Advertisement

ಧಾರೇಶ್ವರ ಯಕ್ಷ ಅಷ್ಟಾಹದಲ್ಲಿ ರಂಜಿಸಿದ ಹಳೆ ಪ್ರಸಂಗಗಳು

07:18 PM Aug 01, 2019 | mahesh |

ಯಕ್ಷ ಅಷ್ಟಾಹದಲ್ಲಿ ನಡೆದ ಪ್ರಸಂಗಗಳು ಬಡಗುತಿಟ್ಟಿನ ಯಕ್ಷರಂಗದಲ್ಲಿ ಚಾಲ್ತಿಯಲ್ಲಿರದ ಪೌರಾಣಿಕ ಪ್ರಸಂಗಗಳು. ಇವೆಲ್ಲವೂಗಳನ್ನು ಧಾರೇಶ್ವರ ಬಳಗದವರು ಧಾರೇಶ್ವರರ ಸಮರ್ಥ ರಂಗ ನಿರ್ದೇಶನದಿಂದ ಕಾಲಮಿತಿಗೊಳಪಡಿಸಿ, ಪರಿಪೂರ್ಣ ಪ್ರಯತ್ನದ ಪ್ರದರ್ಶನ
ನೀಡಿದ ಕಲಾವಿದರೆಲ್ಲರೂ ಅಭಿನಂದನಾರ್ಹರು.

Advertisement

ಉತ್ತಮ ಹಿಮ್ಮೇಳ ಮತ್ತು ಮುಮ್ಮೇಳ, ಸಮರ್ಥ ನಿರ್ದೇಶನ, ಸೂಕ್ತ ಕಲಾವಿದರ ಆಯ್ಕೆ ಮಾಡಿ ಹಳೆಯ ಪೌರಾಣಿಕ ಪ್ರಸಂಗಗಳನ್ನು ಕಾಲ ಮಿತಿಗೊಳಪಡಿಸಿ, ಪ್ರಬುದ್ಧ ಕಲಾವಿದರ ಪರಿಪೂರ್ಣ ಪ್ರದರ್ಶನ ಮೇಳೈಸಿದಾಗ ಹೇಗೆ ಜನಮನ್ನಣೆಗಳಿಸುತ್ತದೆ ಎಂಬುದಕ್ಕೆ ರಾಜಾಂಗಣದಲ್ಲಿ ನಡೆದ ಸುಬ್ರಹ್ಮಣ್ಯ ಧಾರೇಶ್ವರ ಸಂಯೋಜನೆಯ ಯಕ್ಷ ಅಷ್ಟಾಹ ಸಾಕ್ಷಿಯಾಯಿತು.

ಮೊದಲದಿನ ಶ್ರೀಕೃಷ್ಣ ಪಾರಿಜಾತ ಪ್ರಸಂಗ ಪ್ರದರ್ಶಿತವಾಯಿತು. ಕೃಷ್ಣನಾಗಿ ಬೇಡಿಕೆಯ ಕಲಾವಿದ ತೀರ್ಥಳ್ಳಿ ಮತ್ತು ಸತ್ಯಭಾಮೆಯಾಗಿ ನೀಲ್ಕೋಡ್‌ ಶ್ರೇಷ್ಠ ಪ್ರದರ್ಶನ ನೀಡುವುದರೊಂದಿಗೆ ಯಕ್ಷ ಅಷ್ಟಾಹ ಉತ್ತಮ ಆರಂಭ ಪಡೆಯಿತು. ಎರಡನೆಯ ದಿನ ಮತ್ತೂಂದು ಚಿರಪರಿಚಿತ ಪೌರಾಣಿಕ ಪ್ರಸಂಗ ಭಸ್ಮಾಸುರ ಮೋಹಿನಿಯಲ್ಲಿ ಈಶ್ವರನಾಗಿ ತೀರ್ಥಳ್ಳಿ, ಭಸ್ಮಾಸುರನಾಗಿ ನರಸಿಂಹ ಚಿಟ್ಟಾಣಿ, ಮೋಹಿನಿಯಾಗಿ ನೀಲ್ಕೋಡ್‌, ಬ್ರಾಹ್ಮಣನಾಗಿ ಕಾಸರಗೋಡು, ಹೆಂಡತಿಯಾಗಿ ಅಶೋಕ್‌ ಭಟ್‌ ಸಿದ್ದಾಪುರ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರು.

