Advertisement

ದರ್ಶನ್‌ ಈಗ ಮದಗಜ

11:40 AM Sep 30, 2018 | Team Udayavani |

“ಮದಗಜ’ ಮತ್ತು “ಶ್ರೀಮುರಳಿ ಮದಗಜ’…  ಎರಡು ದಿನಗಳ ಹಿಂದಷ್ಟೇ ಈ ಎರಡು ಶೀರ್ಷಿಕೆಗಳು ಜೋರು ಸುದ್ದಿ ಮಾಡಿದ್ದು ಗೊತ್ತೇ ಇದೆ. ಆದರೆ, ಇಲ್ಲಿ “ಮದಗಜ’ ಯಾರೆಂಬುದೇ ಈ ಹೊತ್ತಿನ ವಿಶೇಷ. ಅದಕ್ಕೊಂದು ಸ್ಪಷ್ಟ ಉತ್ತರ ಸಿಕ್ಕಿದೆ. ಶೀರ್ಷಿಕೆ ಇಟ್ಟುಕೊಳ್ಳುವುದು ವಿಷಯವಲ್ಲ. ಆ ಶೀರ್ಷಿಕೆಯಡಿ ಯಾರು ಹೀರೋ ಆಗುತ್ತಾರೆ ಎಂಬುದು ಕೂಡ ಅಷ್ಟೇ ಮುಖ್ಯ.

Advertisement

“ಮದಗಜ’ ಶೀರ್ಷಿಕೆ ರಾಮಕೃಷ್ಣ (ಪ್ರವೀಣ್‌ ಕುಮಾರ್‌) ಬ್ಯಾನರ್‌ನಲ್ಲಿ ನೋಂದಣಿಯಾದ ಹಿನ್ನೆಲೆಯಲ್ಲಿ ನಿರ್ದೇಶಕ ಮಹೇಶ್‌ “ಶ್ರೀಮುರಳಿ ಮದಗಜ’ ಶೀರ್ಷಿಕೆ ಇಟ್ಟುಕೊಂಡು ನಟ ಶ್ರೀಮುರಳಿ ಅವರಿಗೆ ಸಿನಿಮಾ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದರು. “ಯಾವುದೇ ಕಾರಣಕ್ಕೂ ಹಿಂದೆ ಮುಂದೆ ಹೆಸರು ಸೇರಿಸಿ ಒಂದೇ  ಹೆಸರು ಹೋಲುವ ಶೀರ್ಷಿಕೆಗೆ ಅವಕಾಶ ಕೊಡಬಾರದು’ ಎಂದು ರಾಮಕೃಷ್ಣ ಮಂಡಳಿಗೆ ದೂರು ನೀಡಿದ್ದರು.

ಅದಿನ್ನು ಚರ್ಚೆಯ ಹಂತದಲ್ಲಿರುವಾಗಲೇ, ಈಗ ಇನ್ನೊಂದು ಬಿಗ್‌ನ್ಯೂಸ್‌ ಹೊರಬಿದ್ದಿದೆ. ಹೌದು, ದರ್ಶನ್‌ ಅವರಿಗಾಗಿಯೇ “ಮದಗಜ’ ಶೀರ್ಷಿಕೆ ನೋಂದಣಿ ಮಾಡಿಸಲಾಗಿದೆ ಎಂಬುದೇ ಆ ಬಿಗ್‌ನ್ಯೂಸ್‌. ಅಂದಹಾಗೆ, “ಮದಗಜ’ ಶೀರ್ಷಿಕೆಯಡಿ ದರ್ಶನ್‌ಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಬೇರಾರೂ ಅಲ್ಲ, ಈ ಹಿಂದೆ ದರ್ಶನ್‌ಗೆ “ಮೆಜೆಸ್ಟಿಕ್‌’ ಮತ್ತು “ಧರ್ಮ’ ಚಿತ್ರ ನಿರ್ಮಾಣ ಮಾಡಿದ್ದ ಎಂ.ಜಿ.ರಾಮಮೂರ್ತಿ.

ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಎಂ.ಜಿ.ರಾಮಮೂರ್ತಿ, “ನಾನು ದರ್ಶನ್‌ಗೊಂದು ಸಿನಿಮಾ ಮಾಡುತ್ತಿರುವುದು ಸತ್ಯ. ಅವರಿಗಾಗಿಯೇ ನಾನು “ಮದಗಜ’ ಎಂಬ ಶೀರ್ಷಿಕೆಯನ್ನು ನೋಂದಾಯಿಸಿರುವುದೂ ಅಷ್ಟೇ ಸತ್ಯ. ಈ ಶೀರ್ಷಿಕೆ ನೋಂದಣಿ ಮಾಡಿಸಿರುವುದು ಸ್ವತಃ ದರ್ಶನ್‌ ಅವರಿಗೂ ಗೊತ್ತಿದೆ. ನನ ಬ್ಯಾನರ್‌ನಲ್ಲಿದ್ದ “ಮದಗಜ’ ಶೀರ್ಷಿಕೆಯನ್ನು, ವರ್ಷದ ಹಿಂದಷ್ಟೇ ನಾನು ರಾಮಕೃಷ್ಣ (ಪ್ರವೀಣ್‌ಕುಮಾರ್‌) ಅವರ ಬ್ಯಾನರ್‌ಗೆ ವರ್ಗಾಯಿಸಿದ್ದೆ.

ಅವರು ಸಹ “ಮದಗಜ’ ಚಿತ್ರ ನಿರ್ಮಾಣದಲ್ಲಿ ಸಾಥ್‌ ಕೊಡಲಿದ್ದಾರೆ’ ಎಂದು ವಿವರ ಕೊಡುತ್ತಾರೆ ಎಂ.ಜಿ.ರಾಮಮೂರ್ತಿ. ಹಾಗಾದರೆ, ಚಿತ್ರ ಯಾವಾಗ ಶುರುವಾಗುತ್ತೆ? ಇದಕ್ಕೆ ಉತ್ತರಿಸುವ ನಿರ್ಮಾಪಕ ಎಂ.ಜಿ.ರಾಮಮೂರ್ತಿ, “ಸದ್ಯಕ್ಕೆ “ಮದಗಜ’ ಶೀರ್ಷಿಕೆಯಡಿ, ನಾನು ದರ್ಶನ್‌ಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ತಕ್ಕಂತಹ ಕಥೆ ನಡೆಯುತ್ತಿದೆ.

Advertisement

ಮೂರು ತಂಡಗಳು ಕುಳಿತು ಒನ್‌ಲೈನ್‌ ಮೇಲೆ ಕಥೆ ಸಿದ್ಧಪಡಿಸುತ್ತಿವೆ. ಆ ಬಳಿಕ ದರ್ಶನ್‌ ಅವರಿಗೆ ಕಥೆ ಕೇಳಿಸಿ, ಅವರು ಎಲ್ಲವನ್ನೂ ಓಕೆ ಮಾಡಿ ಗ್ರೀನ್‌ ಸಿಗ್ನಲ್‌ ಕೊಟ್ಟರೆ, ಅವರ ಡೇಟ್‌ ನೋಡಿಕೊಂಡು “ಮದಗಜ’ ಮಾಡುತ್ತೇನೆ. ಸದ್ಯಕ್ಕೆ ದರ್ಶನ್‌ ಅಪಘಾತದಿಂದ ಚೇತರಿಸಿಕೊಳ್ಳಬೇಕಿದೆ. ಅವರ “ಕುರುಕ್ಷೇತ್ರ’ ಬಿಡುಗಡೆಯಾಗಬೇಕು, “ಯಜಮಾನ’ ರಿಲೀಸ್‌ ಆಗಬೇಕು ಆಮೇಲೆ “ಒಡೆಯ’ ಚಿತ್ರ ಪೂರ್ಣಗೊಳ್ಳಬೇಕು.

