ಹುಬ್ಬಳ್ಳಿ : ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾನ-ಧರ್ಮಕ್ಕೆ ಹೆಸರಾದವರು. ಚಿಕ್ಕವರಿಂದ ಹಿಡಿದು ದೊಡ್ಡವರಿಗೆ ಗೌರವ ನೀಡುವ ದಾಸನ ದೊಡ್ಡಗುಣ ಎಲ್ಲರಿಗೂ ಅಚ್ಚುಮೆಚ್ಚು. ನಿನ್ನೆ (ಫೆ.28) ಕೂಡ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮ ‘ಚಕ್ರವರ್ತಿ’ಯ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಯಿತು.
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಭಾನುವಾರ ಸಂಜೆ ‘ರಾಬರ್ಟ್’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಸುಮಾರು 4 ಗಂಟೆಯವರೆಗೆ ನಡೆದ ಪ್ರೀ-ರಿಲೀಸ್ ಈವೆಂಟ್‍ಗೆ ದರ್ಶನ್ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ವರ್ಣರಂಜಿತವಾದ ವೇದಿಕೆ ಒಂದು ವಿಶೇಷತೆಗೂ ಸಾಕ್ಷಿಯಾಯಿತು.
ಹೌದು, ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆ ಏರಿದ ನಟ ದರ್ಶನ್, ಹುಬ್ಬಳ್ಳಿ ಜನತೆಗೆ ಅದರಲ್ಲೂ ಉತ್ತರ ಕರ್ನಾಟಕದವರಿಗೆ ವಿಶೇಷವಾದ ಗೌರವ ನೀಡಿದರು. ವೇದಿಕೆ ಪಕ್ಕದಲ್ಲಿ ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಜನರಿಗೆ ನಮಸ್ಕಾರ ಹೇಳಿದರು. ಇದು ಉತ್ತರ ಕರ್ನಾಟಕದವರ ಸಂಸ್ಕೃತಿ. ಸಂಗೊಳ್ಳಿ ರಾಯಣ್ಣ ಸಿನಿಮಾದ ವಿಜಯಯಾತ್ರೆ ವೇಳೆ ಈ ಭಾಗದ ಹೆಣ್ಣು ಮಕ್ಕಳು ನನಗೆ ಇದೇ ರೀತಿ ಗೌರವ ನೀಡಿದ್ದರು. ತಲೆ ಮೇಲೆ ಸೆರಗು ಹೊದ್ದು, ಪಕ್ಕಕ್ಕೆ ಚಪ್ಪಲಿ ಬಿಟ್ಟು ನನಗೆ ಕೈ ಮುಗಿದಿದ್ದರು. ನಿಮ್ಮ ಈ ಗೌರವಕ್ಕೆ ನಾನು ಅರ್ಹನಲ್ಲ, ಅಷ್ಟೊಂದು ದೊಡ್ಡವನೂ ನಾನಲ್ಲ. ಇಂದು ನಾನು ನಿಮಗೆ ಬರಿಗಾಲಿನಲ್ಲಿ ನಿಂತು ಗೌರವ ಹೇಳಬೇಕು ಎಂದರು.
ದರ್ಶನ್ ಅವರ ಈ ನಡೆ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನರ ಹೃದಯ ಕರಗುವಂತೆ ಮಾಡಿತು. ದಾಸನ ನುಡಿಗಳಿಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಸುರಿಯಿತು. ಡಿ ಬಾಸ್… ಡಿ ಬಾಸ್.. ಡಿ ಬಾಸ್ ಎನ್ನುವ ಕೂಗು ಎಲ್ಲೆಡೆಯಿಂದ ಮಾರ್ಧನಿಸಿತು.
ಇನ್ನು ಚೌಕ್ ಸಿನಿಮಾ ಖ್ಯಾತಿಯ ತರುಣ್ ಕಿಶೋರ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ದರ್ಶನ್ ನಾಯಕನಟರಾಗಿ ಅಭಿನಯಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.