ಶ್ರೀಕೃಷ್ಣನ ಬಾಲಲೀಲೆಗಳನ್ನು ದಾಸರು ವ್ಯಾಖ್ಯನಿಸಿರುವ ದಾಸ ಸಾಹಿತ್ಯದ ಕೀರ್ತನೆಗಳ ಮೂಲಕವಾಗಿ ಹಾಡಿ ಹರಿ ಮಹಿಮೆಯನ್ನು ಅನುಪಮವಾದ ಗಾಯನದಲ್ಲಿ ಉಣಬಡಿಸಿದರು.
ಮೂಡಬಿದ್ರೆಯ ಅನುಪಮಾ ರಾಮದಾಸ್ ಶೆಣೈ ಅವರ ದಾಸ ಕೀರ್ತನೆ ಮಾ. 29ರಂದು ಉಡುಪಿ ಕೃಷ್ಣ ಮಠದಲ್ಲಿ ನಡೆಯಿತು. “ಶ್ರೀಕೃಷ್ಣ ಲೀಲೋತ್ಸವ’ ಎನ್ನುವ ವಿನೂತನ ಪರಿಕಲ್ಪನೆಯಲ್ಲಿ ಶ್ರೀಕೃಷ್ಣನ ಬಾಲಲೀಲೆಗಳನ್ನು ದಾಸರು ವ್ಯಾಖ್ಯನಿಸಿರುವ ದಾಸ ಸಾಹಿತ್ಯದ ಕೀರ್ತನೆಗಳ ಮೂಲಕವಾಗಿ ಹಾಡಿ ಹರಿ ಮಹಿಮೆಯನ್ನು ಅನುಪಮವಾದ ಗಾಯನದಲ್ಲಿ ಉಣಬಡಿಸಿದರು.
ವಿಘ್ನ ವಿನಾಶಕನ ಸ್ತುತಿಯೊಂದಿಗೆ ಭಕ್ತಿಗಾಯನವನ್ನು ಪ್ರಾರಂಭಿಸಿದರು. ಸಾಂದರ್ಭಿಕವಾಗಿ ಪುರಂದರ ದಾಸರ ಕೀರ್ತನೆ ಭಾಗ್ಯದ ಲಕ್ಷ್ಮೀ ಬಾರಮ್ಮ… ಹಾಗೂ ಜಗನ್ನಾಥ ದಾಸರ ಬಂದಳು ನೋಡೆ, ಬಂದಳು ನೋಡೆ… ಮಂದಿರದೊಳು, ಭಾಗ್ಯದಾ ಲಕ್ಷ್ಮೀ ಬಂದಳು ನೋಡೆ… ಕೀರ್ತನೆಯನ್ನು ಹಾಡಿದರು. ಆ ಬಳಿಕ ಪುರಂದರ ದಾಸರ ಆರಿಗೆ ವಧುವಾದೆ… ಅಂಬುಜಾಕ್ಷಿ ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕುಮಿ… ಕೀರ್ತನೆಯೊಂದಿಗೆ ಶ್ರೀಕೃಷ್ಣ ಲೀಲೋತ್ಸವ ವಿಭಿನ್ನ ವಿನೂತನ ಭಕ್ತಿಗಾನ ಕೀರ್ತನಾಮಂಜರಿಗೆ ಚಾಲನೆ ನೀಡಿದರು. ಶ್ರೀ ಶ್ಯಾಮಸುಂದರ ದಾಸರ ಎಂದು ಕಾಂಬೆನೋ ನಂದ ಗೋಪನ ಕಂದ ಶ್ರೀ ಗೋವಿಂದನಾ, ಮಂದರಾಚನ ಧರನೆ ಯದುಕುಲ ಚಂದ ಗುಣ ಗುಣ ಸಾಂದ್ರನಾ… ಕೀರ್ತನೆ ಮತ್ತೆ ಮತ್ತೆ ಕೇಳುವಂತಿತ್ತು. ರಾಗದ ಅಲಾಪಗಳು ಏರಿಳಿತಗಳು ಶಾಸ್ತ್ರಬದ್ಧವಾಗಿ ಗಾಯನ ಕಲೆಯ ಚೌಕಟ್ಟಿನೊಳಗಿದ್ದವು. ಪ್ರತಿ ಕೀರ್ತನೆಗಳ ಪಲ್ಲವಿ ಚರಣಗಳ ಹಾಡುವ ಮೊದಲು ನೀತಿ ಸಾರುವ ಉಗಾ-ಭೋಗಗಳನ್ನು ಉಚ್ಚರಿಸಿ ಜಿಜ್ಞಾಸುಗಳಿಗೆ ಧರ್ಮನೀತಿ ಭೋಧಿಸಿದರು.
