Advertisement
ಹೌದು. ಸೂಪರ್ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡಿ, ಸೂಪರ್ ಮಾಡಲು ನೂರಾರು ಕೋಟಿ ರೂ.ಗಳ ಯೋಜನೆ ಸಿದ್ಧವಾಗಿದ್ದು ಬಿಟ್ಟರೆ ಈವರೆಗೂ ಧಾರವಾಡಿಗರ ಈ ಕನಸು ನನಸಾಗೆ ಇಲ್ಲ. ಆದರೆ ಈಗ ಮಾರುಕಟ್ಟೆಯ ಮುಖ್ಯ ಹಾಗೂ ಒಳರಸ್ತೆಗಳ ಅಭಿವೃದ್ಧಿಗೆ ಚಾಲನೆ ದೊರೆತಿದ್ದು, ಇದರಿಂದ ಮಾರುಕಟ್ಟೆಯಲ್ಲಿನ ಕೆಲ ಅಂಗಡಿಗಳ ತೆರವು ಕಾರ್ಯಾಚರಣೆ ಸಾಗಿದೆ. ಇದು ಕೆಲ ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ.
Related Articles
Advertisement
60 ಅಡಿ ರಸ್ತೆ ನಿರ್ಮಾಣಕ್ಕೆ ಕೆಲವರ ವಿರೋಧ : ಈಗಾಗಲೇ ಮಾರುಕಟ್ಟೆಯ ಮುಖ್ಯ ರಸ್ತೆ ಕಾಂಕ್ರೀಟ್‌ಮಯ ಆಗಿದ್ದು, ಗಟಾರು ನಿರ್ಮಾಣ ಕಾರ್ಯವೂ ಮುಗಿದಿದೆ. ಈಗ ಒಳರಸ್ತೆಗಳ ಸುಧಾರಣೆಗೆ ಮುಂದಾಗಿರುವ ಪಾಲಿಕೆ, ರಸ್ತೆಯ ಅನಧಿಕೃತ ಅಂಗಡಿಗಳ ತೆರವು ಕಾರ್ಯ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಪ್ರತಿ ತಿಂಗಳು ಪಾಲಿಕೆಗೆ ಕರ ಕಟ್ಟಿ ಬದುಕು ಕಟ್ಟಿಕೊಂಡಿದ್ದ ಈ ವ್ಯಾಪಾರಸ್ಥರ ಬದುಕು ಈಗ ಬೀದಿಗೆ ಬಿದ್ದಿದೆ. ರಸ್ತೆ ನಿರ್ಮಾಣಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ 50-60 ಪೂಟ್ ರಸ್ತೆ ನಿರ್ಮಾಣಕ್ಕಾಗಿ ಅಗಲೀಕರಣದಿಂದ ಅಂಗಡಿಗಳು ನೆಲಸಮ ಆಗುತ್ತಿವೆ. ಹೀಗಾಗಿ ರಸ್ತೆ ಅಗಲೀಕರಣ ಅಧಿಕವಾಗಿದ್ದು, ಇದನ್ನು ಕೈಬಿಡಬೇಕೆಂಬುದು ವ್ಯಾಪಾರಸ್ಥರ ಬೇಡಿಕೆಯಾಗಿದೆ.
ಒಂದು ಕಾಲದಲ್ಲಿ ಇಡೀ ನಗರಕ್ಕೆ ನೀರು ಪೂರೈಸುತ್ತಿದ್ದ ಹಾಲಗೇರಿ ಕೆರೆ ಕಾಲ ಕ್ರಮೇಣ ನೀರು ಮಾಯವಾಗಿ ಕೆರೆ ಮಾರುಕಟ್ಟೆಯಾಗಿ ಪರಿವರ್ತನೆ ಆಗಿದೆ ಎಂಬುದು ಈ ಸೂಪರ್ ಮಾರುಕಟ್ಟೆಯ ಇತಿಹಾಸ. ಧಾರವಾಡದ ಮೂಲ ಮಾರುಕಟ್ಟೆ ರವಿವಾರ ಪೇಟೆಯಲ್ಲಿತ್ತು. ಕೆಸರು ಗುಂಡಿಯಾಗಿದ್ದ ಹಾಲಗೇರಿಯಲ್ಲಿ ಮಾರುಕಟ್ಟೆ ನಿರ್ಮಿಸಿ, ಮಾರುಕಟ್ಟೆ ಸ್ಥಳಾಂತರಗೊಂಡಿದೆ. ಅಂದಾಜು 5 ಎಕರೆ ವಿಸ್ತೀರ್ಣದಲ್ಲಿ ಇರುವ ಈ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಗಳು 10 ಕೋಟಿಯಿಂದ ಆರಂಭವಾಗಿ 200-300 ಕೋಟಿಗೆ ಏರಿಕೆಯಾಗಿದ್ದು ಬಿಟ್ಟರೆ ಅವು ಮಾತ್ರ ಹಾಗೆ ನನೆಗುದಿಗೆ ಬಿದ್ದಿವೆ. ಇದೀಗ ಮಾರುಕಟ್ಟೆಯ ರಸ್ತೆಗಳ ಅಗಲೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಸಾಗಿದ್ದು, ಇದರ ಜತೆಗೆ ಮೂಲಸೌಕರ್ಯ ಒದಗಿಸುವತ್ತ ಗಮನ ಹರಿಸಬೇಕಿದೆ.
