ಧಾರವಾಡ: ಗಣೇಶ ಹಬ್ಬ, ದಸರಾ ಹಬ್ಬಕ್ಕಾಗಿ ಸಾಲ. ಈಗ ದೀಪಾವಳಿ ಹಬ್ಬಕ್ಕೂ ಸಾಲ ಕೇಳುವ ಮುಖವಿಲ್ಲ. ಕೇಳಿದರೂ ಸಾಲ ಸಿಗುವ ನಿರೀಕ್ಷೆ ಇಲ್ಲ. ಸಾಲು ಸಾಲು ಹಬ್ಬಗಳಿಗೆ ಸಾಲ ಮಾಡಿದ್ದು, ಸಾಕಾಯ್ತು. ಈಗ ಬೆಳಕಿನ ಹಬ್ಬ ದೀಪಾವಳಿ ಆಚರಿಸುವ ಮನಸ್ಸೇ ಇಲ್ಲ. ಕೆಲವರು ಮನೆ ಬಾಡಿಗೆ ನೀಡಲಾಗದೇ ಮನೆ ಬಿಟ್ಟಿದ್ದಾರೆ. ಮಕ್ಕಳ ಶಾಲೆಯ ಪ್ರವೇಶ ಶುಲ್ಕ ಈವರೆಗೂ ತುಂಬಿಲ್ಲ!
ಹೀಗೆ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನೌಕರರು ಒದ್ದಾಡುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ಇವರಿಗೆ ವೇತನವೇ ಆಗಿಲ್ಲ. ಮೂಕ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಈ ನೌಕರರದ್ದು ಈಗ ಮೂಕ ರೋದನವಾಗಿದೆ. 6 ತಿಂಗಳಿಂದಿಲ್ಲ ವೇತನ: ಜಿಲ್ಲೆಗೆ ಒಟ್ಟು 448 ಹುದ್ದೆಗಳು ಮಂಜೂರಾತಿ ಇದ್ದು, ಈ ಪೈಕಿ 287 ಹುದ್ದೆಗಳು ಕಾರ್ಯ ನಿರ್ವಹಣೆಯಲ್ಲಿವೆ. 161 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆ ಮಧ್ಯೆ ಈಗಿರುವ ನೌಕರರೇ ಹೆಚ್ಚಿನ ಕೆಲಸದೊತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಯ ನಿರ್ವಹಣೆಯ 287 ಹುದ್ದೆಗಳ ಪೈಕಿ 42 ಜಿಪಂ ವ್ಯಾಪ್ತಿಯಲ್ಲಿದ್ದರೆ, 245 ಹುದ್ದೆಗಳು ತಾಪಂ ಅಡಿಯಲ್ಲಿವೆ. ಸದ್ಯ ತಾಪಂ ವ್ಯಾಪ್ತಿಯಲ್ಲಿರುವ 245 ನೌಕರರಿಗೆ ಕಳೆದ ಆರು ತಿಂಗಳಿಂದ ವೇತನವಿಲ್ಲ. ಪಶು ವೈದ್ಯರು, ಜಾನುವಾರು ಅಧಿಕಾರಿಗಳು, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಸಹಾಯಕರು ಹಾಗೂ “ಡಿ ‘ಗ್ರೂಪ್ ನೌಕರರಿಗೆ ಕಳೆದ ಮೇ ತಿಂಗಳಿಂದ ಈವರೆಗೂ ವೇತನ ಆಗದೇ ಸಂಕಷ್ಟ ಅನುಭವಿಸುವಂತಾಗಿದೆ. ಅದಲು-ಬದಲಿನ ಲೋಪ: ತಾಪಂ ಅಡಿ ಕೆಲಸ ಮಾಡುವ 245 ನೌಕರರಿಗೆ ತಾಪಂ ಲೆಕ್ಕ ಶೀರ್ಷಿಕೆ ಅಡಿಯೇ ವೇತನ ಆಗುತ್ತದೆ.
