“ನಾನು ಕಂಡ ಹಾಗೆ ಮೀಡಿಯಾದಲ್ಲಿ, ಸಾಮಾಜಿಕ ತಾಣಗಳಲ್ಲಿ ನನ್ನ 51, 52. 53ನೇ ಚಿತ್ರಗಳ ಬಗ್ಗೆ ಅನವಶ್ಯಕ ಚರ್ಚೆಗಳು ಮತ್ತು ಗಾಳಿಸುದ್ದಿಗಳು ಸದ್ಯಕ್ಕೆ ಬೇಡ. ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ ತಿಳಿಸುತ್ತೇನೆ …’ ಹಾಗಂತ ಕೆಲವು ತಿಂಗಳುಗಳ ಹಿಂದೆ ದರ್ಶನ್ ಟ್ವೀಟ್ ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ದರ್ಶನ್ ಅವರ ಮುಂದಿನ ಚಿತ್ರಗಳ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿ ಬರುತಿತ್ತು.
ಅದಕ್ಕೊಂದು ಫುಲ್‌ಸ್ಟಾಪ್ ಹಾಕುವುದಕ್ಕೆಂದೇ ದರ್ಶನ್ ಹಾಗೆ ಹೇಳಿದ್ದರು. ಈಗ ದರ್ಶನ್ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಅಷ್ಟೇ ಅಲ್ಲ, ದರ್ಶನ್ ಅವರ 51ನೇ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಹೌದು, ದರ್ಶನ್ ಅವರ 51ನೇ ಚಿತ್ರವು ಸಂಕ್ರಾಂತಿ ಹಬ್ಬದಂದು ಪ್ರಾರಂಭವಾಗಿದೆ.
ಸೋಮವಾರ ಚಂದ್ರ ಲೇಔಟ್‌ನ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ದಿನಕರ್ ಕ್ಲಾಪ್ ಮಾಡಿದ್ದಾರೆ. ಈ ಚಿತ್ರವನ್ನು ಬಿ. ಸುರೇಶ ಮತ್ತು ಅವರ ಪತ್ನಿ ಶೈಲಜಾ ನಾಗ್ ಅವರು ಮೀಡಿಯಾ ಹೌಡ್ ಸ್ಟುಡಿಯೋ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. “ವಿಷ್ಣುವರ್ಧನ’, “ಚಾರುಲತಾ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಪಿ. ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಅದಲ್ಲದೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಸಂಭಾಷಣೆಕಾರ “ಬಹದ್ದೂರ್’ ಚೇತನ್, ಛಾಯಾಗ್ರಾಹಕ ಶ್ರೀಷ ಕೂದುವಳ್ಳಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು. ಹೆಸರಿಡದ ಈ ಚಿತ್ರದ ಮುಹೂರ್ತವಾಗಿದ್ದರೂ, ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದೇನಿದ್ದರೂ ಫೆಭ್ರವರಿ ಮೊದಲ ವಾರದಲ್ಲೇ. ಚಿತ್ರದಲ್ಲಿ ದರ್ಶನ್ ಮತ್ತು ರಶ್ಮಿಕಾ ಜೊತೆಗೆ ರವಿಶಂಕರ್, ದೇವರಾಜ್ ಮುಂತಾದವರು ನಟಿಸುತ್ತಿದ್ದಾರೆ.