Advertisement

ಸಡಗರ ಸಂಭ್ರಮದ ನಾಡಹಬ್ಬ ದಸರೆ

11:40 AM Sep 30, 2019 | Suhan S |

ಬಾಗಲಕೋಟೆ: ರಾಜ್ಯದ ನಾಡ ಹಬ್ಬ ದಸರಾ ಉತ್ಸವ ಜಿಲ್ಲೆಯಾದ್ಯಂತ ಅದ್ಧೂರಿ ಆಚರಣೆಗೆ ಸಜ್ಜುಗೊಂಡಿದ್ದು, ಒಂಬತ್ತು ದಿನಗಳ ಕಾಲ ವಿವಿಧ ದೇವಸ್ಥಾನ, ಮನೆ ಮನಗಳಲ್ಲಿ ಸಂಭ್ರಮ ಸಡಗರ ಮನೆ ಮಾಡಲಿದೆ.

Advertisement

ಸೆ. 29ರಂದು ದೀಪ ಹಾಕುವ ಮೂಲಕ ಘಟಸ್ಥಾಪನೆ ಮಾಡಿ ದಸರಾ ಉತ್ಸವಕ್ಕೆ ಚಾಲನೆ ದೊರೆತಿದೆ. ಪ್ರತಿದಿನ ಬೆಳಗ್ಗೆ ವಿಶೇಷ ಪೂಜೆ, ದೇವರ ಮೂರ್ತಿಗಳಿಗೆ ಅಲಂಕಾರ, ಆರತಿ, ಅಭಿಷೇಕ ಜರುಗಲಿದೆ, ಮಂತ್ರಘೋಷಗಳು, ಹೋಮ ಹವನ ನಡೆಯಲಿವೆ.

ವೆಂಕಟ ಪೇಟೆಯ ವೆಂಕಟೇಶ್ವರ ದೇವಸ್ಥಾನ, ಕಿಲ್ಲಾ ಅಂಬಾಭವಾನಿ ಮಂದಿರ, ಕಾಳಿಕಾ ದೇವಸ್ಥಾನ, ಲಕ್ಷ್ಮೀ ದೇವಸ್ಥಾನ,ಲಕ್ಷ್ಮೀ ವೆಂಕಟೇಶ, ದುರ್ಗಾದೇವಿ ದೇವಸ್ಥಾನದಲ್ಲಿ ರೂಪಾಲಂಕಾರ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹಬ್ಬದ ನಿಮಿತ್ತ ದೇವಸ್ಥಾನಗಳನ್ನು ಶೃಂಗರಿಸಲಾಗಿದ್ದು, ಜಗಮಗಿಸುವ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ನಾನಾ ಬಗೆಯ ಹೂಗಳಿಂದ ಪ್ರತಿದಿನ ಅಲಂಕಾರ ನಡೆಯಲಿದೆ.

ಕಲ್ಯಾಣೋತ್ಸವ, ಪಂಡಿತರಿಂದ ಪ್ರವಚನಗಳು, ದಸರಾ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ನಾಮರಿಂದ ದಾಸವಾಣಿ ಪದ, ಸುಗಮ ಸಂಗೀತ, ನೃತ್ಯ ಮೇಳೈಸಲಿದೆ. ಮಕ್ಕಳು, ಹಿರಿಕರು, ಕುಟುಂಬ ಸದಸ್ಯರು ಒಟ್ಟಾಗಿ ದಾಂಡಿಯಾ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ವೈಭವ ಕಳೆಗಟ್ಟಿಲಿದ್ದು, ಹಬ್ಬದ ಸಂಭ್ರಮ ಇಮ್ಮಡಿಗೊಳ್ಳಲಿದೆ. ಇಷ್ಟಾರ್ಥ ಸಿದ್ಧಿಗಾಗಿ ಸಹಸ್ರಾರು ಭಕ್ತರು ಉಪವಾಸ ವೃತಾಚರಣೆ ಸೇರಿದಂತೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ನಗರದ ವಿವಿಧೆಡೆ ನವರಾತ್ರಿ ಉತ್ಸವದ ಸಡಗರದಿಂದ ನಡೆಯಲಿದ್ದು, ದಸರಾ ಉತ್ಸವ ಆಚರಣೆಗೆ ಅಂತಿಮ ಸಿದ್ಧತೆ ಪೂರ್ಣಗೊಂಡಿವೆ. ವೆಂಕಟಪೇಟೆ, ಹೊಸಪೇಟೆ, ನವನಗರದ ಸತ್ಯಬೋಧರಾಯರ ಮಠ, 57ನೇ ಸೆಕ್ಟರ್‌ನಲ್ಲಿರುವ ಕಿಲ್ಲಾ ವೆಂಕಟೇಶ್ವರ ದೇವಸ್ಥಾನ, ನವನಗರದಲ್ಲಿರುವ ಅಂಬಾಭವಾನಿ ಮಂದಿರ, ಕಾಳಿಕಾ ದೇವಸ್ಥಾನ,ಲಕ್ಷ್ಮೀ ದೇವಸ್ಥಾನದಲ್ಲಿ ರೂಪಾಲಂಕಾರ, ನಾನಾ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಾಗಲಿವೆ. ಕಿಲ್ಲಾ ಗಲ್ಲಿಯ ಲವಂಗಿಮಠದ ಹತ್ತಿರ ಭವಾನಿ ತರುಣ ಸಂಘ, ಸ್ಟೇಶನ್‌ ರಸ್ತೆಯಲ್ಲಿ ಭವಾನಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿನಿತ್ಯ ಪಂಚಾಮೃತ, ನೈವೇದ್ಯ, ಘ್ರತನಂದಾದೀಪ, ತೈಲ ನಂದಾದೀಪ ನಾನಾ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next