ಆದರೆ ಈ ಹಿಂದಿನ ಆರ್ಥಿಕ ವರ್ಷದಲ್ಲಿ ಜಿಪಂ ಅಡಿ ಕೆಲಸ ಮಾಡುವ ಈ ಇಲಾಖೆಯ ಅಧಿಕಾರಿಗಳ ಒಂದು ತಿಂಗಳ ವೇತನಕ್ಕೆ ತೊಂದರೆ ಉಂಟಾದಾಗ ತಾಪಂ ಲೆಕ್ಕ ಶೀರ್ಷಿಕೆ ಅಡಿ ಇರುವ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಜಿಪಂ ಸಿಇಒ ಅವರ ಅನುಮತಿ ಸಹ ಪಡೆದಿಲ್ಲ. ಇದಾದ ಬಳಿಕ ಜಿಪಂ ಲೆಕ್ಕ ಶೀರ್ಷಿಕೆ ಅಡಿ ಅನುದಾನ ಬಂದಾಗ ತಾಪಂ ಲೆಕ್ಕ ಶೀರ್ಷಿಕೆಗೆ ಪೂರೈಸಲು ತಾಂತ್ರಿಕ ತೊಂದರೆ ಉಂಟಾಗಿದೆ. ಈ ವೇಳೆ ತಾಪಂ ಶೀರ್ಷಿಕೆ ಅನುದಾನ ಬಳಕೆ ಆಗಿದ್ದರಿಂದ ಅನುದಾನ ಕೊರತೆ ಉಂಟಾಗಿ ತಾಪಂ ಅಡಿಯ ನೌಕರರ ವೇತನ ಪಾವತಿಯಲ್ಲಿ ತೊಂದರೆ ಉಂಟಾಗಿದೆ. ಇಷ್ಟೇ ಸಾಲದೆಂಬಂತೆ ವೇತನ ಮಾಡಿಸಿ ಕೊಡುವುದಾಗಿ 500 ರಿಂದ 800 ರೂ.ವನ್ನು ಹಿರಿಯ ಅಧಿಕಾರಿಗಳು ಪಡೆದಿದ್ದಾರೆ ಎಂದೂ ಕೆಲ ನೌಕರರು ದೂರಿದ್ದಾರೆ.
ಮಾಡದ ತಪ್ಪಿಗೆ ಶಿಕ್ಷೆ: ಹಿರಿಯ ಅಧಿಕಾರಿ ಮಾಡಿದ ತಪ್ಪಿನಿಂದ ಕೆಳಮಟ್ಟದ ಅಧಿಕಾರಿಗಳು ಆರು ತಿಂಗಳಿಂದ ವೇತನ ಇಲ್ಲದೇ ಸಂಕಷ್ಟ ಅನುಭವಿಸಿದ್ದಾರೆ. ಈಗ ಆರ್ಥಿಕ ಇಲಾಖೆಯ ಗಮನ ಸೆಳೆದ ಬಳಿಕ ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿ, ಜಿಪಂ ಲೆಕ್ಕ ಶೀರ್ಷಿಕೆಯಿಂದ ತಾಪಂಗೆ ಮರು ಹೊಂದಾಣಿಕೆಗೆ ಆದೇಶ ಮಾಡಿದ್ದಾರೆ.
ಈ ರೀತಿಯ ಲೋಪ ಮತ್ತೆ ಕಂಡುಬಂದರೆ ವೇತನ ಪಾವತಿ ಮಾಡುವ ಜಿಲ್ಲಾಮಟ್ಟದ ಇಲಾಖಾ ಅಧಿಕಾರಿಗಳು ಮತ್ತು ಜಿಪಂ ಮುಖ್ಯ ಲೆಕ್ಕಾಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ. ಸದ್ಯ ಈ ಅನುದಾನ ಬಿಡುಗಡೆಗೊಂಡು ಖಜಾನೆಗೆ ಸೇರಿದ ಬಳಿಕ ವೇತನ ಪಾವತಿ ಆಗಲಿದ್ದು, ಅಷ್ಟರೊಳಗೆ ದೀಪಾವಳಿ ಹಬ್ಬವೂ ಮುಗಿಯಲಿದೆ. ಈಗ ಆದೇಶವೊಂದನ್ನು ನೀಡಿ ವೇತನ ಸಿಗುವ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಯಾವಾಗ ವೇತನ ನಮ್ಮಕೈಗೆ ಸಿಗುತ್ತೋ ಕಾದು ನೋಡಬೇಕು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.
ಜಿಪಂ ವ್ಯಾಪ್ತಿಯ ಅಧಿಕಾರಿಗಳಿಗೆ ಸರಿಯಾಗಿ ವೇತನ ಆಗಿದ್ದು, ತಾಪಂ ವ್ಯಾಪ್ತಿಯ ನೌಕರರಿಗೆ ಅಷ್ಟೇ ತೊಂದರೆ ಉಂಟಾಗಿದೆ. ಸದ್ಯ ಸರಕಾರದ ಆದೇಶದನ್ವಯ ಈ ಸಮಸ್ಯೆಯೂ ಬಗೆಹರಿದಿದ್ದು, ಬುಧವಾರ ಅಥವಾ ಗುರುವಾರದೊಳಗೆ ವೇತನ ನೌಕರರ ಕೈ ಸೇರಲಿದೆ. ಪರಮೇಶ್ವರ ನಾಯಕ, ಉಪನಿರ್ದೇಶಕ, ಪಶುಪಾಲನಾ
-ಪಶುವೈದ್ಯಕೀಯ ಸೇವಾ ಇಲಾಖೆ
-ಶಶಿಧರ್ ಬುದ್ನಿ