“ಗುರುಗಳಿಗೆ ಒಳ್ಳೇದಾಗಬೇಕು. ಬಹಳ ಗ್ಯಾಪ್ ನಂತರ ಮಾಡಿದ ಈ ಚಿತ್ರಕ್ಕೆ ದೊಡ್ಡ ಗೆಲುವು ಸಿಗಬೇಕು..’ “ಮುಹೂರ್ತ ದಿನದಿಂದ ಹಿಡಿದು, ಇಲ್ಲಿಯವರೆಗೂ ಬೆನ್ನೆಲುಬಾಗಿ ನಿಂತು, ಇದೀಗ ವಿತರಣೆಯನ್ನೂ ಮಾಡುತ್ತಿರುವ “ರಾಜಾಧಿರಾಜ’ನಿಗೆ ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು…’
– ಹೀಗೆ ಪರಸ್ಪರ ಹೇಳಿಕೊಂಡಿದ್ದು, ದರ್ಶನ್ ಮತ್ತು ನಿರ್ದೇಶಕ ಪಿ.ಎನ್.ಸತ್ಯ. ಸಂದರ್ಭ, “ಬೆಂಗಳೂರು ಅಂಡರ್‌ವರ್ಲ್ಡ್’ ಸಿನಿಮಾದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ. ಅಂದು ದರ್ಶನ್ ವೇದಿಕೆ ಏರುತ್ತಿದ್ದಂತೆಯೇ, ಮೈಕ್ ಹಿಡಿದು, “ಗುರುಗಳಾದ ಸತ್ಯ ಅವರ ಬಗ್ಗೆ ಹೇಳಲೇಬೇಕು. ನಾನಿಂದು ಇಲ್ಲಿ ನಿಲ್ಲೋಕೆ ಕಾರಣ, ಇಷ್ಟೊಂದು ಸಕ್ಸಸ್ ಪಡೆಯೋಕೆ ಕಾರಣ ಅವರೇ. ತುಂಬ ಗ್ಯಾಪ್ ಬಳಿಕ ಈ ಚಿತ್ರ ಮಾಡಿದ್ದಾರೆ.
ಅವರಿಗೆ ದೊಡ್ಡ ಗೆಲುವು ಸಿಗಬೇಕು. 2002 ರಲ್ಲಿ “ಮೆಜೆಸ್ಟಿಕ್’ ಮಾಡಿ ದೊಡ್ಡ ಗೆಲುವು ಕಂಡವರು. ಈ ಹದಿನೈದು ವರ್ಷಗಳಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸತ್ಯ ಅವರ ಕೆಪಾಸಿಟಿ ಏನೂಂತ ನನಗೊತ್ತು. ಪ್ರತಿಯೊಂದು ಶಾಟ್, ಪ್ರತಿಯೊಂದು ಲುಕ್‌ಗೂ ಆದ್ಯತೆ ಕೊಡ್ತಾರೆ. ಅದೆಲ್ಲವೂ ಇಲ್ಲಿ ಎದ್ದು ಕಾಣುತ್ತೆ. ನಾನು ಸಿನಿಮಾ ನೋಡಿದ್ದೇನೆ. “ಅಂಡರ್‌ವರ್ಲ್ಡ್’ ಸಿನ್ಮಾ ಹೇಗಿರಬೇಕೋ ಅದೆಲ್ಲಾ ಕ್ವಾಲಿಟಿ ಇಲ್ಲಿದೆ’ ಎಂದು ಗುರು ಸತ್ಯ ಕೆಲಸ ಕೊಂಡಾಡಿದರು ದರ್ಶನ್.
