ನ್ಯೂಯಾರ್ಕ್: ಸಬ್ ಮರೀನ್‌ಗಳು (ಜಲಾಂತರ್ಗಾಮಿ ನೌಕೆ) ದುಬಾರಿ ಇಂಧನ ವೆಚ್ಚ ಬೇಡುವ ಕಾರಣ ಅವುಗಳಿಗೆ ಹೆಚ್ಚಾಗಿ ನ್ಯೂಕ್ಲಿಯರ್ ಇಂಧನ ಬಳಸುವುದು ಗೊತ್ತೇ ಇದೆ. ಆದರೆ, ಅಮೆರಿಕದ ರಕ್ಷಣಾ ತಂತ್ರ ಜ್ಞಾನ ಸಂಸ್ಥೆಯೊಂದು ಅತ್ಯಾಧುನಿಕ ಸಬ್ ಮರೀನ್ ಆವಿಷ್ಕರಿಸಿದ್ದು, ಇಂಧನ ಪೂರಣವಿಲ್ಲದೆ ತಿಂಗಳುಗಟ್ಟಲೆ ಇದು ಸಮುದ್ರದೊಳಕ್ಕೆ ಸಂಚರಿಸಬಲ್ಲದು!
“ಮಂತಾರೇ’ ಎಂಬ ಹೆಸರಿನ ಈ ಮಾನವರಹಿತ ಜಲಾಂತರ್ಗಾಮಿ ನೌಕೆಯನ್ನು ಅಮೆರಿಕದ ಸುಧಾರಿತಾ ರಕ್ಷಣಾ ಸಂಶೋಧನಾ ಯೋಜನೆ ಏಜೆನ್ಸಿ (ಡಿಎಆರ್‌ಪಿಎ) ಅಭಿವೃದ್ಧಿ ಪಡಿಸಿದೆ. ಇಂಧನ ಕೊಯ್ಲು ವ್ಯವಸ್ಥೆಯಿಂದಲೇ ಇದು ಕಡಲಾಳದಲ್ಲಿ ಬಲು ದೂರಕ್ಕೆ ಸಂಚರಿಸುತ್ತದೆ.
ಇಂಧನ ಕೊಯ್ಲು ಹೇಗೆ?: ಸಬ್ ಮರೀನ್‌ಗೆ ವಿಮಾನದ ವಿನ್ಯಾಸದಲ್ಲಿ ವಿಶೇಷ ಆಕಾರ ನೀಡಲಾಗಿದೆ. ಕಡಿಮೆ ಇಂಧನ ಬಳಕೆಗೆ ಇದರ ಆಕಾರವೇ ಮೂಲ ಕಾರಣವಾಗಿದ್ದು, ಅತ್ಯಲ್ಪ ಇಂಧನದಿಂದ ಬಹಳಷ್ಟು ದೂರ ಇದು ಕ್ರಮಿಸಬಲ್ಲದು. ಅಲ್ಲದೆ, ಸಮುದ್ರದೊಳಗಿಂದಲೇ ಸ್ವತಃ ರೀಚಾರ್ಚ್ ಆಗುವಂಥ ವ್ಯವಸ್ಥೆಯನ್ನೂ ಒಳಗೊಂಡಿದೆ. ಶತ್ರುರಾಷ್ಟ್ರಗಳ ಸಬ್ ಮರೀನ್‌ಗಳ ಇರುವಿಕೆಯನ್ನೂ ಇವುಗಳ ಚಾಣಾಕ್ಷ ಸೆನ್ಸಾರ್ ತಂತ್ರಜ್ಞಾನ ತ್ವರಿತವಾಗಿ ಪತ್ತೆ ಹಚ್ಚಬಲ್ಲದು.
ಇದನ್ನೂ ಓದಿ:ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಶೇ.30 ವೇತನ ಕಟ್!
“ದೀರ್ಘಾವಧಿ, ಸುದೀರ್ಘ ಶ್ರೇಣಿ, ಪೇಲೋಡ್ ಸಾಮರ್ಥ್ಯ’- ಇವೆಲ್ಲದರಲ್ಲೂ ರೊಬೊಟಿಕ್ ತಂತ್ರಜ್ಞಾನ ಹೊಂದಿದೆ. ಇಂಧನ ಕೊಯ್ಲು ಮಾಡಿಕೊಳ್ಳುತ್ತಲೇ ಮುಂಚೂಣಿ ನೆಲೆಗಳಲ್ಲಿ ತಿಂಗಳಾನುಗಟ್ಟಲೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಡಿಎಆರ್‌ಪಿಎ ಪ್ರಸ್ತುತ ಇದರ ಪ್ರಾಯೋಗಿಕ ಮಾದರಿ ಪರಿಚಯಿಸಿದ್ದು, ಭವಿಷ್ಯದ ಕಡಲ ರಕ್ಷಣಾ ವಲಯಗಳಿಗೆ ಮಂತಾರೇ ನಿಯೋಜನೆಗೊಳ್ಳುವ ಸಾಧ್ಯತೆ ಇದೆ.