Advertisement
ಸಾಂಪ್ರದಾಯಿಕ ಕಾಂಗ್ರೆಸ್ ಮತಗಳನ್ನು ಸಹ ಕೊಳ್ಳೆ ಹೊಡೆಯುವಲ್ಲಿ ಮೋದಿ ಸುನಾಮಿ ಯಶಸ್ವಿಯಾಗಿದ್ದೇ ಈ ಬಾರಿ ಬಿಜೆಪಿ ಗೆಲುವಿನ ಅಂತರ 2 ಲಕ್ಷ ದಾಟುವುದಕ್ಕೆ ಪ್ರಮುಖ ಕಾರಣ ಎನ್ನುವ ಅಂಶ ಇದೀಗ ಚರ್ಚೆಯಾಗುತ್ತಿದೆ.
ಅಹಿಂದ ಮತಗಳು ಮೋದಿಯತ್ತ?:
ಕಾಂಗ್ರೆಸ್ ಅತ್ಯಂತ ವಿಶ್ವಾಸದಿಂದ ನಂಬಿದ್ದ ಅಹಿಂದ ಮತಗಳಲ್ಲಿ ಕೂಡ ಶೇ. 30 ಮತಗಳು ಬಿಜೆಪಿಗೆ ಹೋಗಿದ್ದು ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮುಸ್ಲಿಮರನ್ನು ಹೊರತು ಪಡಿಸಿ ಇತರ ಹಿಂದುಳಿದ ವರ್ಗದ ಯುವಕರ ಪಡೆ ಈ ಬಾರಿ ಕೈನತ್ತ ಒಲವು ತೋರಿಸಲೇ ಇಲ್ಲ. ಹೀಗಾಗಿ ಕ್ಷೇತ್ರದಲ್ಲಿ ನೂತನವಾಗಿ ಮತ ಚಲಾಯಿಸಿದ 1.5 ಲಕ್ಷ ಯುವ ಮತದಾರರು ಮೋದಿಯತ್ತ ಆಕರ್ಷಿತರಾಗಿದ್ದೇ ಬಿಜೆಪಿ ಪ್ರಚಂಡ ಮತ್ತು ದಾಖಲೆ ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಲಿಂಗಾಯತ ತಂತ್ರ ಫಲಿಸಲಿಲ್ಲವೇ?:
ಇಂತಹದೊಂದು ಪ್ರಶ್ನೆ ಕಾಂಗ್ರೆಸ್ ಮುಖಂಡರನ್ನು ಈಗಲೂ ಕಾಡುತ್ತಿದೆ. ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಲಿಂಗಾಯತರಿದ್ದರೂ, ಇಲ್ಲಿ ಸಾಕಷ್ಟು ಜನರು ಲಿಂಗಾಯತರೇ ಪ್ರಭಾವಿಗಳಿದ್ದರೂ ಯಾಕೆ ವಿನಯ್ ಅವರಿಗೆ ಲಿಂಗಾಯತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಆದರೆ ತಕ್ಕಮಟ್ಟಿಗೆ ಲಿಂಗಾಯತರ ಮತಗಳು ಕಾಂಗ್ರೆಸ್‌ಗೆ ಬಂದಿದ್ದು ಸತ್ಯ. ಆದರೆ ಇದೇ ಸಮಯಕ್ಕೆ ಮೋದಿ ಅವರ ಸುನಾಮಿ ಅಲೆಗೆ ಕಟ್ಟರ್ ಕಾಂಗ್ರೆಸ್‌ಗೆ ಬರಬೇಕಿದ್ದ ಇತರ ಸಮುದಾಯಗಳ ಮತಗಳು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದು ಕಾಂಗ್ರೆಸ್‌ನ್ನು ಸೋಲಿನ ಸುಳಿಗೆ ಸಿಲುಕಿಸಿತು ಎನ್ನಲಾಗುತ್ತಿದೆ.
