ಮುನಿರತ್ನ ನಿರ್ಮಿಸುತ್ತಿರುವ “ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು, ಅದಕ್ಕೆಂದೇ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಟೆಸ್ಟ್‌ಶೂಟ್‌ನಲ್ಲಿ ಪಾಲ್ಗೊಂಡಿದ್ದು ಎಲ್ಲವೂ ಸುದ್ದಿಯಾಗಿದೆ. ಚಿತ್ರತಂಡದವರು ಇದುವರೆಗೂ ದರ್ಶನ್ ಅವರ ಒಂದೇ ಒಂದು ಫೋಟೋವನ್ನು ಸಹ ಇದುವರೆಗೂ ಹೊರಗೆಬಿಟ್ಟಿಲ್ಲ.
ದುರ್ಯೋಧನನ ಗೆಟಪ್‌ನಲ್ಲಿ ದರ್ಶನ್ ಅವರು ಹೇಗೆ ಕಾಣುತ್ತಾರೆ ಎಂಬ ವಿಷಯವು ಒಂದಿಷ್ಟು ಜನರನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಾರಿಗೂ ಗೊತ್ತಿಲ್ಲ. ಹೀಗಿರುವಾಗಲೇ ದುರ್ಯೋಧನನ ಗೆಟಪ್‌ನಲ್ಲಿ ದರ್ಶನ್ ಕಾಣಿಸಿಕೊಂಡಿರುವ ಫೋಟೋವೊಂದು ಇದೀಗ ಲೀಕ್ ಆಗಿರುವುದಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಮತ್ತು ದರ್ಶನ್ ಅವರ ಅಭಿಮಾನಿಗಳ ವಲಯದಲ್ಲಿ ಸಖತ್ ಹವಾ ಎಬ್ಬಿಸುತ್ತಿದೆ.
ಫೋಟೋ ನೋಡಿದ ತಕ್ಷಣ, ದರ್ಶನ್ ಅವರು ದುರ್ಯೋಧನನ ಗೆಟಪ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಾರೆ ಎಂದನಿಸಬಹುದು. ಆದರೆ, ಸೂಕ್ಷ್ಮವಾಗಿ ನೋಡಿದರೆ ಇದು ದರ್ಶನ್ ಅವರ ಫೋಟೋವಲ್ಲ ಎಂದು ಗೊತ್ತಾಗುತ್ತದೆ. ಯಾವುದೋ ಫೋಟೋಗೆ, ದರ್ಶನ್ ಅವರ ಮುಖವನ್ನು ಅಂಟಿಸಿ, ಇದು “ಕುರುಕ್ಷೇತ್ರ’ ಚಿತ್ರದ ದರ್ಶನ್ ಅವರ ಗೆಟಪ್ಪು ಎಂದು ಹೇಳಲಾಗುತ್ತಿದೆ. ಈ ಕೆಲಸ ಮಾಡಿದ್ದು ಯಾರು ಮತ್ತು ಯಾಕೆ ಎಂಬ ವಿಷಯ ಗೊತ್ತಿಲ್ಲ.
ತಮಾಷೆಗೋ, ಕುಚೋದ್ಯಕ್ಕೋ ಹೀಗೆ ಮಾಡಿರುವ ಸಾಧ್ಯತೆ ಇರಬಹುದು.ಹಾಗೆ, ಇದು ಹಲವು ದಶಕಗಳ ಹಿಂದಿನ ಫೋಟೋ. 1977ರಲ್ಲಿ ಬಿಡುಗಡೆಯಾದ ತೆಲುಗಿನ “ದಾನ ವೀರ ಶೂರ ಕರ್ಣ’ ಚಿತ್ರದ ಫೋಟೋ ಇದು. ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದು ತೆಲುಗಿನ ದಿಗ್ಗಜ ನಟ ಎನ್.ಟಿ. ರಾಮರಾವ್. ಅವರೇ ಈ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಇದು ಅವರದ್ದೇ ಫೋಟೋ.
ಆ ಫೋಟೋದಲ್ಲಿ ಅವರ ಮುಖದ ಬದಲಾಗಿ ದರ್ಶನ್ ಅವರ ಮುಖವನ್ನು ಅಂಟಿಸಿ, ಇದು ಕನ್ನಡದ “ಕುರುಕ್ಷೇತ್ರ’ ಚಿತ್ರದ ಫೋಟೋ ಎಂದು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಸಾಕಷ್ಟು ಸುದ್ದಿ ಮಾಡುತ್ತಿದೆ ಸಹ. ಆದರೆ, ನಂಬುವುದಕ್ಕಿಂತ ಮುನ್ನ ಇದು ನಕಲಿ ಎಂದು ಗೊತ್ತಿರಲಿ.