ನಟ ಧನಂಜಯ್ “ಟಗರು ಪಲ್ಯ’ ಎಂಬ ಸಿನಿಮಾ ನಿರ್ಮಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು, ಅ.27ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟ ದರ್ಶನ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
“ಟ್ರೇಲರ್ ನೋಡಿದಾಗ ಖುಷಿ ಆಯಿತು. 7 ಸ್ಟಾರ್ ಸುಲ್ತಾನ್ ಚೆನ್ನಾಗಿ ನಟನೆ ಮಾಡಿದೆ. ನಾಯಕಿ ಅಮೃತಾ ಅವರಿಗೆ ಸ್ವಾಗತ. ನಮ್ಮದು ಚಿಕ್ಕ ಇಂಡಸ್ಟ್ರಿ. ನೀಟ್ ಇಂಡಸ್ಟ್ರಿ. ಇದು ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಟ್ರೇಲರ್‌ನಲ್ಲಿ ಸಿನಿಮಾ ಏನೋ ಅನ್ನೋದು ಹೇಳಬಹುದು. ನಗಲು ಏನು ಬೇಕು ಎಲ್ಲವೂ ಇದೆ. ಸಿನಿಮಾ ಚೆನ್ನಾಗಿ ಆಗಲಿ. ಹೀರೋಗಳು ಏನು ಮಾಡುತ್ತಿದ್ದಾರೆ ಎಂದು ತುಂಬಾ ಜನ ಕೇಳುತ್ತಾರೆ. ನಾವು ಪ್ರೊಡ್ನೂಸ್ ಮಾಡುತ್ತೇವೆ. ಈ ಸಾಲಿನಲ್ಲಿ ಡಾಲಿ ಅವರು ಮೊದಲು ನಿಲ್ಲುತ್ತಾರೆ. ಇದು ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ. ಆತ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಬಡವರ ಮಕ್ಕಳು ದೊಡ್ಡವರು ಆಗಬೇಕು. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ. ನಾಗಭೂಷಣ್ ಫ್ಯಾನ್ ನಾನು. ನಾವು ಚಿಕ್ಕ ಕಲಾವಿದರು ನಿಮ್ಮ ಬ್ಯಾನರ್‌ನಡಿ ನನಗೂ ಅವಕಾಶ ಕೊಡಿ’ ಎನ್ನುತ್ತಾ ಶುಭ ಹಾರೈಸಿದರು.
ಧನಂಜಯ್ ಮಾತನಾಡಿ, “ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ ಟಗರು ಪಲ್ಯ. ಇಡೀ ತಂಡಕ್ಕೆ ಧನ್ಯವಾದ ಹೇಳಬೇಕು. ನನಗೆ ಉಮೇಶ್ ಅವರು ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಒಳ್ಳೆ ಪ್ರತಿಭೆಗಳಿಗೆ ಬಂಡವಾಳ ಹಾಕುವುದು ಖುಷಿ ನನಗೆ ಇದೆ. ಅವರವರ ಪ್ರತಿಭೆಗಳು ಅವರನ್ನ ಮೇಲೆ ಕರೆದುಕೊಂಡು ಬರುತ್ತಿದೆ. ಇಡೀ ತಂಡ ನನಗೆ ಅದ್ಭುತವಾಗಿ ಸಹಕರಿಸಿದೆ. ನಾಗಭೂಷಣ್ ಯಾವುದೇ ಪಾತ್ರ ಕೊಟ್ಟರು ತೂಗಿಸಿಕೊಂಡು ಹೋಗುವ ನಟ. ಟಗರು ಪಲ್ಯದಲ್ಲಿ ನೀವು ಬೇರೆ ನಾಗಭೂಷಣ್ ನೋಡಬಹುದು. ಅಮೃತಾ ಲುಕ್ ಟೆಸ್ಟ್ ಮಾಡಿದಾಗ ಸ್ಯಾಂಡಲ್‌ವುಡ್ ಮಹಾಲಕ್ಷ್ಮೀ ತರ ಕಾಣಿಸುತ್ತಾರೆ. ನನ್ನ ಬೆನ್ನು ತಟ್ಟಲು ಇವತ್ತು ಒಬ್ಬರು ಅಣ್ಣ ಬಂದಿದ್ದಾರೆ. ಯಾವಾಗ ಸಿಕ್ಕರು ಖುಷಿಯಿಂದ ತಬ್ಬಿಕೊಂಡು ಚೆನ್ನಾಗಿ ಕೆಲಸ ಮಾಡುತ್ತಿದ್ದೀಯಾ.. ಮಾಡು ಖುಷಿಪಡುತ್ತೇನೆ ಎನ್ನುತ್ತಾರೆ’ ಎಂದು ದರ್ಶನ್ ಅವರ ಬಗ್ಗೆ ಹೇಳಿದರು.
ನಟ ನಾಗಭೂಷಣ್ ಮಾತನಾಡಿ, “ನಾನು ಹೀರೋ ಆಗಬೇಕು ಎಂದು ಚಿತ್ರರಂಗಕ್ಕೆ ಬಂದವನಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು ಎಂದು ಬಂದವನು. ನನ್ನ ಪುಣ್ಯ. ಅಂದು ಇಕ್ಕಟ್ ಸಿನಿಮಾ. ಈಗ ಟಗರು ಪಲ್ಯ ಸಿಕ್ಕಿದೆ. ಟಗರು ಪಲ್ಯ ಸಿನಿಮಾದ ಪಾತ್ರ ನನಗೆ ತೃಪ್ತಿ ಕೊಟ್ಟ ಪಾತ್ರ. ನಾನು ಒಬ್ಬ ಹಳ್ಳಿ ಹುಡುಗ. ನಾನು ಬೆಳೆದು ಬಂದ ಪರಿಸರವನ್ನು ಪ್ರತಿನಿಧಿಸುವುದು, ನಮ್ಮೂರು ಕಥೆ ಇರುವುದರಿಂದ ಈ ಸಿನಿಮಾ ಮತ್ತಷ್ಟು ಕನೆಕ್ಟ್ ಆಗಿದೆ’ ಎಂದರು.
“ದರ್ಶನ್ ಅವರ ಕಡೆಯಿಂದ ನನ್ನ ಮೊರ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿರುವುದು ಬಹಳ ಖುಷಿ ಇದೆ. ಈ ಕ್ಷಣ ನನಗೆ ಲೈಫ್ ಲಾಂಗ್ ನೆನಪು ಇರುತ್ತದೆ’ ಎಂದರು.
ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನವಿದೆ. ನಾಗಭೂಷಣ, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಕ್ಟೋಬರ್ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.