Advertisement

ಪ್ರಕಾಶ್‌ ಕೋರ್ಟ್‌ನಲ್ಲಿ ದರ್ಶನ್‌ ಆಟ!

06:05 AM Aug 25, 2017 | |

“ಇಲ್ಲಿ ಎಲ್ಲರ ನಡುವೆ ನಾನು ಆಗಾಗ ಬಂದು ಹೋಗುತ್ತಿರುತ್ತೇನೆ …’ – ಹೀಗೆ ಹೇಳಿ ನಕ್ಕರು ದರ್ಶನ್‌. ಅವರು ಹೇಳಿದ್ದು “ತಾರಕ್‌’ ಚಿತ್ರದ ಬಗ್ಗೆ. ಸಾಮಾನ್ಯವಾಗಿ ಹೀರೋ ಓರಿಯೆಂಟೆಡ್‌ ಸಿನಿಮಾ, ಅದರಲ್ಲೂ ಸ್ಟಾರ್‌ ಸಿನಿಮಾ ಎಂದರೆ ಫ್ರೆàಮ್‌ ಟು ಫ್ರೆàಮ್‌ ಹೀರೋ ರಾರಾಜಿಸುತ್ತಾ, ಸುಖಾಸುಮ್ಮನೆ ಬಿಲ್ಡಪ್‌ ಇರುತ್ತದೆ. ಆದರೆ, “ತಾರಕ್‌’ ಚಿತ್ರ ಅವೆಲ್ಲದರಿಂದ ಮುಕ್ತವಂತೆ. ಏಕೆಂದರೆ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರ. ತುಂಬಿದ ಕುಟುಂಬದ ಕಥೆಯಲ್ಲಿ ದರ್ಶನ್‌ ಒಬ್ಬರು ಸದಸ್ಯರು. ಆ ಮಾತನ್ನು ದರ್ಶನ್‌ ಕೂಡಾ ಹೇಳುತ್ತಾರೆ. “ಈ ಸಿನಿಮಾದಲ್ಲಿ ನೀವು ದರ್ಶನ್‌ ಅನ್ನು ನೋಡಲ್ಲ, ಒಂದು ತಾತ-ಮೊಮ್ಮಗ ಮುದ್ದಾದ ಕಥೆಯನ್ನು ನೋಡುತ್ತೀರಿ. ತಾತ-ಮೊಮ್ಮಗನ ಪ್ರೀತಿ, ಬೇಸರ, ನಗು … ಎಲ್ಲವೂ ಇಲ್ಲಿರುತ್ತದೆ. ಸಿನಿಮಾ ನೋಡಿದಾಗ ನಮಗೆ ಈ ತರಹದ ತಾತ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಬರದೇ ಇರದು. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ’ ಎಂಬುದು ದರ್ಶನ್‌ ಮಾತು. 

Advertisement

“ತಾರಕ್‌’ ಚಿತ್ರವನ್ನು “ಮಿಲನ’ ಪ್ರಕಾಶ್‌ ನಿರ್ದೇಶಿಸಿದ್ದಾರೆ. “ಮಿಲನ’ ಪ್ರಕಾಶ್‌ ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್‌ ಸಿನಿಮಾ ಮಾಡಿಕೊಂಡು ಬಂದಿರುವವರು. ದರ್ಶನ್‌ ನೋಡಿದರೆ ಆ್ಯಕ್ಷನ್‌ ಹೀರೋ. ಕಾಂಬಿನೇಶನ್‌ ವಕೌìಟ್‌ ಆಗುತ್ತಾ ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಮೂಡಬಹುದು. “ಪ್ರಕಾಶ್‌ ನನ್ನ ಬಳಿ ಸಿನಿಮಾ ಮಾಡಲು ಬಂದಾಗ, “ನೀವು, ನಿಮ್ಮ ಶೈಲಿಯಲ್ಲಿ ಸಿನಿಮಾ ಮಾಡಿ, ಈ ಬಾರಿ ನಾನು ನಿಮ್ಮ ಕೋರ್ಟ್‌ಗೆ ಬರುತ್ತೇನೆ. ನನಗಾಗಿ ಯಾವ ಅಂಶವನ್ನು ಸೇರಿಸಬೇಡಿ ಎಂದೆ. ಹಾಗಾಗಿ, ಇದು ಪ್ರಕಾಶ್‌ ಶೈಲಿಯ ಸಿನಿಮಾ. ಅದರಲ್ಲಿ ನಾನೊಂದು ಪಾತ್ರ ಮಾಡಿದ್ದೇನೆ ಅಷ್ಟೇ. ಈ ಸಿನಿಮಾದ ನಿಜವಾದ ಹೀರೋ ದೇವರಾಜ್‌ ಹಾಗೂ ನಿರ್ದೇಶಕ ಪ್ರಕಾಶ್‌. ದೇವರಾಜ್‌ ಅವರು ತಾತನ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾರೆ. ನಿರ್ದೇಶಕ ಪ್ರಕಾಶ್‌ ಮಾಡಿಕೊಂಡಿರುವ ತಯಾರಿಯನ್ನು ಮೆಚ್ಚಲೇಬೇಕು. ಇಡೀ ಸಿನಿಮಾ 64 ದಿನಗಳಲ್ಲಿ ಚಿತ್ರೀಕರಣವಾಗಿದೆ. 23 ದಿನ ಯುರೋಪ್‌ನಲ್ಲಿ ಶೂಟಿಂಗ್‌ ಮಾಡಿದೆವು. ಮೂರೂವರೆ ಸಾವಿರ ಕಿಲೋಮೀಟರ್‌ನ ಸುತ್ತಾಡಿ, ಹಾಡು, ಫೈಟು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿಕೊಂಡೆವು. ಪ್ರಕಾಶ್‌ ಅಷ್ಟೊಂದು ಸಿದ್ಧತೆ ಮಾಡಿಕೊಂಡಿದ್ದರು’ ಎನ್ನುವುದು ದರ್ಶನ್‌ ಮಾತು. 

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಶ್ರುತಿ ಹರಿಹರನ್‌ ಹಾಗೂ ಸಾನ್ವಿ ಶ್ರೀವಾತ್ಸವ್‌. ಸಾಮಾನ್ಯವಾಗಿ ಸ್ಟಾರ್‌ ಸಿನಿಮಾಗಳಲ್ಲಿ ನಾಯಕಿಯರಿಗೆ ಹೆಚ್ಚಿನ ಸ್ಕೋಪ್‌ ಇರಲ್ಲ ಎಂಬ ಮಾತಿದೆ. ಆದರೆ, “ತಾರಕ್‌’ನಲ್ಲಿ ಅದು ಬ್ರೇಕ್‌ ಆಗಿದೆ. ಸ್ವತಃ ಅದನ್ನು ದರ್ಶನ್‌ ಅವರೇ ಹೇಳುತ್ತಾರೆ. “ಸ್ಟಾರ್‌ ಸಿನಿಮಾಗಳಲ್ಲಿ ನಾಯಕಿಯರಿಗೆ ಸ್ಕೋಪ್‌ ಇಲ್ಲ ಎಂಬ ಮಾತು ಕೇಳಿಬರುತ್ತಲೇ ಇರುತ್ತದೆ. 

ಆದರೆ, ಈ ಚಿತ್ರದಲ್ಲಿ ಇಬ್ಬರಿಗೂ ಒಳ್ಳೆಯ ಪಾತ್ರವಿದೆ. ಒಬ್ಬರು ಜೀವನ ಕಲಿಸಿದರೆ, ಇನ್ನೊಬ್ಬರು ಪ್ರೀತಿ ಕಲಿಸುತ್ತಾರೆ’ ಎನ್ನುವ ಮೂಲಕ ನಾಯಕಿಯರ ಪಾತ್ರದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾರೆ. ನಾಯಕಿಯರಾದ ಶ್ರುತಿ ಹರಿಹರನ್‌ ಹಾಗೂ ಸಾನ್ವಿ “ತಾರಕ್‌’ನ ಅನುಭವ ಹಂಚಿಕೊಂಡರು. 

ನಿರ್ದೇಶಕ ಪ್ರಕಾಶ್‌ಗೆ, ದರ್ಶನ್‌ ಈ ಕಥೆಯನ್ನು ಒಪ್ಪಿಕೊಳ್ಳುತ್ತಾರೋ ಅನ್ನೋ ಸಂದೇಹವಿತ್ತಂತೆ. 
“ಆರಂಭದಲ್ಲಿ ಈ ಕಥೆಯನ್ನು ದರ್ಶನ್‌ ಒಪ್ಪುತ್ತಾರೋ ಅನ್ನೋ ಡೌಟ್‌ ಇತ್ತು. ಕಥೆ ಕೇಳಿ ಖುಷಿಯಿಂದ ಒಪ್ಪಿಕೊಂಡರು. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರ. ಸಂಬಂಧಗಳ ನಡುವಿನ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎನ್ನುವುದು ಪ್ರಕಾಶ್‌ ಮಾತು. ಈ ಚಿತ್ರವನ್ನು ದುಷ್ಯಂತ್‌ ನಿರ್ಮಿಸಿದ್ದಾರೆ. “ದರ್ಶನ್‌ ಈ ಚಿತ್ರವನ್ನು ದಸರೆಗೆ ಬಿಡುಗಡೆ ಮಾಡಿ ಎಂದು ಹೇಳಿದ್ದರು. ಅದರಂತೆ ಈಗ ಸಿನಿಮಾ ಮುಗಿದಿದ್ದು, ದಸರೆಗೆ ಬಿಡುಗಡೆ ಮಾಡುತ್ತಿದ್ದೇವೆ’ ಎಂಬುದು ದುಷ್ಯಂತ್‌ ಮಾತು. ಚಿತ್ರದಲ್ಲಿ ದೇವರಾಜ್‌ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಲ್ಲಿ ತಾತನಾಗಿ ನಟಿಸಿದ್ದು, ಈ ಅವಕಾಶ ಬಂದಾಗ  ಹೇಗಪ್ಪಾ ಈ ಪಾತ್ರ ಮಾಡೋದು ಎಂದು ದೇವರಾಜ್‌ ಸ್ವಲ್ಪ ಅಂಜಿದರಂತೆ. ಆದರೆ, ದರ್ಶನ್‌ ಸೇರಿದಂತೆ ಚಿತ್ರತಂಡ, “ಈ ಪಾತ್ರವನ್ನು ನಿಮ್ಮಿಂದ ಮಾಡಲು ಸಾಧ್ಯ, ಮಾಡಿ’ ಎಂದು ಪ್ರೋತ್ಸಾಹಿಸಿದ್ದರಿಂದ ಮಾಡಲಾಯಿತು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ದೇವರಾಜ್‌. 

