ಮೈಸೂರು: ಕಳೆದೆರೆಡು ವರ್ಷಗಳಿಂದ ಜಂಬೂಸವಾರಿ ಮಾರ್ಗದಿಂದ ದೂರವುಳಿದಿದ್ದ ದಸರಾ ಗಜಪಡೆಗೆ ದೀಪಾಲಂಕಾರದ ಬೆಳಕಿನ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿ ನವರಾತ್ರಿ ಆರಂಭಕ್ಕೂ 5 ದಿನ ಮುನ್ನವೇ ದಸರಾ ಮೆರವಣಿಗೆ ಸಾಗುವ ಮಾರ್ಗ (ರಾಜಮಾರ್ಗ)ದಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಿಕೊಡುವಂತೆ ಅರಣ್ಯ ಇಲಾಖೆ ಕೋರಿಕೆ ಸಲ್ಲಿಸಿದೆ.
ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಜಂಬೂಸವಾರಿ ಮಾರ್ಗದಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಿಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತವನ್ನು ಕೋರಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆ ಎರಡು ವರ್ಷದಿಂದ ಅರಮನೆ ಆವರಣಕ್ಕಷ್ಟೇ ದಸರಾ ಮಹೋತ್ಸವ ಹಾಗೂ ಜಂಬೂಸವಾರಿ ಸೀಮಿತಗೊಂಡಿತ್ತು. ಹಾಗಾಗಿ ದಸರಾ ಆನೆಗಳಿಗೆ ಜಂಬೂಸವಾರಿ ಮಾರ್ಗದ ಬಗ್ಗೆ ಪರಿಚಯ ಮಾಡಿಕೊಳ್ಳುವ ಅಗತ್ಯವೂ ಹಾಗೂ ಅನಿವಾರ್ಯವೂ ಆಗಿರುವುದರಿಂದ ಹೆಚ್ಚುವರಿಯಾಗಿ 5 ದಿನದ ಮೊದಲೇ ದೀಪಾಲಂಕಾರ ಮಾಡಿಕೊಡುವಂತೆ ಕೋರಲಾಗಿದೆ.
ಈಗಾಗಲೇ ಮೊದಲ ತಂಡದ ಆನೆಗಳು ಸಂಜೆ ವೇಳೆ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿದ್ದು, ಬೀದಿ ದೀಪ, ವಾಹನಗಳ ಲೈಟ್ ಬೆಳಕಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆಯಾದರೂ, ದೀಪಾಲಂಕಾರದ ಬೆಳಕು ಹೆಚ್ಚಾಗಿ ಪ್ರವರ್ದಿಸುವುದರಿಂದ ಅದರ ಬೆಳಕಿನ ವಾತಾವರಣಕ್ಕೆ ಹೊಸ ಆನೆಗಳು ಹೊಂದಿಕೊಳ್ಳುವಂತೆ ಮಾಡಲು ಐದು ದಿನ ಮುಂಚಿತವಾಗಿ ದೀಪಾಲಂಕಾರ ವ್ಯವಸ್ಥೆಗೆ ಯೋಚಿಸಲಾಗಿದೆ.
ನಾಳೆಯಿಂದ ಮರದ ಅಂಬಾರಿ ತಾಲೀಮು: ಮೂರನೇ ಹಂತದ ಭಾರ ಹೊರುವ ತಾಲೀಮು ಸೆ.4ರಂದು ಪೂರ್ಣಗೊಳ್ಳಲಿದ್ದು, ಸೆ.5ರಿಂದ 5ನೇ ಹಂತದ ತಾಲೀಮಿನಿಲ್ಲಿ ಮರದ ಅಂಬಾರಿ ಹೊರಿಸಿ ತಾಲೀಮಿಗೆ ಕರೆದೊಯ್ಯಲಾಗುತ್ತದೆ. ಮೊದಲ ತಂಡದಲ್ಲಿ ಆಗಮಿಸಿರುವ ಗಂಡಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ, ಭೀಮ ಹಾಗೂ ಮಹೇಂದ್ರ ಆನೆಗಳಿಗೂ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲಾಗುತ್ತದೆ.
ಇಂದು ದಸರಾ ಪ್ರಾಯೋಜಕತ್ವ ಸಭೆ: ಅದ್ಧೂರಿ ದಸರಾ ಮಹೋತ್ಸವ ಆಚರಣೆಗೆ ಪ್ರಾಯೋಜಕತ್ವ ಪಡೆಯಲು ಮುಂದಾಗಿರುವ ಜಿಲ್ಲಾಡಳಿತ ಸೆ.3ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಸರಾ ಪ್ರಾಯೋಜಕತ್ವ ಸಭೆ ಕರೆಯಲಾಗಿದೆ. ಉದ್ಯಮಿಗಳು, ಕಾರ್ಖಾನೆಗಳ ಮಾಲೀಕರು, ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಆನೆಗಳಿಗೆ ದೀಪಾಲಂಕಾರ ಹಾಗೂ ಜನಜಂಗುಳಿಯ ಅಭ್ಯಾಸವಾದರೆ ಜಂಬೂಸವಾರಿಯಲ್ಲಿ ಆನೆಗಳು ಸರಾಗವಾಗಿ ಸಾಗಲಿದೆ. ಏಕಾಏಕಿ ದೀಪಾಲಂಕಾರದ ಬೆಳಕಿನೊಂದಿಗೆ ಜನಜಂಗುಳಿ ಕಂಡರೆ ಗಾಬರಿಯಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಹೆಚ್ಚುವರಿಯಾಗಿ 5 ದಿನಗಳ ಕಾಲ ದೀಪಾಲಂಕಾರ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ.
– ಡಾ.ವಿ.ಕರಿಕಾಳನ್, ಡಿಸಿಎಫ್