ಇದರ ನಂತರ ಯಕ್ಷ ಅಷ್ಟಾಹದಲ್ಲಿ ನಡೆದ ಮುಂದಿನ ಐದೂ ಪ್ರಸಂಗಗಳು ಬಡಗುತಿಟ್ಟಿನ ಯಕ್ಷರಂಗದಲ್ಲಿ ಚಾಲ್ತಿಯಲ್ಲಿರದ ಪೌರಾಣಿಕ ಪ್ರಸಂಗಗಳು. ಇವೆಲ್ಲವೂಗಳನ್ನು ಧಾರೇಶ್ವರ ಬಳಗದವರು ಧಾರೇಶ್ವರರ ಸಮರ್ಥ ರಂಗ ನಿರ್ದೇಶನದಿಂದ ಕಾಲಮಿತಿಗೊಳಪಡಿಸಿ, ಪರಿಪೂರ್ಣ ಪ್ರಯತ್ನದ ಪ್ರದರ್ಶನ ನೀಡಿದ ಕಲಾವಿದರೆಲ್ಲರೂ ಅಭಿನಂದನಾರ್ಹರು. ಸುಮಾರು 25 ವರ್ಷದ ಹಿಂದೆ ಆಡಿಯೋ ಕ್ಯಾಸೆಟ್‌ ಸಂದರ್ಭದಲ್ಲಿ ಬಹಳಷ್ಟು ಪ್ರಚಾರ ಪಡೆದ ಪ್ರಸಂಗ ಗುರು ವಿಶ್ವರೂಪ. ಹಳೆಯದಾದ ಈ ಪ್ರಸಂಗದಲ್ಲಿ ವಿಶ್ವರೂಪನಾಗಿ ತೀರ್ಥಳ್ಳಿ, ದಾನವನಾಗಿ ಚಿಟ್ಟಾಣಿ ಮತ್ತು ನೀಲ್ಕೋಡ್‌ ಪುರುಷ ಪಾತ್ರದಲ್ಲಿ ಮಿಂಚಿದರು. ನಾಲ್ಕನೆಯ ಕಥಾನಕವಾಗಿ ಪ್ರದರ್ಶನಗೊಂಡದ್ದು ಸುದ್ಯುಮ್ನ. ಇದು ಕೂಡಾ ಹಳೆಯ ಪೌರಾಣಿಕ ಪ್ರಸಂಗ. ಯಜ್ಞದ ಮೂಲಕ ಹೆಣ್ಣು ಮಗಳನ್ನು ಪಡೆದ ಮಹಾರಾಜ ನಂತರ ತನ್ನ ಉತ್ತಾರಾಧಿಕಾರಿ ಇಲ್ಲವಲ್ಲವೆಂದು ಮುನಿಯಲ್ಲಿ ತಿಳಿಸಿದಾಗ, ಶ್ರೀಹರಿಯ ಅನುಗ್ರಹದಿಂದ ಹೆಣ್ಣಾಗಿದ್ದ ಸುದ್ಯುಮ್ನ ಗಂಡಾಗಿ ಬದಲಾಗುತ್ತಾನೆ.

ಹಿಮಗಿರಿಯ ಪ್ರದೇಶದಲ್ಲಿ ವಿಹರಿಸುತ್ತಿರುವಾಗ ಮತ್ತೆ ಹೆಣ್ಣಾಗಿ ಬದಲಾಗಿ ಅಲ್ಲಿಗೆ ಬಂದ ಬುಧನೊಂದಿಗೆ ಅನುರಕ್ತಳಾಗಿ ಪುರೂರವನ ಜನನವಾಗುತ್ತದೆ. ಸತ್ಯವಿಚಾರ ಬುಧನಿಗೆ ತಿಳಿದಾಗ ಅವಳನ್ನು ತೊರೆದು ಹೋಗುವಾಗ ಹರನ ಅನುಗ್ರಹದಿಂದ ಮತ್ತೂಂದು ವಂಶದ ಉದಯವಾಗುತ್ತದೆ. ಇದರಲ್ಲಿ ಇಳೆಯಾಗಿ ನೀಲ್ಕೋಡ್‌, ಬುಧನಾಗಿ ತೀರ್ಥಳ್ಳಿ ಪಾತ್ರನಿರ್ವಹಿಸಿದರು. ಐದನೆಯ ಪ್ರಸಂಗವಾಗಿ ಪ್ರದರ್ಶನವಾದ ಕಬಂಧ ಮೋಕ್ಷದಲ್ಲಿ ಗಂಧರ್ವನು ವೇಷ ಬದಲಿಸಿ ದಾನವನಾಗಿ ಭೂಲೋಕದಲ್ಲಿ ಮುನಿಗಳಿಗೆ ಅಪಹಾಸ್ಯ ಮಾಡಿದಾಗ ಮುನಿಗಳ ಶಾಪದಂತೆ ಶಾಶ್ವತವಾಗಿ ದಾನವನಾಗುತ್ತಾನೆ. ಅದೇ ರೂಪದಲ್ಲಿ ದೇವಲೋಕ‌ ಸೇರಿದಾಗ ದೇವೇಂದ್ರನ ಅನುಗ್ರಹದಿಂದ ಯೋಜನಾಂತರದ ಕಬಂಧ ಬಾಹುಗಳು ಗಂಧರ್ವನಿಗೆ ದೊರೆಯುತ್ತದೆ. ಮುಂದೆ ಶ್ರೀರಾಮನಿಂದಾಗಿ ಕಬಂಧನಿಗೆ ಮೋಕ್ಷವಾಗುತ್ತದೆ. ಇದರಲ್ಲಿ ಗಂಧರ್ವನಾಗಿ ಕೊಂಡದಕುಳಿ ಕಾಣಿಸಿಕೊಂಡರು. ಅಗ್ನಿದೇವನ ಉದರಾಗ್ನಿಯನ್ನು ಶಮನಪಡಿಸಲು ಖಾಂಡವ ವನವನ್ನು ದಹಿಸುವ ಕಥಾನಕವೇ ಆರನೆಯದಿನದ ಖಾಂಡವ ವನದಹನ. ಇದರಲ್ಲಿ ಅರ್ಜುನನಾಗಿ ಕೊಂಡದಕುಳಿ, ಕಾಳಿಂದಿಯಾಗಿ ನೀಲ್ಕೋಡ್‌ ಕಾಣಿಸಿಕೊಂಡರು.