ಕಳೆದ 40 ವರ್ಷಗಳಿಂದ ನಾವೇ ಮಳಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು, ಪ್ರತಿ ತಿಂಗಳು ಪಾಲಿಕೆಗೆ 600 ರೂ. ಬಾಡಿಗೆ ಭರಿಸುತ್ತೇವೆ.ಈ ರೀತಿ 400ಕ್ಕೂ ಹೆಚ್ಚು ಜನರ ಮಳಿಗೆ ಇದ್ದು, ಇದೀಗ ರಸ್ತೆ ನಿರ್ಮಾಣದಿಂದ ಅಂಗಡಿ ಕಳೆದು ಕೊಳ್ಳಲಿದ್ದೇವೆ. ದಯವಿಟ್ಟು ನಮಗೆ ಪರ್ಯಾಯ ವ್ಯವಸ್ಥೆ ನಿರ್ಮಿಸಿ, ತೆರವು ಮಾಡಬೇಕು. ಇಲ್ಲವೇ ರಸ್ತೆ ನಿರ್ಮಾಣ ಜತೆಗೆ ಮಳಿಗೆಯನ್ನೂ ನಿರ್ಮಾಣ ಮಾಡಿ ಪಾಲಿಕೆಯೇ ವ್ಯಾಪಾರಸ್ಥರಿಗೆ ಬಾಡಿಗೆ ಕೊಡಲಿ.-ಮಹಮ್ಮದಹುಸೇನ ತಮಟಗಾರ, ಬಾಂಡೇ ಅಂಗಡಿ ಮಾಲೀಕ.
ಸೂಪರ್ ಮಾರುಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದು, ಈ ರಸ್ತೆಯ ಮಾರ್ಗದಲ್ಲಿ ಅನಧಿಕೃತ ಆಗಿರುವ ಮಳಿಗೆಗಳನ್ನು ತೆರವು ಮಾಡಲಾಗಿದೆ. ಕೆಲವರು ಸ್ವಯಂ ಪ್ರೇರಣೆಯಿಂದಲೂ ತೆರವು ಮಾಡಿಕೊಂಡಿದ್ದಾರೆ. ಇದಲ್ಲದೇ ಇನ್ನೂ ಕೆಲ ಅನಧಿಕೃತ ಅಂಗಡಿಗಳಿಗೆ ಸೂಚನೆ ನೀಡಿದ್ದು, ಸ್ವಯಂ ಪ್ರೇರಣೆಯಿಂದ ತೆರವು ಮಾಡದಿದ್ದರೆ ಜೆಸಿಬಿ ಯಂತ್ರದ ಮೂಲಕ ತೆರವು ಮಾಡಲಾಗುವುದು.– ಎಂ.ಬಿ.ಸಬರದ, ಸಹಾಯಕ ಆಯುಕ್ತ, ಪಾಲಿಕೆ ವಲಯ ಕಚೇರಿ, ಧಾರವಾಡ
ಕಾಂಕ್ರೀಟ್ ರಸ್ತೆ ನಿರ್ಮಾಣದ ನೆಪದಲ್ಲಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ವ್ಯಾಪಾರಸ್ಥರೊಂದಿಗೆ ಚರ್ಚೆ ಕೈಗೊಂಡು, ಕಾನೂನಾತ್ಮಕ ಅಥವಾ ಸಾರ್ವಜನಿಕ ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗುತ್ತೇವೆ.– ಪಿ.ಎಚ್.ನೀರಲಕೇರಿ, ಹೋರಾಟಗಾರ
-ಶಶಿಧರ್ ಬುದ್ನಿ