ಅದಾದ ಮೇಲೆ ದರ್ಶನ್‌ ಡೇಟ್‌ ಸಿಕ್ಕರೆ “ಮದಗಜ’ ಶುರು ಮಾಡುತ್ತೇನೆ. ಕಥೆ ಬಗ್ಗೆ ಮಾತ್ರ ಗಮನಹರಿಸಿದ್ದೇವೆ. ಆ ನಂತರ ನಿರ್ದೇಶಕರು ಯಾರು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ, ಕಲಾವಿದರು ಯಾರೆಂಬ ಬಗ್ಗೆ ನಿರ್ಧರಿಸುತ್ತೇವೆ. ಒಟ್ಟಲ್ಲಿ, “ಮದಗಜ’ ದೊಡ್ಡ ಬಜೆಟ್‌ನ ಚಿತ್ರವಾಗಲಿದೆ. “ಧರ್ಮ’ ಬಳಿಕ ನಾನು ದರ್ಶನ್‌ ಜೊತೆ ಸಿನಿಮಾ ಮಾಡಬೇಕು ಅಂತಾನೇ ದೊಡ್ಡ ಗ್ಯಾಪ್‌ ತೆಗೆದುಕೊಂಡಿದ್ದೇನೆ.

ದರ್ಶನ್‌ ನನಗೆ ಸಿನಿಮಾ ಮಾಡುವುದಾಗಿಯೂ ಹೇಳಿದ್ದಾರೆ. ಈ ಬಾರಿ “ಮದಗಜ’ ಮೂಲಕ ಕನ್ನಡಕ್ಕೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಕೊಡಲು ತಯಾರಾಗುತ್ತಿದ್ದೇವೆ. ದರ್ಶನ್‌ ಸಿನಿಮಾ ಅಂದಮೇಲೆ, ಬಿಗ್‌ ಬಜೆಟ್‌ ಬಯಸುತ್ತೆ. ಅದಕ್ಕೆಲ್ಲಾ ಪ್ಲಾನಿಂಗ್‌ ಆಗುತ್ತಿದೆ’ ಎನ್ನುವ ರಾಮಮೂರ್ತಿ, ದರ್ಶನ್‌ಗೆ “ಮದಗಜ’ ಶೀರ್ಷಿಕೆಯೇ ಯಾಕೆ ಸೂಕ್ತ ಎಂಬುದನ್ನು ವಿವರಿಸುವುದು ಹೀಗೆ,

“ಬಂಗಾರದ ಮನುಷ್ಯ’ ಶೀರ್ಷಿಕೆಗೆ ಡಾ.ರಾಜಕುಮಾರ್‌ ಅವರು ಮಾಡಿದರೇ ಚೆಂದ, “ಸಾಹಸ ಸಿಂಹ’ ಶೀರ್ಷಿಕೆಗೆ ವಿಷ್ಣುವರ್ಧನ್‌ ಅವರೇ ಸೂಕ್ತ. “ಮದಗಜ’ ಅಂದರೆ ಅದು ಫೋರ್ಸ್‌ ಇರುವಂತಹ ಶೀರ್ಷಿಕೆ. ಹಾಗಾಗಿ, ನಮ್ಮ ಬಳಿ ಆ ಟೈಟಲ್‌ ಇದೆ. ಅದೇ ಟೈಟಲ್‌ನಡಿ ದರ್ಶನ್‌ಗೆ ಚಿತ್ರ ಮಾಡುತ್ತಿರುವುದಾಗಿ  ಸ್ಪಷ್ಟಪಡಿಸುತ್ತಾರೆ ರಾಮಮೂರ್ತಿ.

Advertisement

Udayavani is now on Telegram. Click here to join our channel and stay updated with the latest news.

Next