Advertisement

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. “ನಾನು ತುಂಬಾ ಟೆನ್ಸ್‌ ಆಗಿದ್ದೆ. ಏಕೆಂದರೆ ದರ್ಶನ್‌ ಅವರ ಸಿನಿಮಾ ಮಾಡೋದು ದೊಡ್ಡ ಜವಾಬ್ದಾರಿ. ಅಭಿಮಾನಿಗಳು ಕೂಡಾ ನಾವು ಏನು ಮಾಡುತ್ತೇವೆ, ಯಾವ ತರಹದ ಹಾಡುಗಳನ್ನು ಕೊಡುತ್ತೇವೆ ಎಂದು ಫಾಲೋ ಮಾಡುತ್ತಿರುತ್ತಾರೆ. ಆದರೆ, ಈಗ ಹಾಡು ಚೆನ್ನಾಗಿ ಬಂದಿದೆ. ಅದಕ್ಕೆ ಕಾರಣ, ನಿರ್ದೇಶಕ ಪ್ರಕಾಶ್‌. ಅವರ ಪಕ್ಕಾ ನಿರ್ಧಾರಗಳು ಒಳ್ಳೆಯ ಹಾಡಿಗೆ ಕಾರಣವಾಗಿವೆ. ಇಲ್ಲಿ ಜನಪದ ಶೈಲಿ ಸೇರಿದಂತೆ ಎಲ್ಲಾ ತರಹದ ಹಾಡುಗಳಿವೆ’ ಎಂದು ಹೇಳಿಕೊಂಡರು ಅರ್ಜುನ್‌ ಜನ್ಯಾ. 

ಚಿತ್ರಕ್ಕೆ ಜಯಂತ್‌ ಕಾಯ್ಕಿಣಿಯವರು ಹಾಡು ಬರೆದಿದ್ದಾರೆ. “ನನ್ನ ಮತ್ತು ಪ್ರಕಾಶ್‌ ಅವರದು “ಮಿಲನ’ ದಿಂದ ಶುರುವಾದ ಪ್ರೇಮ. ಈಗ ಇಲ್ಲಿಗೆ ಬಂದಿದೆ.  ಪ್ರಕಾಶ್‌ ಅವರಲ್ಲಿ ಸಹಜವಾದ ವಿನಯವಿದ್ದು, ಅದು ನನಗೆ ತುಂಬಾ ಇಷ್ಟ. ಅವರಲ್ಲಿ ಮಾತಿಗಿಂತ ಮೌನ ಜಾಸ್ತಿ. ಇನ್ನು, ದರ್ಶನ್‌ ಅಭಿಮಾನಿಗಳು “ನೀವ್ಯಾಕೆ ದರ್ಶನ್‌ ಸಿನಿಮಾಕ್ಕೆ ಹಾಡು ಬರೆಯಲ್ಲ’ ಎಂದು ಕೇಳುತ್ತಿದ್ದರು. ನನಗೂ ದರ್ಶನ್‌ ಸಿನಿಮಾಕ್ಕೆ ಬರೆಯೋಕೆ ಆಸೆ. ಈಗ ಸಂದರ್ಭ ಕೂಡಿ ಬಂದಿದೆ. ಮಾಧುರ್ಯ ಇರುವ ಒಳ್ಳೆಯ ಸಾಲುಗಳು ಸಿಕ್ಕಿವೆ’ ಎಂದರು ಕಾಯ್ಕಿಣಿ. ಚಿತ್ರದ ಹಾಡುಗಳನ್ನು ಲಹರಿ ಸಂಸ್ಥೆ ಪಡೆದುಕೊಂಡಿದ್ದು, ಚಿತ್ರದ ಆರು ಹಾಡುಗಳು ಚೆನ್ನಾಗಿ ಮೂಡಿಬಂದ ಖುಷಿ ವ್ಯಕ್ತಪಡಿಸುತ್ತಾರೆ ವೇಲು. ಅಂದಹಾಗೆ, ಇವರೆಲ್ಲರ ಮಾತಿಗೆ ವೇದಿಕೆಯಾಗಿದ್ದು “ತಾರಕ್‌’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ.

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next