ ಮಾಡಿ ಅಂದಿನಿಂದ ಪ್ರತಿವರ್ಷ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 9 ದಿನಗಳ ಕಾಲ ದೇವಿ ಪುರಾಣ, ರಥೋತ್ಸವ, ಹೋಮ ಹವನ ನಡೆಸಲಾಗುತ್ತದೆ. ಕೊನೆಯ ದಿನ ಬೆಳಗ್ಗೆ ಉಚಿತ ಸಾಮೂಹಿಕ ವಿವಾಹ, ಸಂಜೆ ನಾಡಿನ ವಿವಿಧ ಕಲಾ ತಂಡಗಳ ಮಧ್ಯೆ ಆನೆಯ ಮೇಲೆ ಅಂಬಾರಿಯಲ್ಲಿ ದೇವಿಯ ಮೂರ್ತಿಯನ್ನಿರಿಸಿ ಕಲಾ ಮೆರವಣಿಗೆ ನಡೆಯುತ್ತದೆ. ಆನೆಗೊಂದಿಯ ವಾಲೀಕಿಲ್ಲಾದಲ್ಲಿರುವ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ದುರ್ಗಾದೇವಿ ದೇಗುಲದಲ್ಲಿ ಶರನ್ನವರಾತ್ರಿಯನ್ನು ಆಚರಿಸಲಾಗುತ್ತಿದೆ. ಇಲ್ಲಿಯೂ ಕೊನೆಯ ದಿನ ಆನೆ ಅಂಬಾರಿ ಮೆರವಣಿಗೆ ಜರುಗುತ್ತದೆ.
700 ವರ್ಷಗಳ ಹಿಂದೆ ಆರಂಭವಾದ ಮಹಾನವಮಿ ದಸರಾ ಹಬ್ಬ ಪರಂಪರೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವುದು ಅಗತ್ಯ. ಸರಕಾರ ಮೈಸೂರು ದಸರಾ ಹಬ್ಬಕ್ಕೆ ಕೊಡುವ ಮಹತ್ವ ಹೇಮಗುಡ್ಡ ಮತ್ತು ಆನೆಗೊಂದಿ ವಾಲೀಕಿಲ್ಲಾ ಶರನ್ನವರಾತ್ರಿ ಹಬ್ಬಕ್ಕೂ ನೀಡಬೇಕು.
-ಕೆ.ನಿಂಗಜ್ಜ