Advertisement

ಸುಬ್ರಹ್ಮಣ್ಯಕ್ಕೆ ಕತ್ತಲ ಭಾಗ್ಯ: ಮೊಬೈಲ್ ನೆಟ್ವರ್ಕ್‌ ಸ್ತಬ್ಧ

10:50 PM Jul 05, 2019 | mahesh |

ಸುಬ್ರಹ್ಮಣ್ಯ: ಸರಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಕುಕ್ಕೆ ಸುಬ್ರಹ್ಮಣ್ಯ ಸಹಿತ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ ಬಿಗಡಾಯಿಸಿದೆ. ಮೆಸ್ಕಾಂ ದಿನವಿಡಿ ಕತ್ತಲೆ ಭಾಗ್ಯ ನೀಡು ತ್ತಿದೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ವರ್ತಕರು, ಕೃಷಿಕರು, ನಾಗರಿಕರು ಹೈರಣಾಗಿದ್ದಾರೆ.

Advertisement

ಕುಕ್ಕೆಯಲ್ಲಿ ವಾರದಲ್ಲಿ ಬಹುತೇಕ ದಿನಗಳಲ್ಲಿ ವಿದ್ಯುತ್‌ ಇರುವುದಿಲ್ಲ. ಸುಬ್ರಹ್ಮಣ್ಯ ನಗರದಲ್ಲಿ ಅತೀವ ವಿದ್ಯುತ್‌ ಸಮಸ್ಯೆ ಹಿಂದೆ ಇತ್ತು. ಈ ಬಗ್ಗೆ ಸ್ಥಳಿಯರೆಲ್ಲ ಹೋರಾಟ ನಡೆಸಿ ಸರಕಾರಕ್ಕೆ ಒತ್ತಡ ತಂದ ಪರಿಣಾಮ ಇಲ್ಲಿಗೆ ಉಪವಿಭಾಗ ಕೇಂದ್ರ ಮಂಜೂರುಗೊಂಡಿತ್ತು. ಬಳಿಕವೂ ವಿದ್ಯುತ್‌ ಸಮಸ್ಯೆ ಬಗೆಹರಿದಿಲ್ಲ.

ವಾರದೆರಡು ದಿನ ವಿದ್ಯುತ್‌ ಮಾರ್ಗದ ದುರಸ್ತಿ ಎಂದು ಹೇಳಿ ನಗರಕ್ಕೆ ವಿದ್ಯುತ್‌ ಸರಬರಾಜನ್ನು ಮೆಸ್ಕಾಂ ಸ್ಥಗಿತಗೊಳಿಸುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ಎಂದು ಪ್ರಕಟನೆ ಹೊರಡಿಸಿ ರಾತ್ರಿ 9 ಆದರೂ ವಿದ್ಯುತ್ತಿಲ್ಲ. ಗ್ರಾಮೀಣ ಭಾಗಕ್ಕೆ ಮಧ್ಯರಾತ್ರಿ ಆಗುತ್ತದೆ. ತಂತಿಯ ಮಾರ್ಗಗಳ ದುರಸ್ತಿಗೆ ಮೀಸಲಿಟ್ಟ ದಿನಗಳ ಹೊರತುಪಡಿಸಿ ಇತರ ದಿನಗಳಲ್ಲೂ ದಿನವಿಡಿ ವಿದ್ಯುತ್‌ ಇರುವುದಿಲ್ಲ.

ದೋಷ ಕಂಡು ಬಂದರೆ ಸ್ಥಗಿತ
ದೇವಸ್ಥಾನದ ವತಿಯಿಂದ ಅಭಿವೃದ್ಧಿ ಗೆಂದು ಹಲವೆಡೆ ಕಂಬ ಹಾಗೂ ತಂತಿ ಬದಲಾವಣೆ ಕೆಲಸ ನಡೆಸಬೇಕಾಗುತ್ತದೆ. ಇದನ್ನು ನಿರ್ವಹಿಸಲು ಗುತ್ತಿಗೆ ವಹಿ ಸಿದ ಗುತ್ತಿಗೆದಾರರು ಸರಬರಾಜು ಕಡಿತಗೊಳಿಸುವಂತೆ ಮನವಿ ಮಾಡಿ ಕೊಂಡ ಮೇರೆಗೆ ಕಡಿತಗೊಳಿಸುತ್ತೇವೆ. ಇನ್ನುಳಿದಂತೆ ವಿದ್ಯುತ್‌ ಲೈನಿನಲ್ಲಿ ದೋಷ ಕಂಡು ಬಂದರೆ ಸ್ಥಗಿತಗೊಳಿಸುತ್ತೇವೆ.
– ಚಿದಾನಂದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

ಕಂಬ, ತಂತಿ ಬದಲಾವಣೆ ನೆಪ!