Advertisement

ಏಳನೆಯ ದಿನದ ಪ್ರಸಂಗವಾಗಿ ತೆಂಕುತಿಟ್ಟಿನಲ್ಲಿ ಬಹಳಷ್ಟು ಪ್ರಚಲಿತದಲ್ಲಿರುವ ಗರುಡೋದ್ಭವ ಪ್ರಸಂಗ ಪ್ರದರ್ಶಿತವಾಯಿತು. ಈ ಕಥಾನಕದಲ್ಲಿ ವಿಶೇಷ ಆಹ್ವಾನಿತರಾಗಿ ಕಶ್ಯಪನಾಗಿ ರಮಣ ಆಚಾರ್ಯ, ಶ್ರೀಹರಿಯಾಗಿ ವಾಸುದೇವ ರಂಗ ಭಟ್‌ ಭಾಗವಹಿಸಿದರು. ಗರುಡನಾಗಿ ಕೊಂಡದಕುಳಿ ಮತ್ತು ವಿನುತೆಯಾಗಿ ನೀಲ್ಕೋಡ್‌ ಕಾಣಿಸಿಕೊಂಡರು. ಯಕ್ಷ ಅಷ್ಟಾಹದ ಅಂತಿಮ ಪ್ರಸಂಗ ರಾವಣವಧೆ. ಇದರಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ರಾವಣ ಮಂಡೋದರಿ ಅವರ ಸಂಭಾಷಣೆ ಪ್ರೇಕ್ಷಕರಿಗೆ ಮುದ ನೀಡಿದರೆ, ರಾವಣನಾಗಿ ಕೊಂಡದಕುಳಿ,ಶ್ರೀರಾಮನಾಗಿ ವಿಶೇಷ ಆಹ್ವಾನಿತರಾಗಿ ಉಜಿರೆ ಅಶೋಕ್‌ ಭಟ್‌, ಮಂಡೋದರಿಯಾಗಿ ನೀಲ್ಕೋಡ್‌ ಪಾತ್ರ ನಿರ್ವಹಿಸಿದರು.

ಭಾಗವತರಾಗಿ ಧಾರೇಶ್ವರ, ಮೂಡುಬೆಳ್ಳೆ, ಸರ್ವೇಶ್ವರ, ಮದ್ದಳೆಯಲ್ಲಿ ಗಣೇಶ್‌ ಮೂರ್ತಿ, ಶಶಿಕುಮಾರ್‌, ಗಜಾನನ ಬೋಳ್ಗೆರೆ, ಚೆಂಡೆಯಲ್ಲಿ ಕೃಷ್ಣಾನಂದ ಶಣೈ ಹಾಗೂ ಧಾರೇಶ್ವರರ ಪುತ್ರ ಕಾರ್ತಿಕೇಯ ಪ್ರದರ್ಶನದ ಹೆಚ್ಚುಗಾರಿಕೆಗೆ ಸಹಕರಿಸಿದರು. ಇವರಲ್ಲದೆ ಹಾಸ್ಯಗಾರನಾಗಿ ಕಾಸರಗೋಡ್‌, ಸಹಕಲಾವಿದರಾಗಿ ಅಶೋಕ್‌ ಭಟ್‌, ಲೋಕೇಶ್‌, ಮಾರುತಿ, ನಾಗೇಶ್‌, ದಿನೇಶ್‌, ಶಶಾಂಕ ಉತ್ತಮ ನಿರ್ವಹಣೆ ತೋರಿದರು.

ವಿಷ್ಣುಮೂರ್ತಿ ಉಪಾಧ್ಯ, ಮಾರ್ಪಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next