Advertisement

Karnataka Polls : ಈ ಸಲ ನನ್ನದೇ ಗೆಲುವು: ದರ್ಶನ್‌ ಪುಟ್ಟಣ್ಣಯ್ಯ

09:12 PM May 01, 2023 | Team Udayavani |

ಬೆಂಗಳೂರು: “ಈ ಚುನಾವಣೆಯಲ್ಲಿ ನಾನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜಕೀಯದ ಜತೆಗೆ ತಂದೆಯಂತೆ ರೈತ ಹೋರಾಟವನ್ನು ಪುನಃ ಕಟ್ಟಿ ಬೆಳೆಸುವ ಗುರಿ ನನ್ನದು. ಕೃಷಿ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಶ್ವತ ಕೆಲಸಗಳನ್ನು ಮಾಡಲು ಯೋಚಿಸಿದ್ದೇನೆ. ಅದರಂತೆ ಯೋಜನಾಬದ್ಧವಾಗಿ ಸಾಗುವ ಪ್ರಯತ್ನ ಮಾಡುವೆ’ ಎಂದು ರೈತ ಸಂಘದ ಸರ್ವೋದಯ ಕರ್ನಾಟಕ ಪಕ್ಷದ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕಾದಲ್ಲಿ ಐಟಿ ಕ್ಷೇತ್ರದಲ್ಲಿ ವೃತ್ತಿಬದುಕು ಕಟ್ಟಿಕೊಂಡು, ತನ್ನದೇ ಆದ ಸ್ವಂತ ಕಂಪನಿ ಕಟ್ಟಿದ್ದೆ, ಆದರೆ, ಜನರು ನಮ್ಮ ತಂದೆಯ ಮೇಲಿಟ್ಟಿದ್ದ ಪ್ರೀತಿ, ಕಾಳಜಿ, ಭರವಸೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ಪ್ರವೇಶಿಸಿದೆ. ಕಳೆದ ಚುನಾವಣೆಯಲ್ಲಿ 73 ಸಾವಿರ ಮತಗಳನ್ನು ಪಡೆದು ಸೋಲು ಕಂಡೆ. ಈಗ ರಾಜಕೀಯದಲ್ಲಿನ ಅನುಭವ ಹೆಚ್ಚಾಗಿದ್ದು, 23 ದಿನಗಳ ಕಾಲ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದೇನೆ. ಜನರ ಬೇಡಿಕೆ, ರೈತರ ಸಮಸ್ಯೆಗಳನ್ನು ಅರಿತಿದ್ದೇನೆ ಎಂದು ಹೇಳಿದರು.

“ಚುನಾವಣೆ ನಂತರ ನಾನು ಕ್ಷೇತ್ರದಲ್ಲಿರಲ್ಲ ಎನ್ನುವ ವಿರೋಧಿಗಳ ಮಾತು ಸುಳ್ಳು. ಕಳೆದ ಚುನಾವಣೆ ಬಳಿಕವೂ ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಉಳಿದುಕೊಳ್ಳದಿದ್ದರೆ ಇಷ್ಟೊಂದು ಕಷ್ಟ ಪಡುವುದು ಬೇಕಾಗಿರಲಿಲ್ಲ. ವಿರೋಧಿಗಳು ಹಣಬಲ, ತೋಳ್ಬಲದಿಂದ ಚುನಾವಣೆ ಎದುರಿಸಿದರೆ ನಾವು ಜನಬಲದಿಂದ ಹೋರಾಟ ಮಾಡುತ್ತೇವೆ. ಪ್ರಚಾರದ ವೇಳೆ ಪ್ರತಿಯೊಂದು ಹಳ್ಳಿಗಳಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು 109 ದಿನಗಳ ಕಾಲ ನಿರಂತರವಾಗಿ ಹೋರಾಟ ಮಾಡಿದ್ದೇವೆ ಎಂದರು.

ವಿಲೀನ ಒಪ್ಪಲಾಗದು
ನಂದಿನಿ-ಅಮುಲ್‌ ವಿಲೀನ ಒಪ್ಪಲಾಗದು. ಈ ವಿಚಾರದಲ್ಲಿ ಮೊದಲು ನಂದಿನಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬಲವರ್ಧನೆ ಮಾಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಈ ಸಹಕಾರ ಸಂಘವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ದರ್ಶನ್‌ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.

ರೈತ ಹೋರಾಟ ಬಲಪಡಿಸುವೆ:
ರಾಜಕೀಯದ ಜತೆಗೆ ರೈತ ಸಂಘವನ್ನು ಬಲಪಡಿಸಲು ನಿರ್ಧರಿಸಿದ್ದೇನೆ. ಚುನಾವಣೆ ಬರುತ್ತದೆ ಹೋಗುತ್ತದೆ. ಆದರೆ ರೈತ ಹೋರಾಟ ನಿರಂತರವಾಗಿರಬೇಕು. ವಿಘಟನೆಯಾಗಿರುವ ರೈತ ಸಂಘಟನೆಗಳನ್ನು ಒಗ್ಗೂಡಿಸುವುದರೊಂದಿಗೆ ಸಮಾನ ಮನಸ್ಥಿತಿಯುಳ್ಳ ನಿಜವಾಗಿಯೂ ರೈತರ ಬಗ್ಗೆ ಕಾಳಜಿವುಳ್ಳ, ನೈಜ ಸಮಸ್ಯೆಗಳ ವಿರುದ್ಧ ಹೋರಾಡುವವರನ್ನು ಒಂದು ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

Advertisement

ಯೋಜನಾಬದ್ಧವಾಗಿ ಕೆಲಸ:
ಶಾಸಕನಾಗಿ ಏನೇನು ಕೆಲಸ ಮಾಡಬೇಕು. ಯಾವುದಕ್ಕೆ ಮೊದಲು ಆದ್ಯತೆ ನೀಡಬೇಕು ಎಂದು ಈಗಲೇ ಮೂರು ಹಂತದ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದೇನೆ. ಗ್ರಾಮಗಳಿಗೆ ವ್ಯವಸ್ಥಿತವಾಗಿ ಮೂಲಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ಉದ್ಯೋಗ, ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು. ಮುಖ್ಯವಾಗಿ ರೈತರ ಉತ್ಪನ್ನಗಳಿಗೆ ಪೂರಕವಾಗಿ ಸ್ಥಳೀಯವಾಗಿ ಸಣ್ಣ ಕೈಗಾರಿಕೆಗಳು ತೆರೆಯಬೇಕು. ಹೆಣ್ಣು ಮಕ್ಕಳು ಶಾಲೆ ಬಿಡುವುದನ್ನು ತಡೆಯಬೇಕು. ತಾಲೂಕು, ಗ್ರಾಮ ಮಟ್ಟದ ಭ್ರಷ್ಟಾಚಾರ ತಡೆಯಬೇಕು. ಯುವಕರಿಗೆ ಕೃಷಿ ಲಾಭದಾಯಕ ಎಂಬುದನ್ನು ಮನವರಿಕೆ ಮಾಡಿಕೊಡುವ ಕಾರ್ಯಕ್ರಮ ಜಾರಿಯಾಗುವಂತೆ ಮಾಡುವುದು ನನ್ನ ಉದ್ದೇಶ. ಈ ಕುರಿತು ಈಗಾಗಲೇ ಅನೇಕ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next