ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮೇಲಿನ ಆರೋಪ ಸಾಬೀತಾದರೆ ಅವರನ್ನು ನಿಷೇಧ ಮಾಡುವ ಕುರಿತು ನಿರ್ಧರಿಸು ತ್ತೇವೆ ಎಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್) ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದ್ದಾರೆ. ಶನಿವಾರ ಚಿತ್ರದುರ್ಗಕ್ಕೆ ತೆರಳಿ ಹತ್ಯೆಗೆ ಒಳಗಾಗಿರುವ ರೇಣುಕಾ ಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಗುತ್ತದೆ ಎಂದಿದ್ದಾರೆ.
ಕೊಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂದು ಕೇಳಿ ಬಂದ ಕೂಗಿನ ಹಿನ್ನೆಲೆಯಲ್ಲಿ ಗುರುವಾರ ಚಿತ್ರರಂಗದ ಪ್ರಮುಖರ ಸಭೆಯನ್ನು ಫಿಲ್ಮ್ ಚೇಂಬರ್ ನಡೆಸಿತು. ಅನಂತರ ಮಾತನಾಡಿದ ಅಧ್ಯಕ್ಷ ಎನ್.ಎಂ. ಸುರೇಶ್, “ಈ ಅನ್ಯಾಯವನ್ನು ನಾವು ಖಂಡಿಸಲೇಬೇಕು. ಮೊದಲು ರೇಣುಕಾಸ್ವಾಮಿ ಕುಟುಂಬ ವನ್ನು ಭೇಟಿ ಮಾಡಲಿದ್ದೇವೆ. ದರ್ಶನ್ ದೊಡ್ಡ ನಟ, ಅವರ ಮೇಲೆ ಭಾರೀ ಬಂಡವಾಳ ಹೂಡಲಾಗಿದೆ, ಹಾಗಾಗಿ ನಿರ್ಮಾಪಕರ ಬಗ್ಗೆಯೂ ಯೋಚಿಸಬೇಕು. ಸದ್ಯ ನಿಷೇಧದ ಬಗ್ಗೆ ನಿರ್ಧರಿಸಲು ಆಗುವುದಿಲ್ಲ. ಈಗ ತನಿಖೆ ನಡೆಯುತ್ತಿದೆ. ತಪ್ಪು ಸಾಬೀತಾದರೆ ಕಲಾ ವಿದರ ಸಂಘದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.
ಸದ್ಯಕ್ಕಂತೂ ದರ್ಶನ್ ಸಿನೆಮಾ ಮಾಡಲು ಆಗುವುದಿಲ್ಲ. ನಾವು ರಾಜಿ ಮಾಡಿಕೊಂಡು ಯಾರನ್ನೂ ರಕ್ಷಿಸುವ ಪ್ರಮೇಯವೇ ಇಲ್ಲ. ಇಲ್ಲಿ ನಡೆದಿರುವುದು ಕೊಲೆ. ಯಾವುದೇ ಮುಚ್ಚುಮರೆ ಇಲ್ಲ. ನಿರ್ಮಾಪಕರ ಆರ್ಥಿಕ ಪರಿಸ್ಥಿತಿಯನ್ನೂ ನೋಡಬೇಕು. ಮುಂದಿನ ದಿನಗಳಲ್ಲಿ ಆ ನಿರ್ಮಾಪಕರನ್ನು ಕರೆಸಿ ಮಾತನಾಡುತ್ತೇವೆ ಎಂದಿದ್ದಾರೆ. ಇದೇವೇಳೆ ಮಂಡಳಿ ಮತ್ತೂಮ್ಮೆ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಿದೆ.
ಚಿಂತೆಯಲ್ಲಿ ನಿರ್ಮಾಪಕರು
ನಟ ದರ್ಶನ್ ಅವರನ್ನು ನಿಷೇಧಿಸಬೇಕೆಂಬ ಒತ್ತಡ ಒಂದು ಕಡೆಯಾದರೆ, ಅವರ ಮೇಲೆ ನಿರ್ಮಾಪಕರು 50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿರುವುದು ಮಂಡಳಿಗೆ ತಲೆನೋವಾಗಿದೆ. ಈಗಾಗಲೇ ದರ್ಶನ್ “ಡೆವಿಲ್’, “ಸಿಂಧೂರ ಲಕ್ಷ್ಮಣ’, ಪ್ರೇಮ್ ನಿರ್ದೇಶನದ ಸಿನೆಮಾ, ತಮಿಳು, ತೆಲುಗು ನಿರ್ಮಾಪಕರ ಸಿನೆಮಾಗಳ ಜತೆಗೆ ಹಲವು ನಿರ್ಮಾಪಕರಿಗೆ ಸಿನೆಮಾ ಮಾಡುವುದಾಗಿ ಮುಂಗಡ ಪಡೆದಿದ್ದಾರೆ. 25 ಲಕ್ಷ ರೂ.ಗಳಿಂದ 3 ಕೋ.ರೂ.ವರೆಗೂ ಪಡೆದುಕೊಂಡಿದ್ದಾರೆ. ಇದಲ್ಲದೆ ಇನ್ನೊಂದಿಷ್ಟು ನಿರ್ಮಾಣ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸಿನೆಮಾ ಮಾಡುವುದಕ್ಕಾಗಿ ದರ್ಶನ್‌ಗೆ ಮುಂಗಡ ರೂಪದಲ್ಲಿ ಹಣ ನೀಡಿವೆ. “ಡೆವಿಲ್’ ಸಿನೆಮಾ ಕೆಲವೇ ದಿನ ಶೂಟಿಂಗ್ ಆಗಿದೆ. ಈಗಾಗಲೇ ಆ ಚಿತ್ರಕ್ಕೂ ದರ್ಶನ್ ಮುಂಗಡ, ಶೂಟಿಂಗ್ ವೆಚ್ಚವೆಂದು ಕೋಟಿಗಟ್ಟಲೆ ಹಣ ವ್ಯಯಿಸಿದ್ದು, ಸದ್ಯ ನಿರ್ಮಾಪಕರು ಚಿಂತೆಗೀಡಾಗಿದ್ದಾರೆ.