ನವಲಗುಂದ ಮನೆಮಗನಿಗಿಲ್ಲ ಸಿಹಿ:
ನವಲಗುಂದ ಕ್ಷೇತ್ರದಲ್ಲಿ ಆರಂಭದಿಂದಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಕೊನೆ ಸುತ್ತುಗಳು ಬಂದಂತೆಲ್ಲ ಅಲ್ಲಿಯೂ ಬಿಜೆಪಿ ಸಮಬಲದ ಕಾದಾಟ ನೀಡುತ್ತಲೇ ಹೋಯಿತು. ಕಾಂಗ್ರೆಸ್ ಲೆಕ್ಕಾಚಾರ ಇಲ್ಲಿಯೇ ತಪ್ಪಿತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕನಿಷ್ಠ 25 ಸಾವಿರದಷ್ಟು ಮತಗಳ ಮುನ್ನಡೆ ಲಭಿಸುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಇದಕ್ಕೆ ಪ್ರಮುಖ ಕಾರಣ, ವಿನಯ್ ಕುಲಕರ್ಣಿ ಅವರು ಇದೇ ತಾಲೂಕಿನ ನಾಯಕನೂರು ಗ್ರಾಮದವರು. ತಮ್ಮ ತಾಲೂಕಿನ ಯುವಕನೊಬ್ಬ ಲೋಕಸಭೆ ಪ್ರವೇಶ ಮಾಡಲಿ ಎನ್ನುವ ಬಯಕೆಯೊಂದಿಗೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದರು. ಆದರೆ ಇಲ್ಲಿಯೂ ಮೋದಿ ಅಲೆ ಸುನಾಮಿಯಾಗಿ ಕೆಲಸ ಮಾಡಿತು. ಅಷ್ಟೇಯಲ್ಲ, ರಡ್ಡಿ, ಕುರುಬ ಸಮುದಾಯದ ಮತಗಳು ಲೆಕ್ಕ ಹಾಕಿದ ಮಟ್ಟಕ್ಕೆ ಕೈನತ್ತ ತಿರುಗಲಿಲ್ಲ. 2014ರ ಲೋಕಸಭೆಯಲ್ಲಿ ಇಲ್ಲಿ 5 ಸಾವಿರದಷ್ಟು ಮತಗಳು ಕಾಂಗ್ರೆಸ್‌ಗೆ ಮುನ್ನಡೆಯಾಗಿ ಸಿಕ್ಕಿತ್ತು. ಆದರೆ ಈ ಲೋಕಸಭೆಯಲ್ಲಿ ಬಿಜೆಪಿಯೇ 283 ಮತಗಳ ಮುನ್ನಡೆ ಪೆಡೆದುಕೊಂಡಿತು.
ಲಕ್ಷ ಲಕ್ಷ ಕೊಟ್ಟವು ಕೇಂದ್ರ-ಪಶ್ಚಿಮ:
ಅಂದುಕೊಂಡಂತೆ ಹು-ಧಾ ಕೇಂದ್ರ ಮತ್ತು ಪಶ್ಚಿಮ ಕ್ಷೇತ್ರ ಕಳೆದ ಬಾರಿಗಿಂತಲೂ ಈ ಬಾರಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚಿನ ಮತಗಳನ್ನು ಕ್ರೋಢೀಕರಿಸಿದ್ದು ವಿಶೇಷ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಬರೋಬ್ಬರಿ 2.11 ಲಕ್ಷ ಮತಗಳನ್ನು ಬಾಚಿಕೊಂಡಿತು. ಈ ಪೈಕಿ ಒಂದು ಲಕ್ಷಕ್ಕೂ ಅಧಿಕ ಮತಗಳು ಇಲ್ಲಿಯೇ ಮುನ್ನಡೆ ಸಿಕ್ಕಿದ್ದು ಕೈಗೆ ಭಾರಿ ಏಟು ಕೊಟ್ಟಂತಾಯಿತು. ಕೇಂದ್ರ ಕ್ಷೇತ್ರದಲ್ಲಿ 54,754 ಮತ್ತು ಪಶ್ಚಿಮದಲ್ಲಿ 51546 ಮತಗಳು ಹೆಚ್ಚುವರಿಯಾಗಿ ಸಿಕ್ಕಿದ್ದು ಜೋಶಿ ಅವರು 2 ಲಕ್ಷ ಮತಗಳ ಮುನ್ನಡೆಗೆ ಕಾರಣವಾಯಿತು.
ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೊಳಚೆ ಪ್ರದೇಶ ಮತ್ತು ಅಲ್ಪಸಂಖ್ಯಾತರ ಮತಗಳನ್ನು ನಂಬಿಕೊಂಡಿದ್ದು ಬಿಟ್ಟರೆ, ಮೇಲ್ವರ್ಗದ ಲಿಂಗಾಯತರು ಮತ್ತು ಇತರ ಸಮುದಯಗಳು ಕೈನತ್ತ ಸುಳಿದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದೂ ಅಲ್ಲದೇ ಯುವಕರೇ ಹೆಚ್ಚಿಗೆ ಇರುವ ಈ ಕ್ಷೇತ್ರದಲ್ಲಿ ಜಾತಿ-ಮತ ಮೀರಿಯೇ ಮೋದಿಗೆ ಜೈಕಾರ ಹಾಕಿದ್ದು ಗೋಚರವಾಗುತ್ತದೆ.
ಕೈ ಮೇಲೆ ಗ್ರಾಮೀಣರ ಮುನಿಸು:
ಲೋಕಸಭಾ ಅಭ್ಯರ್ಥಿಯಾಗಿದ್ದ ವಿನಯ್ ಕುಲಕರ್ಣಿ ಅವರು ವಿಧಾನಸಭೆ ಪ್ರವೇಶ ಮಾಡಿದ ಕ್ಷೇತ್ರ ಧಾರವಾಡ ಗ್ರಾಮೀಣ. 2014ರ ಲೋಕಸಭೆ, 2018ರ ವಿಧಾನಸಭೆ ಚುನಾವಣೆಯಲ್ಲಿ ತಲಾ 24 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಇಲ್ಲಿ ಸೋತಿದ್ದ ಅವರು ಈ ಬಾರಿಯಾದರೂ ಇಲ್ಲಿನ ಮತದಾರರು ತಮ್ಮ ಕೈ ಹಿಡಿಯುತ್ತಾರೆ ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ ಈ ಬಾರಿಯೂ ಮೋದಿ ಅಲೆ ಯುವಕರ ಮತಗಳನ್ನು ಸಂಪೂರ್ಣವಾಗಿ ಸೆಳೆದುಕೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿಯೂ ವಿನಯ್ ಬಿಜೆಪಿ ಅಭ್ಯರ್ಥಿಗಿಂತಲೂ 24,913 ಮತಗಳ ಹಿನ್ನಡೆ ಅನುಭವಿಸಿದರು. ವಿಧಾನಸಭೆಯ ಮುನಿಸು ಲೋಕಸಭೆಗೂ ವಿಸ್ತರಣೆಯಾಗಿದ್ದಕ್ಕೆ ಕಾರಣಗಳೇನು ಎನ್ನುವುದು ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ.
ಕೈಗೆ ಕುಂದು-ಕೊರತೆ ಗೋಳು:
ಇಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಬಿದ್ದಷ್ಟು ಮತಗಳು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಗೆ ಬಂದಿಲ್ಲ. ಇಲ್ಲಿ ಕುಸುಮಾವತಿ ಶಿವಳ್ಳಿ ಅವರಿಗೆ 77640 ಮತಗಳು ಬಂದರೆ, ಬಿಜೆಪಿಗೆ 76039 ಮತಗಳು ಬಂದಿವೆ. ಇದೇ ಸಮಯಕ್ಕೆ ನಡೆದ ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ಗೆ ಕೇವಲ 55530 ಮತಗಳು ಬಂದರೆ, ಬಿಜೆಪಿಗೆ 75580 ಮತಗಳು ಬಂದಿವೆ.