ಪುರಂದರ ದಾಸರ ಪ್ರಸಿದ್ಧ ಕಿರ್ತನೆ ವೇಂಕಟರಮಣನೇ ಬಾರೋ… ಶೇಷಚಲವಾಸನೇ ಬಾರೋ…ಅನುಪಮಾರ ಕಂಠಸಿರಿಯಿಂದ ಅನುಪಮವಾಗಿ ಹೊಮ್ಮಿತು. ಮತ್ತೂಂದು ಕೀರ್ತನೆ ಅಳುವುದ್ಯಾತಕೋ ರಂಗಯ್ನಾ… ಅತ್ತರಂಜಿಪಾ ಗುಮ್ಮ… ಗಾಯಕಿ ಈ ಕೀರ್ತನೆಯನ್ನು ನವರಸ ಭಾವ ಅಭಿವ್ಯಕ್ತಿಪಡಿಸಿ ಹಾಡಿ ಕೀರ್ತನಾ ಸಾಹಿತ್ಯವನ್ನು ಮೆರಗುಗೊಳಿಸಿದರು. ಕರುಣಾರಸದಲ್ಲಿ ಹೊರ ಹೊಮ್ಮಿದ ಈ ಕೀರ್ತನೆ ಮೆಚ್ಚುಗೆಗೆ ಪಾತ್ರವಾಯಿತು. ಹೀಗೆ ಗಾಯಕಿ ಗುಮ್ಮನ ಕರೆಯದಿರೋ…, ಓಡಿ ಓಡಿ ಬಂದು… ಹಾಗೂ ಕೈಯ ತೋರೋ ಕರುಣೆಗಳ ರಸನೆ… ಕೈಯ ತೋರೋ… ಕೀರ್ತನೆಗಳನ್ನು ಹಾಡಿ ಕೃಷ್ಣನ ಬಾಲಲೀಲೆಗಳನ್ನು ಮನ ಮುಟ್ಟುವಂತೆ ಅನಾವರಗೊಳಿಸಿದರು.
ಮೂರು ತಾಸಿನ ಅವಧಿಯಲ್ಲಿ ಗಾಯಕಿ ಹರಿದಾಸರುಗಳು, ಹರಿಯ ಕುರಿತಾಗಿ ರಚಿಸಿದ ಸುಮಾರು 25 ಕೀರ್ತನೆಗಳನ್ನು ಹಾಡಿದರು. ಕೊನೆಯ ಕೀರ್ತನೆಯನ್ನು ಭೈರವಿ ರಾಗದಲ್ಲಿ ಹಾಡಿ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮವನ್ನು ಕೃಷ್ಣಾರ್ಪಣಾಗೊಳಿಸಿದರು. ತಬಲದಲ್ಲಿ ವಿಘ್ನೇಶ ಪ್ರಭು ಮೂಡಬಿದ್ರೆ, ತಾಳದಲ್ಲಿ ನಂದ ಕುಮಾರ ಮೂಡಬಿದ್ರೆ, ಹಾರ್ಮೋನಿಯಂನಲ್ಲಿ ಪ್ರಸಾದ್ ಉಡುಪಿ ಸಹಕರಿಸಿದರು.
ತಾರಾನಾಥ್ ಮೇಸ್ತ ಶಿರೂರು