ಕಿರುತೆರೆ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ “ಮೌನಂ’ ಚಿತ್ರದ ಹೀರೋ ಬಾಲಾಜಿ ಶರ್ಮ ಕೂಡ ಸೇರಿದ್ದಾರೆ. ಹೌದು, “ಅಮೃತ ವರ್ಷಿಣಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಬಾಲಾಜಿ ಶರ್ಮ, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಲ್ಲಿ ನಾಲ್ಕು ಶೇಡ್ ಇರುವ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ಹೊಸ ಬಗೆಯ ಸಿನಿಮಾ ಆಗಿದ್ದು, ಕಾಮಿಡಿ, ರೊಮ್ಯಾನ್ಸ್ ಮತ್ತು ಆ್ಯಕ್ಷನ್ ಕೂಡ ಇದೆ ಎಂಬುದು ಅವರ ಮಾತು.
ಇನ್ನು, ನಟಿ ಮಯೂರಿ ಕೂಡ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟವರು. ಈ ಚಿತ್ರಕ್ಕೆ ಅವರು ನಾಯಕಿಯಾಗಿದ್ದು, ಕಾಲೇಜ್ ಹುಡುಗಿ ಪಾತ್ರ ಮಾಡಿದ್ದಾರೆ. ಅವರ ಜೀವನದಲ್ಲಿ ಒಂದು ಘಟನೆ ನಡೆಯುತ್ತೆ. ಅದು ಎಲ್ಲಿಗೋ ಕರೆದೊಯ್ಯುತ್ತೆ. ಆ ನಂತರ ಏನೆಲ್ಲಾ ನಡೆದುಹೋಗುತ್ತೆ ಎಂಬುದು ಚಿತ್ರದ ಕಥೆ. ಚಿತ್ರಕ್ಕೆ ರಾಜ್ ಪಂಡಿತ್ ನಿರ್ದೇಶಕರು. ಈ ಹಿಂದೆ “ದೇವರಿಗೆ ಪಾಠ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ರಾಜ್ ಪಂಡಿತ್, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಹೊತ್ತಿದ್ದಾರೆ.
“ಮೌನಂ’ ಒಂದು ಹೊಸ ಪ್ರಯೋಗದ ಸಿನಿಮಾ ಆಗಿದ್ದು, ಶತ್ರುಗಳ ಬಗ್ಗೆ ಮಾತಾಡುವ ನಾವು, ನಮ್ಮೊಳಗೇ ಇರುವ ಇದರ ಗುಣ ತಿಳಿದಿರುವುದಿಲ್ಲ. ಕೆಲವು ವೇಳೆ ಒಳ್ಳೆಯದನ್ನು ಮಾಡಿದರೂ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅತಿ ಬುದ್ಧಿವಂತಿಕೆ ಪ್ರದರ್ಶಿಸಿದರೂ, ಬದುಕಲ್ಲಿ ನಾನಾ ರೀತಿಯ ಸಮಸ್ಯೆ ಎದುರಿಸಬೇಕಾಗುತ್ತೆ ಇಂತಹ ನೈಜ ಅಂಶಗಳನ್ನು ಚಿತ್ರದಲ್ಲಿ ಹೇಳಲಾಗಿದೆ ಎಂಬುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಅವಿನಾಶ್ ನಟಿಸಿದ್ದಾರೆ. ಅವರಿಲ್ಲಿ ಕುಂಚ ಕಲಾವಿದರಾಗಿ, ಹೀರೋಗೆ ಪ್ರೀತಿಯ ಅಪ್ಪನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಿಲ್ಲಿ ವಿಭಿನ್ನ ಪಾತ್ರ ಸಿಕ್ಕಿರುವುದು ಖುಷಿ ಕೊಟ್ಟಿದೆಯಂತೆ. ಇನ್ನು, “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ ನಾಯಕಿಯ ಗೆಳತಿ ಪಾತ್ರ ಮಾಡಿದ್ದಾರೆ. ಗುಣವಂತ ಮಂಜು, ಬಲರಾಂ, ರಿತೇಶ್, ಹನುಮಂತೇಗೌಡ, ಜಯಲಕ್ಷೀ ಇತರರು ನಟಿಸಿದ್ದಾರೆ. ಆರವ್ ಋಷಿಕ್ ಸಂಗೀತ ನೀಡಿದ್ದಾರೆ. ಆಕಾಶ್ ಮೂರು ಗೀತೆ ರಚಿಸಿದ್ದಾರೆ. ಶಂಕರ್ ಛಾಯಾಗ್ರಹಣವಿದೆ.
ಗುರುಮೂರ್ತಿ ಹೆಗಡೆ ಸಂಕಲನ ಮಾಡಿದರೆ ಅಲ್ಟಿಮೇಟ್ ಶಿವು ಮತ್ತು ಕೌರವ ವೆಂಕಟೇಶ್ ಸಾಹಸವಿದೆ. ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಇನ್ನು, ನಟ ಆಗಬೇಕು ಅಂದುಕೊಂಡಿದ್ದ ಶ್ರೀಹರಿ, ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಫೆ.21ರಂದು ಬಿಡುಗಡೆಯಾಗುತ್ತಿದೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಹಾಡುಗಳು ಹೊರಬಂದಿದ್ದು, ನಟ ದರ್ಶನ್ ಆಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.