Advertisement

ದೇವಸ್ಥಾನದ ಮಾಸ್ಟರ್‌ ಪ್ಲಾನ್‌ ಯೋಜನೆಯಲ್ಲಿ ನಗರದಲ್ಲಿ ರಸ್ತೆ ವಿಸ್ತರಣೆ ಕೆಲಸ ನಡೆಯುತ್ತಿವೆ. ಇದಕ್ಕೆಂದು ವಿದ್ಯುತ್‌ ಕಂಬ ಹಾಗೂ ತಂತಿ ಬದಲಾವಣೆಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ವಾರದ ಪವರ್‌ ಕಟ್ ದಿನ ಹೊರತುಪಡಿಸಿ ಇತರ ದಿನವೂ ಕಂಬ, ತಂತಿ ಬದಲಾವಣೆಯಂತ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಕಂಡುಬಂದಿದೆ. ಇದು ಕೂಡ ಪವರ್‌ ಕಟ್ ಸಮಸ್ಯೆಗೆ ಕಾರಣ ಒಂದು ಹೇಳಲಾಗುತ್ತಿದೆ. ತಂತಿ ಮೇಲೆ ಮರ. ಮೈನ್‌ಲೈನ್‌ ದೋಷ, ಪುತ್ತೂರು ಫೀಡರ್‌ನಲ್ಲಿ ಸಮಸ್ಯೆ ಇದೆ ಇತ್ಯಾದಿ ನೆಪ ಹೇಳಿಕೊಳ್ಳುತ್ತಾ ಮೆಸ್ಕಾಂ ಪವರ್‌ ಕಟ್‌ಗೆ ಮಾಡುತ್ತಿದೆ.

ಟಿ.ವಿ., ಮೊಬೈಲು ಇಲ್ಲದೆ ಪರದಾಟ
ಮೊದಲೆಲ್ಲ ವಿದ್ಯುತ್‌ ಇಲ್ಲದಿದ್ದರೆ ಪರ್ಯಾಯ ಬೆಳಕಿನ ವ್ಯವಸ್ಥೆ ಮಾಡಿದ್ದರೆ ಸಾಕಾಗುತ್ತಿತ್ತು. ಈಗ ಹಾಗಿಲ್ಲ. ಟಿವಿ, ಮೊಬೈಲ್ ಇಲ್ಲದೆ ಕ್ಷಣ ಕಳೆಯಲಾಗುವುದಿಲ್ಲ. ಕರೆಂಟಿಲ್ಲದೆ ಅಕ್ಕಿ ಹಿಟ್ಟು ರುಬ್ಬುವ ಕೆಲಸಗಳಿಗೆ ಕೈ ನೀಡಲು ಗೃಹಿಣಿಯರೂ ಸಿದ್ಧರಿಲ್ಲ. ಹೀಗಾಗಿ ಮಕ್ಕಳು, ಮಹಿಳೆಯರು ವೃದ್ಧರಿಗೆ ಕರೆಂಟ್ ಇಲ್ಲದೆ ದಿನವೇ ಕಳೆಯಲಾಗುತ್ತಿಲ್ಲ. ಟಿವಿ ಧಾರಾವಾಹಿ, ಸಿನೆಮಾ ಇಲ್ಲದೆ ಗೃಹಿಣಿಯರು ಹಿಡಿಶಾಪ ಹಾಕುತ್ತಲಿದ್ದಾರೆ. ವಿಶ್ವಕಪ್‌ ಕ್ರಿಕೆಟ್ ವೀಕ್ಷಿಸಲಾಗದೆ ಯುವಸಮುದಾಯ ಮೆಸ್ಕಾಂ ವಿರುದ್ಧ ಕೋಪಗೊಂಡಿದ್ದಾರೆ. ಮೊಬೈಲ್ನಲ್ಲಿ ವೀಕ್ಷಿಸಲೂ ನೆಟ್ವರ್ಕ್‌ ಇಲ್ಲವಾಗಿದೆ.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next