ಅದಾದ ಬಳಿಕ ಅದೇ ವೇದಿಕೆಗೆ ಬಂದ ನಿರ್ದೇಶಕ ಪಿ.ಎನ್ ಸತ್ಯ, “ದರ್ಶನ್ ಸರ್, ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದಷ್ಟೇ ಅಲ್ಲ, ಅಂದಿನಿಂದ ಇಂದಿನವರೆಗೂ ಜತೆಗಿದ್ದು, ಸಹಕಾರ ಕೊಟ್ಟಿದ್ದಾರೆ. ಫೆಬ್ರವರಿ 18, 2002 ಕ್ಕೆ “ಮೆಜಸ್ಟಿಕ್’ ಬಂದಿತ್ತು. ಈಗ ಚಿತ್ರ ರಿಲೀಸ್ ಆಗಿ 15 ವರ್ಷಗಳಾಗಿವೆ. ಅಂದಿನಿಂದಲೂ ದರ್ಶನ್ ಹೇಗಿದ್ದಾರೋ, ಹಾಗೆಯೇ ಇದ್ದಾರೆ. ಅದೇ ಪ್ರೀತಿ, ಮತ್ತದೇ ವಿಶ್ವಾಸ ಇಟ್ಟುಕೊಂಡಿದ್ದಾರೆ.
ಸರ್, ಒಂದು ಸಿನಿಮಾ ಮಾಡ್ತಾ ಇದೀನಿ, ನೀವು ಕ್ಲಾಪ್ ಮಾಡಬೇಕು ಅಂದಾಗ, “ಗುರುಗಳೇ, ಫೋನ್ ಎಲ್ಲಾ ಯಾಕೆ, ಟೈಮ್, ಪ್ಲೇಸ್ ಹೇಳಿ ಸಾಕು ನಾನೇ ಬರ್ತೀನಿ’ ಅಂತ ಪ್ರೀತಿಯಿಂದ ಹೇಳಿದ ವ್ಯಕ್ತಿ ಅವರು. ಆ ಅಭಿಮಾನವೇ ಇಂದು ಅವರನ್ನು ದೊಡ್ಡ ಸ್ಟಾರ್‌ನನ್ನಾಗಿಸಿದೆ. ನಮ್ಮ ಚಿತ್ರವನ್ನು ಅವರ ತೂಗುದೀಪ ಸಂಸ್ಥೆ ಮೂಲಕ ವಿತರಣೆ ಮಾಡುತ್ತಿದ್ದಾರೆ. ಇದಕ್ಕಿಂತ ಅದೃಷ್ಟ ಬೇಕಿಲ್ಲ’ ಎಂದು ದರ್ಶನ್ ಅವರ ಗುಣಗಾನ ಮಾಡಿದರು ಸತ್ಯ. ಇವರಿಬ್ಬರ ಮಾತುಗಳಿಗೆ ಅಲ್ಲಿದ್ದವರ ಚಪ್ಪಾಳೆ,ಶಿಳ್ಳೆಗಳಿಗೆ ಪಾರವೇ ಇರಲಿಲ್ಲ.
ಅದೇನೆ ಇರಲಿ, ಸತ್ಯ ಅಂದು ವೇದಿಕೆಗೆ ಬಂದಾಗ, ಎಲ್ಲರಿಗೂ ಆಶ್ಚರ್ಯ ಆಗಿದ್ದಂತೂ ನಿಜ. ಯಾಕೆಂದರೆ, ಸತ್ಯ ಸಾಕಷ್ಟು ಸಣ್ಣಗಾಗಿದ್ದರು. ಲವಲವಿಕೆಯೂ ಮಾಯವಾಗಿತ್ತು. ಆದರೆ, ಅದೇ ನಗು, ಅದೇ ಮಾತುಗಳ ಮೂಲಕ ಎಲ್ಲರನ್ನೂ ಖುಷಿಪಡಿಸಿದ್ದು ಸುಳ್ಳಲ್ಲ. ಅನಾರೋಗ್ಯದಿಂದಾಗಿ, ಸತ್ಯ ಗುರುತು ಸಿಗದಷ್ಟು ಸಣ್ಣಗಾಗಿದ್ದರು. “ಬೆಂಗಳೂರು ಅಂಡರ್‌ವರ್ಲ್ಡ್’ ರಿಲೀಸ್ ಆಗಿ, ಜನ ಒಪ್ಪಿಕೊಂಡರೆ, ನಾನು ವೇಗವಾಗಿಯೇ ಚೇತರಿಸಿಕೊಂಡು ಬಿಡ್ತೀನಿ ಬಿಡಿ ಸಾರ್…’ ಅಂತ ನಗೆಚಟಾಕಿ ಹಾರಿಸುತ್ತಾರೆ ಸತ್ಯ.