ದರ್ಶನ್ ನಾಯಕರಾಗಿರುವ “ಕ್ರಾಂತಿ’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ದರ್ಶನ್ ಅಭಿಮಾನಿಗಳಲ್ಲಿತ್ತು. ಆರಂಭದಲ್ಲಿ ಈ ಚಿತ್ರ ನವೆಂಬರ್‌ನಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಚಿತ್ರತಂಡ ಅಧಿಕೃತವಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಜನವರಿ 26ರಂದು ಚಿತ್ರ ತೆರೆಕಾಣುತ್ತಿದೆ. ಈ ಮೂಲಕ ದರ್ಶನ್ ಹುಟ್ಟುಹಬ್ಬಕ್ಕೆ 20 ದಿನಗಳ ಮೊದಲೇ ಚಿತ್ರತಂಡ ಅಭಿಮಾನಿಗಳಿಗೆ ಗಿಫ್ಟ್ ನೀಡುತ್ತಿದೆ.
ಈ ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸಿದ್ದಾರೆ. ರಚಿತಾ ರಾಮ್ ಈ ಚಿತ್ರದ ನಾಯಕಿ. ಚಿತ್ರದಲ್ಲಿ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು “ಮೀಡಿಯಾ ಹೌಸ್’ ಮೂಲಕ ಶೈಲಜಾ ನಾಗ್ ಹಾಗೂ ಬಿ.ಸುರೇಶ್ ನಿರ್ಮಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಟ ದರ್ಶನ್, “ಇದು ಸರ್ಕಾರಿ ಶಾಲೆಗಳ ಅಳಿವು-ಉಳಿವಿನ ಸುತ್ತ ಮಾಡಲಾದ ಸಿನಿಮಾ. ಇವತ್ತಿನ ಕಾಲಘಟ್ಟಕ್ಕೆ ತುಂಬಾ ಪ್ರಸ್ತುತವಾಗಿದೆ. ಖಾಸಗಿ ಶಾಲೆಗಳು ಲಕ್ಷಗಟ್ಟಲೇ ಶುಲ್ಕ ತಗೊಂಡು ಶಿಕ್ಷಣ ನೀಡುತ್ತಿವೆ. ಇದು ಸಾಮಾನ್ಯ ಜನರಿಗೆ ಕೈಗೆಟುಕದ ನಕ್ಷತ್ರ. ಸರ್ಕಾರಿ ಶಾಲೆಗಳಲ್ಲಿ ಕಲಿತ ಸಾಕಷ್ಟು ಮಂದಿ ಇವತ್ತು ದೊಡ್ಡ ದೊಡ್ಡ ಹುದ್ದೆಯಲ್ಲಿ ದ್ದಾರೆ. ನನ್ನ ಪ್ರಕಾರ ಶಿಕ್ಷಣ ಎಲ್ಲರಿಗೂ ಕೈಗೆಟುಕುವಂತಿರಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಉಳಿವಿನ ಅಗತ್ಯವಿದೆ’ ಎಂದರು.
ಇನ್ನು, ಚಿತ್ರದಲ್ಲಿ ಕೇವಲ ಕ್ಲಾಸ್ ಅಂಶಗಳಷ್ಟೇ ಇಲ್ಲ, ಅದರಾಚೆ ತಮ್ಮ ಫ್ಯಾನ್ಸ್‌ಗೆ ಬೇಕಾದ ಅಂಶಗಳೂ ಇದ್ದು, ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಗಳಿಗೂ ಇಲ್ಲಿ ಅವಕಾಶವಿದೆ’ ಎಂದರು.
ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ರಚಿತಾಗೆ “ಕ್ರಾಂತಿ’ ಭಾಗವಾಗಿರೋದಕ್ಕೆ ಖುಷಿ ಇದೆಯಂತೆ. “ಈ ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎನ್ನಲು ಹೆಮ್ಮೆಯಾಗುತ್ತಿದೆ. ಚಿತ್ರದಲ್ಲಿ ಸ್ಫೂರ್ತಿ ನೀಡುವಂತಹ ಹಲವು ಅಂಶಗಳಿವೆ. ನನ್ನ ಪಾತ್ರ ಕೂಡಾ ತುಂಬಾ ವಿಭಿನ್ನವಾಗಿದ್ದು, ಸುಮ್ಮನೆ ಬಂದು ಹೋಗುವ ಪಾತ್ರವಲ್ಲ. ಸಿನಿಮಾ ಡಬ್ಬಿಂಗ್ ಮಾಡುವಾಗ ಚಿತ್ರ ತುಂಬಾ ದೊಡ್ಡದಾಗಿ ಬಂದಿದೆ ಅನಿಸಿತು. ತುಂಬಾ ಗ್ಯಾಪ್ ನಂತರ ದರ್ಶನ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ “ಕ್ರಾಂತಿ’ ಮೂಲಕ ಸಿಕ್ಕಿತು. ಸಿನಿಮಾ ದಲ್ಲಿ ಚೆಂದದ ಸೆಟ್‌ಗಳನ್ನು ಕಾಣಬಹುದು. ನಾನು ಈ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದೇನೆ’ ಎನ್ನುವುದು ರಚಿತಾ ರಾಮ್ ಮಾತು.
ಈ ಚಿತ್ರವನ್ನು ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. “ಇದು ನನ್ನ ಮೊದಲ ನಿರ್ದೇಶನದ ಸಿನಿಮಾವಾದರೂ ಯಾರು ಕೂಡಾ ನನ್ನನ್ನು ಹೊಸ ನಿರ್ದೇಶಕನ ತರಹ ನೋಡದೇ ಎಲ್ಲರೂ ಬೆಂಬಲಿಸಿದರು. ಎಡಿಟಿಂಗ್, ಡಬ್ಬಿಂಗ್‌ನಲ್ಲಿ ಸಿನಿಮಾ ನೋಡಿದಾಗ ಇಷ್ಟೆಲ್ಲಾ ನಾವೇ ಮಾಡಿದ್ದೀವಾ ಅನಿಸಿತು. ಅಷ್ಟೊಂದು ಅದ್ಧೂರಿಯಾಗಿ ಸಿನಿಮಾ ಮೂಡಿಬಂದಿದೆ. ಇದು ನನ್ನ ಹಾಗೂ ದರ್ಶನ್ ಅವರ ಸಂಗೀತ ನಿರ್ದೇಶನದ 27ನೇ ಚಿತ್ರ’ ಎಂದರು ಹರಿಕೃಷ್ಣ.
ಚಿತ್ರಕ್ಕೆ ಶಶಿಧರ್ ಅಡಪ ಕಲಾ ನಿರ್ದೇಶನವಿದೆ. ಕೋವಿಡ್ ನಂತರ ತಮಗೆ ದೊಡ್ಡಮಟ್ಟದಲ್ಲಿ ಕೆಲಸ ನೀಡಿ, ಅನೇಕರಿಗೆ ಕೆಲಸ ಸಿಗುವಂತಾದ ಸಿನಿಮಾ “ಕ್ರಾಂತಿ’ ಅನ್ನೋದು ಅವರ ಮಾತು. ನಿರ್ಮಾಪಕ ಬಿ.ಸುರೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನೂ ಮಾಡಿದ್ದಾರೆ.
ರವಿಪ್ರಕಾಶ್ ರೈ