Advertisement

Renukaswamy case:ಸೆರೆಗೆ ಪೊಲೀಸರ ರಹಸ್ಯ ಕಾರ್ಯಾಚರಣೆ

01:07 AM Jun 12, 2024 | Team Udayavani |

ಬೆಂಗಳೂರು: ಸೋಮವಾರ ರಾತ್ರಿಯೇ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪಾತ್ರ ಇರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ನಗರ ಪೊಲೀಸರು, ಅವರ ಬಂಧನಕ್ಕೆ ವಿಶೇಷ ಕಾರ್ಯಾಚರಣೆ ನಡೆಸಿದರು.

Advertisement

ಪ್ರಕರಣದ ತನಿಖಾ ಮುಖ್ಯಸ್ಥರಾಗಿದ್ದ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌, ಈ ವಿಚಾರವನ್ನು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಮೂಲಕ ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅವರಿಗೆ ತಿಳಿಸಿದ್ದಾರೆ. ಬಳಿಕ ತಡರಾತ್ರಿಯೇ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ಗೆ ಮಾಹಿತಿ ನೀಡಿ ದರ್ಶನ್‌ ಬಂಧನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಪ್ಪು ಮಾಡಿದ್ದರೆ, ಕಾನೂನು ಅಡಿಯಲ್ಲಿ ಕ್ರಮಕೈಗೊಳ್ಳಿ ಎಂದು ಮೌಖಿಕ ಆದೇಶ ನೀಡಿದ್ದರು.

ಈ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ವಿಜಯನಗರ ಉಪವಿಭಾಗದ ಪೊಲೀಸರು, ದರ್ಶನ್‌ ಮೈಸೂರಿನಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ತಡರಾತ್ರಿಯೇ ಮೈಸೂರಿಗೆ ತೆರಳಿದ್ದಾರೆ. ಅನಂತರ ದರ್ಶನ್‌ನ ತೋಟದ ಮನೆಯಲ್ಲಿ ವಿಚಾರಿಸಿದಾಗ ಆತನ ಮೈಸೂರಿನ ಪ್ರತಿಷ್ಠಿತ ಹೊಟೇಲ್‌ನಲ್ಲಿರುವ ಮಾಹಿತಿ ಸಿಕ್ಕಿತ್ತು. ಆದರೆ ಹೊಟೇಲ್‌ನಲ್ಲಿ ದರ್ಶನ್‌ ಇಲ್ಲ. ಜಿಮ್‌ಗೆ ಹೋಗಿದ್ದಾರೆ ಎಂದು ಹೊಟೇಲ್‌ ಸಿಬಂದಿ ತಿಳಿಸಿದ್ದರು. ಬಳಿಕ ಜಿಮ್‌ಗೆ ತೆರಳಿದಾಗ ದರ್ಶನ್‌ ಇರುವುದು ಗೊತ್ತಾಗಿದೆ. ಹೀಗಾಗಿ ಜಿಮ್‌ನ ಹೊರಭಾಗದಲ್ಲೇ ಕಾಯ್ದ ಪೊಲೀಸರು, ಬೆಳಗ್ಗೆ 11 ಗಂಟೆ ಸುಮಾರಿಗೆ ಜಿಮ್‌ನಿಂದ ಹೊರಬರುತ್ತಿದ್ದಂತೆ ದರ್ಶನ್‌ಗೆ ವಿಚಾರ ತಿಳಿಸಿ ಬಂಧಿಸಿ, ನಗರಕ್ಕೆ ಕರೆ ತಂದಿದ್ದಾರೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ
ಕರೆದೊಯ್ದಿದ್ದು ಅಭಿಮಾನಿ ರಾಘವೇಂದ್ರ?
ಚಿತ್ರದುರ್ಗ: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದಿದ್ದು ದರ್ಶನ್‌ ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಘವೇಂದ್ರ ಎನ್ನಲಾಗಿದ್ದು, ರಾಘವೇಂದ್ರ ಬಂಧನವಾಗಿರುವ ವಿಷಯ ತಿಳಿದು ಅವರ ಪತ್ನಿ ಸಹನಾ ದಿಕ್ಕೇ ತೋಚದಂತಾಗಿದ್ದಾರೆ.

ಅವರ ಮನೆ ಬಳಿ ತೆರಳಿದ ಸುದ್ದಿಗಾರರಿಗೆ ಕೈ ಮುಗಿದ ಸಹನಾ, ನನಗೆ ಏನೂ ಗೊತ್ತಿಲ್ಲ. ನನ್ನ ಪತಿಯ ಮೊಬೈಲ್‌ 2 ದಿನದಿಂದ ಸ್ವಿಚ್‌ ಆಫ್‌ ಬರು ತ್ತಿದೆ. ಟಿವಿಗಳಲ್ಲಿ ಸುದ್ದಿ ಬಂದ ವಿಷಯ ತಿಳಿದು ತುಂಬಾ ಜನ ಫೋನ್‌ ಮಾಡುತ್ತಿದ್ದಾರೆ. ಆತಂಕವಾಗುತ್ತಿದೆ. ಏನು ಮಾಡಬೇಕು ಎನ್ನುವುದೇ ತಿಳಿಯು ತ್ತಿಲ್ಲ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ರಾಘವೇಂದ್ರ, ಸುಮಾರು 15 ವರ್ಷಗಳಿಂದಲೂ ದರ್ಶನ್‌ ಅವರ ಅಭಿಮಾನಿ ಆಗಿದ್ದಾರೆ.

Advertisement

ಯಾರ್ಯಾರು ಬಂಧನ?
1.ದರ್ಶನ್‌: ಸ್ಯಾಂಡಲ್‌ವುಡ್‌ ನಟ
2.ಪವಿತ್ರಾ ಗೌಡ:ದರ್ಶನ್‌ ಪ್ರೇಯಸಿ
3.ಕೆ. ಪವನ್‌:ದರ್ಶನ್‌, ಪವಿತ್ರಾಗೌಡ ಅಪ್ತ
4.ಪ್ರದೂಷ್‌: ಹೊಟೇಲ್‌ ಉದ್ಯಮಿ
5.ವಿನಯ್‌:ಹತ್ಯೆ ನಡೆದ ಶೆಡ್‌ ಮಾಲಕ
6.ರಾಘವೇಂದ್ರ: ಚಿತ್ರದುರ್ಗ ದಿಂದ ರೇಣುಕಾ ಸ್ವಾಮಿ ಕರೆತಂದವ
7.ನಂದೀಶ್‌: ರೇಣುಕಾಸ್ವಾಮಿ ಯನ್ನು ಅಪಹರಿಸಿ ಕರೆತಂದವ
8.ಕೇಶವಮೂರ್ತಿ: ಪ್ರದೂಷ್‌ ಗೆಳೆಯ, ಉದ್ಯಮಿ
9.ಎಂ. ಲಕ್ಷ್ಮಣ್‌: ದರ್ಶನ್‌ ಆಪ್ತ
10.ದೀಪಕ್‌ ಕುಮಾರ್‌:ದರ್ಶನ್‌ ಆಪ್ತ
11.ಕಾರ್ತಿಕ್‌: ದರ್ಶನ್‌ ಕಾರು ಚಾಲಕ
12.ಆರ್‌. ನಾಗರಾಜ್‌: ದರ್ಶನ್‌ ಆಪ್ತ, ಮ್ಯಾನೇಜರ್‌
13.ನಿಖೀಲ್‌ ನಾಯಕ್‌: ದರ್ಶನ್‌ ಆಪ್ತ

Advertisement

Udayavani is now on Telegram. Click here to join our channel and stay updated with the latest news.

Next