Advertisement

Dasara; ಬರಗಾಲದ ನಡುವೆಯೂ ಜನರ ಸಂಭ್ರಮ ಸಂತೋಷ ತಂದಿದೆ : ಸಿಎಂ

10:27 PM Oct 23, 2023 | Team Udayavani |

ಮೈಸೂರು : ದಸರಾ ಎಂಬುದು ನಾಡ ಹಬ್ಬ, ಜನರ ಹಬ್ಬ. ಆದರೆ ಈ ಬಾರಿ ಬರಗಾಲವಿದೆ. ಆದರೂ ಜನ ದಸರಾದ ಸಂಭ್ರಮವನ್ನು ಸವಿಯುತ್ತಿರುವುದು ಸಂತೋಷದ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಸೋಮವಾರ ಮೈಸೂರು ಜಿಲ್ಲಾಡಳಿತ ಮತ್ತು ಭಾರತೀಯ ವಾಯುಪಡೆ ವತಿಯಿಂದ ನಾಡಹಬ್ಬ ದಸರಾ 2023 ವೈಮಾನಿಕ ಪ್ರದರ್ಶನ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೈಸೂರು ದಸರಾ ಸಂದರ್ಭದಲ್ಲಿ ಏರ್ ಶೋ ಏರ್ಪಡಿಸಲು ಕೇಂದ್ರ ಸಚಿವರನ್ನು ಕೋರಲಾಗಿತ್ತು. ಅದರಂತೆ ಏರ್ ಶೋವನ್ನು ಏರ್ಪಡಿಸಲಾಗಿದೆ. ಹಿಂದೆ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಸಚಿವರಾಗಿದ್ದಾಗ, ಇದೇ ರೀತಿ ಏರ್ ಶೋ ವನ್ನು ಏರ್ಪಡಿಸಲಾಗಿತ್ತು. ದಸರಾ ರಜೆಯ ಸಂದರ್ಭವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ, ಏರ್ ಶೋವನ್ನು ವೀಕ್ಷಿಸುತ್ತಿದ್ದಾರೆ. ಈ ಬಾರಿ ಬರಗಾಲವಿದೆ. ಆದರೂ ಜನ ದಸರಾದ ಸಂಭ್ರಮವನ್ನು ಸವಿಯುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ದೀಪಾಲಂಕಾರದ ವ್ಯವಸ್ಥೆ ವೀಕ್ಷಣೆ
ನಾಳೆ ವಿಜಯದಶಮಿಯಂದು ಜಂಬೂ ಸವಾರಿ ಇದೆ. ಮಧ್ಯಾಹ್ನ ನಂದಿಪೂಜೆಯ ನಂತರ ಜಂಬೂಸವಾರಿ ಪ್ರಾರಂಭವಾಗುತ್ತದೆ. ಇಂದು ನಾನು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮೈಸೂರು ನಗರದ ಸಿಟಿರೌಂಡ್ಸ್ ಮಾಡಿ ದೀಪಾಲಂಕಾರದ ವ್ಯವಸ್ಥೆಯನ್ನು ವೀಕ್ಷಿಸಲಿದ್ದೇನೆ ಎಂದರು.

Advertisement

ಮಹಾರಾಣಿ ಕಾಲೇಜು ಕಟ್ಟಡ, ಹಾಸ್ಟೆಲ್ ನಿರ್ಮಾಣ
ಮೈಸೂರು ಮಹಾರಾಣಿ ಕಾಲೇಜಿನ ವಿಜ್ಞಾನ , ಕಲಾ ಕಾಲೇಜು, ಹಾಸ್ಟೆಲ್ ಕಟ್ಟಡಗಳನ್ನು ಒಟ್ಟಾರೆ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸೂಚಿಸಲಾಗಿದ್ದು, ಇದರಿಂದ ಸುಮಾರು 2000 ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಲಾಗಿದೆ. ಹಿಂದಿನ ಸರ್ಕಾರದವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದರು.

ಕುಡಿಯುವ ನೀರು, ಮೇವಿಗೆ ತೊಂದರೆಯಾಗದಂತೆ ಕ್ರಮ
ಬರಗಾಲದ ಕಾಮಗಾರಿಗಳು ಸಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಹಾಗೂ ಮೇವು ಬೆಳೆಯಲು ಹಾಗೂ ಸಂಗ್ರಹಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿದ್ಯುತ್ ಬೇಡಿಕೆ ಹೆಚ್ಚಳ
ಈ ಬಾರಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 10 ರಿಂದ 15 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿತ್ತು. ಆದರೆ ಈ ಬಾರಿ ಬೇಡಿಕೆ 15 ರಿಂದ 16 ಸಾವಿರ ಮೆಗಾವ್ಯಾಟ್ ಗೆ ಏರಿಕೆಯಾಗಿದೆ. 32000 ಮೆ.ವಾ ಉತ್ಪಾದಿಸುವ ಸಾಮಥ್ರ್ಯವಿದ್ದರೂ ಕೂಡ , ಆ ಪ್ರಮಾಣದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಟೀಕಿಸುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಆರೋಪ ಮಾಡುವುದು ಬಿಟ್ಟರೆ ಬೇರೆ ಏನೂ ತಿಳಿದಿಲ್ಲ ಎಂದರು.

ರೈತರಿಗೆ ವಿದ್ಯುತ್ ಪೂರೈಕೆ
ಈ ಬಾರಿ ಮಳೆಯ ಅಭಾವದಿಂದಾಗಿ ರೈತರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ರೈತರಿಗೆ ಐದು ಗಂಟೆಗಳ ನಿರಂತರ ವಿದ್ಯುತ್ ಪೂರೈಕೆಗೆ ಆದೇಶ ನೀಡಲಾಗಿದೆ. ಆದರೆ ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಯ ಭತ್ತ ಬೆಳೆಯುವ ರೈತರಿಗೆ ಏಳು ಗಂಟೆ ವಿದ್ಯುತ್ ನೀಡಲು ಆದೇಶಿಸಿದೆ. ಸುಮಾರು 2 ಸಾವಿರ ವ್ಯಾಟ್ ವರೆಗೆ ವಿದ್ಯುತ್ ಖರೀದಿ ಮಾಡಬೇಕಾಗಿದೆ. ಕೋಜನರೇಶನ್ ವ್ಯವಸ್ಥೆಯ ಮೂಲಕ ವಿದ್ಯುತ್ ಉತ್ಪಾದನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸುಳ್ಳು ಆರೋಪಗಳು
ಕಲ್ಲಿದ್ದಲ್ಲಿನ ಗುಣಮಟ್ಟದ ಮೇಲೆ ವಿದ್ಯುತ್ ಉತ್ಪಾದನೆಯ ಪ್ರಮಾಣ ನಿಗದಿಯಾಗುತ್ತದೆ. ಅದರಲ್ಲಿ ಕೆಲವೊಮ್ಮೆ 50 ರಿಂದ 60 ಮೆ.ವ್ಯಾ ವಿದ್ಯುತ್ ಮಾತ್ರ ಉತ್ಪಾದನೆ ಸಾಧ್ಯವಾಗುತ್ತದೆ. ಈ ಎಲ್ಲ ವಿಷಯಗಳು ಕೇವಲ ಆರೋಪ ಮಾಡುವ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ತಿಳಿದಿರಬೇಕು . ಅವರು ಮಾಡುವ ಆರೋಪಗಳೆಲ್ಲವೂ ಸುಳ್ಳು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next