ಸಾವಿರಾರು ಭಕ್ತರು ರವಿವಾರ ರಾತ್ರಿಯಿಂದ ಬೆಟ್ಟ ಏರಲು ಪ್ರಾರಂಭಿಸಿದರು. ಸೋಮವಾರ ಬೆಳಗ್ಗಿನ ಜಾವ ಬೆಟ್ಟ ಏರಿ ದೇವಿ ದರ್ಶನ ಪಡೆದುಕೊಳ್ಳುವ ಮೂಲಕ ಶ್ರೀ ದೇವೀರಮ್ಮ ದೀಪೋತ್ಸವಕ್ಕೆ ಅದ್ದೂರಿ ಚಾಲನೆ ದೊರಕಿತು.
Advertisement
ದೇವಿಗೆ ಹರಕೆ ಹೊತ್ತ ಭಕ್ತರು, ಬರಿಗಾಲಿನಲ್ಲಿ ಕಟ್ಟಿಗೆಯನ್ನು ಹೊತ್ತು ಬೆಟ್ಟ ಏರಿ ದೇವಿಗೆ ತುಪ್ಪದ ಬಟ್ಟೆ-ಕಟ್ಟಿಗೆ ಅರ್ಪಿಸಿದರು. ದೇವಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಂಡಿಗ ಶ್ರೀ ದೇವೀರಮ್ಮ ಉತ್ಸವ ಮೂರ್ತಿಯನ್ನು ಬೆಟ್ಟದ ತುತ್ತ ತುದಿಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಟ್ಟದ ಬುಡದಲ್ಲಿರುವ ಶ್ರೀ ಬಿಂಡಿಗ ದೇವೀರಮ್ಮ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದೀಪೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಡಿವೈಎಸ್‌ಪಿ, 8 ಮಂದಿ ಸಿಪಿಐ, ಪಿಐ, 32 ಪಿಎಸ್‌ಐ, 87 ಎಎಸ್‌ಐ, 453 ಎಚ್‌ಸಿ ಮತ್ತುಪಿಸಿ 62 ಹೋಮ್ ಗಾರ್ಡ್ಸ್, 6 ಡಿಎಆರ್ ತುಕಡಿ ಸಿಬಂದಿ ನಿಯೋಜಿಸಲಾಗಿತ್ತು. ಮಲ್ಲೇನಹಳ್ಳಿ ಸಮೀಪ 15 ಎಕ್ರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಟ್ಟಕ್ಕೆ ಸಾಗುವ ಭಕ್ತರಿಗೆ ಅನುಕೂಲದ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಸುರಕ್ಷಿತ ವಾಗಿ ಬೆಟ್ಟ ಹತ್ತಲು ಅನುಕೂಲವಾಗುವಂತೆ ಅಗ್ನಿಶಾಮಕ ದಳ, ಗ್ರಾಮಸ್ಥರು ಮತ್ತು ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು.