2010ರಲ್ಲಿ ನಾವು ಸ್ಕಾಟ್‌ಲ್ಯಾಂಡ್‌ನಲ್ಲಿದ್ದೆವು. ಆ ವರ್ಷ ದಾಖಲೆ ಪ್ರಮಾಣದಲ್ಲಿ ಸ್ನೋ (ಹಿಮ) ಬಿತ್ತು. ಇಂಥ ದಿನಗಳ ಮುನ್ಸೂಚನೆ ಸಿಕ್ಕ ಕೂಡಲೆ ಸರ್ಕಾರ ನೆಲಕ್ಕೆ ಮರಳು (ಗ್ರಿಟ್) ಹಾಕಿ ಮುಖ್ಯರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಡುತ್ತದೆ. ಒಂದು ದಿನ ಮನೆಯಿಂದ 25 ಕಿ.ಮೀ. ದೂರದಲ್ಲಿದ್ದ ಕೆಲಸಕ್ಕೆ ಕಾರಿನಲ್ಲಿ ಹೋಗಿದ್ದೆ. ಬೆಳಗ್ಗೆಯಿಂದಲೇ ಮತ್ತೆ ಸ್ನೋ ಬೀಳಲು ಶುರುವಾಯ್ತು. ವಾಪಸ್ ಮನೆಗೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಮಕ್ಕಳನ್ನು ಬೇಗ ಮನೆಗೆ ಕರೆದೊಯ್ಯಬೇಕೆಂದೂ, ಶಾಲೆಗೆ ರಜೆ ಘೋಷಿಸಲಾಗಿದೆಯೆಂದೂ ಮಗನ ಶಾಲೆಯಿಂದ ಕರೆಬಂತು.
ವಿಧಿಯಿಲ್ಲದೆ ಬೀಳುತ್ತಿರುವ ಸ್ನೋ, ಕತ್ತಲೆ (ಚಳಿಗಾಲದಲ್ಲಿ 4 ಗಂಟೆಗೆಲ್ಲ ದಟ್ಟ ಕತ್ತಲೆ ಆವರಿಸುತ್ತದೆ) ಮತ್ತು ಕ್ರಮಿಸಲು ದುಸ್ಸಾಧ್ಯ ಎನ್ನುವ ರಸ್ತೆಗಿಳಿದೆ. ಮನೆ ಸೇರಲು ಇನ್ನೂ 7 ಕಿ.ಮೀ. ಇದೆ ಎನ್ನುವಾಗ ಮುಖ್ಯ ರಸ್ತೆ ಬಿಟ್ಟು, ಸಣ್ಣ ರಸ್ತೆಗೆ ಬರಬೇಕಿತ್ತು. ಅರ್ಧ ರಸ್ತೆ ಕ್ರಮಿಸಿದ್ದೆ ಅಷ್ಟರಲ್ಲಿ ಹಳೆಯ ಮಂಜುಗಡ್ಡೆ ಮತ್ತು ಅದರ ಮೇಲೆ ಬಿದ್ದಿದ್ದ ಒಂದಡಿ ಸ್ನೋ ಕೆಳಗೆ ಕಾರಿನ ಚಕ್ರಗಳು ಸಿಕ್ಕಿಕೊಂಡವು. ಸಣ್ಣ ರಸ್ತೆಗಳಾಗಿದ್ದ ಕಾರಣ ಈ ರಸ್ತೆಗಳಿಗೆ ಸರ್ಕಾರ ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಏನೇನು ಮಾಡಿದರೂ ಗೊರ್‌ರ್.. ಎಂದು ಸದ್ದು ಮಾಡಿ ಕಾರು ಹರತಾಳ ಹೂಡಿತ್ತು.
ಈ ವೇಳೆಗೆ ರಸ್ತೆಯಲ್ಲಿ ಸಂಚಾರವೇ ಇರಲಿಲ್ಲ. ಸುಮಾರು ಅರ್ಧ ಗಂಟೆಯಾಗುವಷ್ಟರಲ್ಲಿ ನನ್ನ ಕೈಗಳೂ ಮರಗಟ್ಟತೊಡಗಿದವು. ಈಗೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ, ಬೀಳುತ್ತಿರುವ ಹಿಮದಲ್ಲಿ ಬ್ರಿಟಿಷ್ ವ್ಯಕ್ತಿಯೊಬ್ಬ ನಡೆದು ಬರುವುದು ಕಾಣಿಸಿತು. ಯಾರೋ, ಏನೋ? ಹೇಗೆ ಸಹಾಯ ಕೇಳುವುದು ಎನ್ನುವ ತರ್ಕದಲ್ಲಿರುವಾಗಲೇ, ಆತನೇ ಬಳಿಬಂದು “ಕ್ಯಾನ್ ಐ ಹೆಲ್ಪ… ಯು?’ ಅಂತ ಕೇಳಿದ. ಬೀಳುತ್ತಿರುವ ಸ್ನೋನಲ್ಲಿ ಅವನೇನೂ ಸುರಕ್ಷಿತವಾಗಿರಲಿಲ್ಲ. ಆದರೆ ಸತತ 20 ನಿಮಿಷಗಳ ಪರಿಶ್ರಮ ಪಟ್ಟು ಕಾರನ್ನು ಹಿಂದಕ್ಕು ಮುಂದಕ್ಕು ಆಡಿಸಿ, ಕೈಯಿಂದ ತಳ್ಳಿ ಅತ್ಯಂತ ಪರಿಶ್ರಮ ಪಟ್ಟು ಆ ಜಾಗದಿಂದ ಮುಂದೆ ಹೋಗಲು ನೆರವು ನೀಡಿದ. ಬರಿಯ ಥ್ಯಾಂಕ್ಯೂವನ್ನು ಮೀರಿದ ಭಾವಾವೇಶದಿಂದ ಅವನಿಗೆ ವಂದನೆಗಳನ್ನು ಸಲ್ಲಿಸಿ ಹೇಗೋ ಮನೆ ಸೇರಿದೆ.
ಮರುದಿನದ ವಾರ್ತೆಗಳಲ್ಲಿ ಗ್ರಿಟ್ ಹಾಕಲು ಬರುವ ವಾಹನಗಳೂ ಕೂಡ ಭಾರಿಯಾಗಿ ಸುರಿದ ಹಿಮದಲ್ಲಿ ಸಿಲುಕಿ ನೂರಾರು ಮಂದಿ ವಾಹನಗಳನ್ನು ರಸ್ತೆಗಳಲ್ಲೇ ತೊರೆದು ಹತ್ತಿರದ ಶಾಲೆಗಳಲ್ಲಿ, ಇನ್ನಿತರೆಡೆ ವಾಸ್ತವ್ಯ ಹೂಡಿದ ಕಥೆಗಳು ಬಿತ್ತರಗೊಂಡಿದ್ದವು. ನನ್ನನ್ನು ಅಂಥ ಸಂಕಷ್ಟದಿಂದ ಪಾರು ಮಾಡಿದ ಆತನಿಗೆ ನಾನು ಎಂದೆಂದಿಗೂ ಚಿರಋಣಿ.
ಡಾ. ಪ್ರೇಮಲತಾ ಬಿ.