ಬೆಂಗಳೂರು: ಡಾರ್ಕ್‌ವೆಬ್ ಸೈಟ್ ಮೂಲಕ ವಿದೇಶಗಳಿಂದ ಮಾದಕ ವಸ್ತು ಖರೀದಿಸಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆ ಸೇರಿ 10 ಮಂದಿಯ ಡ್ರಗ್ಸ್ ಪೆಡ್ಲರ್‌ಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬೆನ್ನಿಗಾನಹಳ್ಳಿ ನಿವಾಸಿ ನೈಜೀರಿಯಾ ಮೂಲದ ಸನ್ನೀ ಒ ಇನೋಶೇಂಟ್ (26), ಕೇರಳ ಮೂಲದ ಅಮಲ್ ಬೈಜು (20), ಫಿನಿಕ್ಸ್ ಡಿಸೋಜಾ (24), ಎಚ್‌ಬಿಆರ್ ಲೇಔಟ್‌ನ ಮೊಹಮ್ಮದ್ ಅಲಿತೂಜರಿ (29), ಹಲಸೂರಿನ ಝಮಾನ್ ಹಂಜಾಮಿನಾ (25), ಮಾರತ್‌ಹಳ್ಳಿಯ ಶೋನ್ ಶಾಝಿ (33), ಜೆ.ಸಿ.ನಗರದ ಕಾರ್ತಿಕ್‌ಗೌಡ (25), ಇಂದಿರಾನಗರದ ಪಾಲಡುಗ ಶಿವಶಂಕರ್ (33), ಸಾರ್ಥಕ್ (31) ಮತ್ತು ವಿಜಯನಗರದ ನಿತೀನ್ (24) ಬಂಧಿತರು. ಅವರಿಂದ 90 ಲಕ್ಷ ರೂ. ಮೌಲ್ಯದ 660 ಎಲ್‌ಎಸ್‌ಡಿ ಪೇಪರ್‌ಗಳು, 386 ಎಂಡಿಎಂಎ, 180 ಎಕ್ಸ್‌ಟೆಸಿ ಮಾತ್ರೆಗಳು, 12 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 10 ಗ್ರಾಂ ಕೊಕೇನ್ ಪುಡಿ ಹಾಗೂ 12 ಮೊಬೈಲ್, ಮೂರು ಲ್ಯಾಪ್‌ಟಾಪ್, ಎರಡು ದ್ವಿಚಕ್ರ ವಾಹನಗಳು ಹಾಗೂ ಪೋಸ್ಟಲ್ ಕವರ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಂಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಕೆಲ ಆರೋಪಿಗಳು ಎಂಜಿನಿಯರಿಂಗ್ ಓದಿದ್ದು, ಖಾಸಗಿ ಕಂಪನಿಯಲ್ಲಿಯೂ ಕೆಲಸ ಮಾಡಿದ್ದಾರೆ. ಮಾದಕ ವ್ಯಸನಿಗಳಾಗಿದ್ದು, ಪಾರ್ಟಿಗಳಿಗೆ ಹೋಗುವ ಹವ್ಯಾಸ ಬೆಳೆಸಿಕೊಂಡಿದ್ದರು. ಈ ವೇಳೆ ಡ್ರಗ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ತಿಳಿದು ಕೊಂಡಿದ್ದಾರೆ. ಇದೇ ವೇಳೆ ವಿದೇಶಿ ಪೆಡ್ಲರ್‌ಗಳ ಜತೆ ನಂಟು ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.
ಅಂಚೆ ಮೂಲಕ ಬರುತ್ತಿತ್ತು: ಟಾರ್ ಎಂಬ ಸರ್ಚ್ ಇಂಜಿನ್ ಬಳಸಿ ಡಾರ್ಕ್‌ವೆಬ್ ಸೈಟ್ ಮೂಲಕ ಎಂಪೈರ್ ಮಾರ್ಕೆಟ್, ಸಿಲ್ಕ್ ರೂಟ್, ಡ್ರಗ್ ಬೋರ್ಡ್ ಇತರೆ ವೆಬ್‌ಸೈಟ್‌ಗಳಿಂದ ವಿವಿಧ ರೀತಿಯ ನಿಷೇಧಿತವಾಗಿರುವ ಮಾದಕ ವಸ್ತುಗಳು ಮತ್ತು ನಿದ್ರಾಜನಕ ವಸ್ತುಗಳನ್ನು ಕಾಯ್ದಿರಿಸುತ್ತಿದ್ದರು. ಬಿಟ್‌ಕಾಯಿನ್ ಮೂಲಕ ಹಣ ಸಂದಾಯ ಮಾಡಿ ಮಾದಕ ವಸ್ತುಗಳನ್ನು ಇಂಡಿಯಾ ಪೋಸ್ಟ್ ಹಾಗೂ ವಿದೇಶಿ ಪೋಸ್ಟ್ ಮೂಲಕ ಉಡುಗೊರೆ ಪ್ಯಾಕಿಂಗ್ ಮಾಡಿಸಿ ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತರು ಹೇಳಿದರು.
ಸಿಕ್ಕಿ ಬಿದ್ದಿದ್ದು ಹೀಗೆ?: ಅಂಚೆ ಕಚೇರಿಯ ವಿದೇಶಿ ವಿಭಾಗಕ್ಕೆ ವಿದೇಶಗಳಿಂದ ಪಾರ್ಸೆಲ್ ಹಾಗೂ ಪೋಸ್ಟ್‌ಗಳು ಅಧಿಕವಾಗಿ ಬರುತ್ತಿದ್ದವು. ಜತೆಗೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗಕ್ಕೂ ವಿದೇಶಗಳಿಂದ ಡ್ರಗ್ಸ್ ಪಾರ್ಸೆಲ್‌ಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ಅಂಚೆ ಕಚೇರಿ ಅಧಿಕಾರಿಗಳ ಜತೆ ಚರ್ಚಿಸಿ ತನಿಖೆಗೆ ಸಹಕಾರ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ. ಡ್ರಗ್ಸ್‌ಅನ್ನು ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.
ಪತ್ತೆ ಕಷ್ಟ: ಆರೋಪಿಗಳು ಡಾರ್ಕ್‌ವೆಬ್‌ನಲ್ಲಿ ಬಿಟ್ ಕಾಯಿನ್ ಮೂಲಕ ವ್ಯವಹಾರ ನಡೆಸಿ ಡ್ರಗ್ಸ್ ಖರೀದಿಸಿದ್ದಾರೆ. ಡಾಕ್‌ವೆಬ್‌ನಲ್ಲಿ ಖರೀದಿ ಬಳಿಕ ತಮ್ಮ ನೋಂದಣಿ ಡಿಲೀಟ್ ಮಾಡಿದರೆ ಮತ್ತ ದಾಖಲಾಗದು. ಹೀಗಾಗಿ ಮೂಲ ಮಾರಾಟಗಾರನ ಮಾಹಿತಿ ಸಂಗ್ರಹ ಕಷ್ಟ. ಆರೋಪಿಗಳೂ ವಿಚಾರಣೆ ಸಂದರ್ಭದಲ್ಲೂ ತಮ್ಮ ಹೆಸರಿನಲ್ಲಿ ಬೇರೆಯವರುದಂಧೆ ನಡೆಸುತ್ತಿರಬಹುದು. ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಆರೋಪಿಗಳ ವಿಳಾಸಕ್ಕೆ ಬಂದಿದ್ದ ಪಾರ್ಸಲ್ ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಬಂಧಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.