Advertisement

ಬರ್ತ್‌ಡೇಗೆ ದವಸ-ಧಾನ್ಯ ನೀಡಿ…ಅಭಿಮಾನಿಗಳಲ್ಲಿ ದರ್ಶನ್‌ ಮನವಿ

09:50 AM Jan 21, 2020 | Lakshmi GovindaRaj |

ಕಳೆದ ವರ್ಷ ದರ್ಶನ್‌ ತಮ್ಮ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನೆಂದರೆ ಹುಟ್ಟುಹಬ್ಬದಂದು ಅಭಿಮಾನಿಗಳು ಹಾರ-ತುರಾಯಿ, ಕೇಕ್‌ ಬದಲು ದವಸ-ಧಾನ್ಯ ತಂದರೆ ಅದನ್ನು ಅಗತ್ಯ ಇರುವ ಜಾಗಗಳಿಗೆ ತಲುಪಿಸುತ್ತೇನೆ ಎಂದು. ದರ್ಶನ್‌ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ಕ್ವಿಂಟಾಲ್‌ಗ‌ಟ್ಟಲೇ ದವಸ-ಧಾನ್ಯಗಳನ್ನು ತಂದಿದ್ದರು.

Advertisement

ದರ್ಶನ್‌ ಕೂಡಾ ಹೇಳಿದ ಮಾತಿನಂತೆ ಅದನ್ನು ಅಗತ್ಯವಿರುವ ಅನಾಥಶ್ರಮ, ವೃದ್ಧಾಶ್ರಮ ಸೇರಿದಂತೆ ನಾನಾ ಕಡೆಗಳಿಗೆ ತಲುಪಿಸಿದ್ದರು. ಈ ಬಾರಿಯೂ ದರ್ಶನ್‌ ತಮ್ಮ ಹುಟ್ಟುಹಬ್ಬವನ್ನು (ಫೆ.16) ಕಳೆದ ವರ್ಷದಂತೆ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಕುರಿತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. “ಹುಟ್ಟುಹಬ್ಬಕ್ಕೆ ಬ್ಯಾನರ್‌ ಕೇಕ್‌, ಹಾರಗಳನ್ನು ದಯವಿಟ್ಟು ತರಬೇಡಿ.

ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು’ ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸುತ್ತಿರುವ ಅವರ ಅಭಿಮಾನಿಗಳು ಈಗಾಗಲೇ ತಮ್ಮ ಕೈಲಾದ ಮಟ್ಟಿಗೆ ದವಸ-ಧಾನ್ಯಗಳನ್ನು ತಂದುಕೊಡುತ್ತಿದ್ದಾರೆ. ಈ ಮೂಲಕ ಈ ವರ್ಷವೂ ದರ್ಶನ್‌ ಹುಟ್ಟುಹಬ್ಬ ಅರ್ಥಪೂರ್ಣವಾಗಿರಲಿದೆ.

ಗೋಶಾಲೆಗೆ ಮೇವು: ಇನ್ನು ದರ್ಶನ್‌ ಗೋಶಾಲೆಗಳಿಗೆ ಮೇವು ಒದಗಿಸಿದ್ದಾರೆ. ಸ್ನೇಹಿತರೊಂದಿಗೆ ಅನೇಕ ಟ್ರಾಕ್ಟರ್‌ಗಳಲ್ಲಿ ಗೋಶಾಲೆಗಳಿಗೆ ಮೇವು ಒದಗಿಸಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ. ತಮ್ಮ ಹುಟ್ಟುಹಬ್ಬ ಆಚರಣೆಯ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ದರ್ಶನ್‌, “ಈ ವರ್ಷವೂ ಸರಳವಾಗಿ ಆಚರಿಸುತ್ತಿದ್ದೇನೆ. ಕಳೆದ ವರ್ಷದಂತೆ ದವಸ-ಧಾನ್ಯಗಳನ್ನು ತಂದುಕೊಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನೆ. ನಮ್ಮ ಕೈಲಾದ ಮಟ್ಟಿಗೆ ಗೋಶಾಲೆಗಳಿಗೂ ಮೇವು ಒದಗಿಸಿದ್ದೇವೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next