Related Articles
ಕಲಘಟಗಿಯಲ್ಲಿ ಒಳ ಹೊಡೆತ:
ಬಿಜೆಪಿ ಈ ಬಾರಿ ಕಲಘಟಗಿ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಬಾಚಿಕೊಂಡಿದೆ. ಇಲ್ಲಿಯೂ ಮೋದಿ ಅಲೆಯೇ ಅತೀ ಹೆಚ್ಚಿನ ಮತಗಳ ಸಂಗ್ರಹಕ್ಕೆ ಕಾರಣವಾಗಿದೆ. ಆದರೆ ಕಾಂಗ್ರೆಸ್ ಹಿನ್ನೆಡೆಗೆ ಪ್ರಮುಖ ಕಾರಣ ಕಾಂಗ್ರೆಸ್‌ನಲ್ಲಿನ ಮಾಜಿ ಸಚಿವರಾದ ಸಂತೋಷ್ ಲಾಡ್ ಮತ್ತು ವಿನಯ್ ಕುಲಕರ್ಣಿ ಬೆಂಬಲಿಗರ ಮಧ್ಯದ ಕಿತ್ತಾಟ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ಲಾಡ್ ಅವರನ್ನು ಸೋಲಿಸಲು ಕಾರಣವಾದ ಲಿಂಗಾಯತ ಜಾತಿ ಅಸ್ತ್ರಕ್ಕೆ ಪ್ರತಿಯಾಗಿ ಈ ಬಾರಿ ಲಾಡ್ ಕಟ್ಟಾ ಬೆಂಬಲಿಗರು ವಿನಯ್ ಅವರಿಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಸ್ಥಳೀಯ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ.
ಕೈ ಹಿಡಿದ ಪೂರ್ವ- ದೂರವಾದ ಶಿಗ್ಗಾವಿ:
ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಪ್ರತಿನಿಧಿಸುವ ಹು-ಧಾ ಪೂರ್ವ ಮೀಸಲು ಕ್ಷೇತ್ರವೊಂದೇ ವಿನಯ್ ಅವರ ಕೈ ಹಿಡಿದಿದೆ. 2014ರ ಲೋಕಸಭೆಯಲ್ಲಿಯೂ ಕಾಂಗ್ರೆಸ್‌ಗೆ 10 ಸಾವಿರದಷ್ಟು ಮತಗಳ ಮುನ್ನಡೆ ಕೊಟ್ಟಿದ್ದ ಈ ಕ್ಷೇತ್ರದಲ್ಲಿ ಈ ಬಾರಿ 6296 ಮತಗಳ ಮುನ್ನಡೆ ಮಾತ್ರ ಸಿಕ್ಕಿತು. ಇನ್ನು ಹಾವೇರಿ ಜಿಲ್ಲೆಯಲ್ಲಿನ ಕ್ಷೇತ್ರ ಶಿಗ್ಗಾವಿಯಲ್ಲಿ ಹೆಚ್ಚಿನ ಮತಗಳನ್ನು ಕೊಳ್ಳೆ ಹೊಡೆಯುವ ಕೈ ಲೆಕ್ಕಾಚಾರ ಈ ಬಾರಿಯೂ ತಪ್ಪಿ ಹೋಯಿತು. ಇದಕ್ಕೆ ಪ್ರಮುಖ ಕಾರಣ ಈ ಕ್ಷೇತ್ರದ ಮೇಲೆ ವಿನಯ್ ಅವರಿಗೆ ಹಿಡಿತ ಇಲ್ಲದಿರುವುದು. ಇದು ದೂರದ ಕ್ಷೇತ್ರವಾಗಿದ್ದರಿಂದ ಒಡನಾಟದಲ್ಲಿಟ್ಟುಕೊಂಡು ಮತ ಸೆಳೆಯುವುದು ಕೊನೆ ಕೊನೆಗೆ ಕಷ್ಟವಾಯಿತು.
• ಬಸವರಾಜ ಹೊಂಗಲ್
Advertisement