Advertisement

ದರೆಗುಡ್ಡೆಗೆ ಬೇಕಿದೆ ವ್ಯವಸ್ಥಿತ ಪ್ರಥಮ ಚಿಕಿತ್ಸೆ  ಕೇಂದ್ರ 

09:55 PM Aug 19, 2021 | Team Udayavani |

ದರೆಗುಡ್ಡೆ ಗ್ರಾಮಕ್ಕೆ ಮೂಲಸೌಲಭ್ಯಗಳನ್ನು ಒದಗಿಸಬೇಕಿದೆ. ವ್ಯವಸ್ಥಿತ ಪ್ರಥಮ ಚಿಕಿತ್ಸೆ ಕೇಂದ್ರ, ಪಶು ಚಿಕಿತ್ಸಾಲಯ, ರಸ್ತೆ ನಿರ್ಮಾಣ, ಶ್ಮಶಾನ ನಿರ್ವಹಣೆ ಅಗತ್ಯವಾಗಿ ಆಗಬೇಕಿದೆ. ಅಕ್ರಮ ಸಕ್ರಮ ಪ್ರಕರಣಗಳು ಶೀಘ್ರ ಇತ್ಯರ್ಥಗೊಂಡರೆ  ಸ್ಥಳೀಯರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರನ್ನು ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ  ಮೂಲಕ ಪ್ರಯತ್ನಿಸಲಾಗಿದೆ.

Advertisement

ಮೂಡುಬಿದಿರೆ: ತಾಲೂಕಿನ ಈಶಾನ್ಯ ಗಡಿ ಯಲ್ಲಿರುವ ದರೆಗುಡ್ಡೆ ಪ್ರಕೃತಿ ರಮಣೀಯ ತಾಣ. ತೀರಾ ಹಳ್ಳಿ ಪ್ರದೇಶ. ದರೆಗುಡ್ಡೆ ಗ್ರಾಮದ ಅಂಗನವಾಡಿ ಪಕ್ಕದಲ್ಲಿ, ಬಹಳ ಕಾಲದ ಹಿಂದೆ ನಿರ್ಮಿಸಲಾಗಿರುವ ಪ್ರಥಮ ಚಿಕಿತ್ಸೆ ಕೇಂದ್ರ ಕಟ್ಟಡವೇನೋ ಇದೆ. ಆಗೊಮ್ಮೆ ಈಗೊಮ್ಮೆ ಈ ಕಟ್ಟಡವನ್ನು ಸುಸ್ಥಿತಿಯಲ್ಲಿಡುವ ಕಾಮಗಾರಿಗಳೂ ನಡೆಯುತ್ತವೆ. ಆದರೆ ಇಲ್ಲಿಯವರೆಗೂ ಸರಕಾರಿ ವೈದ್ಯರು ಕಾಣಿಸುತ್ತಿಲ್ಲ.

ದಿನದ 24 ಗಂಟೆಯೂ ಜನರಿಗೆ ಲಭ್ಯವಾಗುವಂತೆ ವೈದ್ಯ ಕೀಯ ಸೇವೆ ನೀಡುವಂತೆ ವೈದ್ಯರನ್ನು/ವೈದ್ಯಕೀಯ ಸಿಬಂದಿಯನ್ನು ಇಲ್ಲಿಗೆ ನೇಮಿಸಬೇಕು.

ಪಶು ಚಿಕಿತ್ಸಾಲಯ :

ದರೆಗುಡ್ಡೆಯಲ್ಲಿ ಕೃಷಿ ಮತ್ತು ಹೈನುಗಾರಿಕೆ ಶೇ. 90ರಷ್ಟು ಮಂದಿಗೆ ಪ್ರಧಾನ ಜೀವನೋಪಾಯವಾಗಿದೆ. ಹೈನುಗಾರಿಕೆಗೆ ಸೂಕ್ತವಾದ ವಾತಾವರಣ ಇಲ್ಲಿದೆ. 80ರಷ್ಟು ಮಂದಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 600 ಲೀ. ಹಾಲು ಇಲ್ಲಿ ಉತ್ಪಾದನೆಯಾಗುತ್ತಿದೆ. ಆದರೆ ಇಲ್ಲೊಂದು ಪಶು ಚಿಕಿತ್ಸಾಲಯ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ಪಶುಗಳಿಗೆ ಆರೋಗ್ಯ ಸಮಸ್ಯೆ ಕಾಡಿದಾಗ ಈ ಭಾಗದ ಜನರು ದೂರದ ಮೂಡುಮಾರ್ನಾಡು ಗ್ರಾಮಕ್ಕೆ ಹೋಗಿ ಅಲ್ಲಿಂದ ವೈದ್ಯರನ್ನು ಕರೆಯಬೇಕಾಗುತ್ತದೆ. ಇಲ್ಲವೇ ಕರೆತರಬೇಕಾಗುತ್ತದೆ. ಇದು ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸುತ್ತಿರುವುದರಿಂದ ಹೈನುಗಾರರ ಬೇಡಿಕೆಯನ್ನು ಈಡೇರಿಸಬೇಕಿದೆ. ಪಶುವೈದ್ಯಕೀಯ ಕೇಂದ್ರದ ಸ್ಥಾಪನೆ, ಪಶುವೈದ್ಯರ ನೇಮಕ ತೀರಾ ಅಗತ್ಯವಾಗಿದೆ.

Advertisement

ಇತರ ಸಮಸ್ಯೆಗಳೇನು? :

  • ತೀರಾ ಗ್ರಾಮೀಣ ಪ್ರದೇಶವಾದ ದರೆಗುಡ್ಡೆಯಲ್ಲಿ ಶ್ಮಶಾನ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲ. ಬಹಳಷ್ಟು ಕೆಲಸ ಬಾಕಿ ಇದೆ. ಇದರ ಜತೆಗೆ ದರೆಗುಡ್ಡೆ ಗ್ರಾಮದ ಪಾಡ್ಯಾರು ಬದಿಯಲ್ಲಿ ಒಂದು ಶ್ಮಶಾನದ ಆವಶ್ಯಕತೆ ಇದೆ.
  • ಹಿತ್ತಿಲು -ವಿಟ್ಠಲ ದೇವಸ್ಥಾನ ರಸ್ತೆ ಅಭಿವೃದ್ಧಿ ಆಗಬೇಕು. ನರಂಗೊಟ್ಟು ರಸ್ತೆ ಅಭಿವೃದ್ಧಿಗೊಳಿಸಿದರೆ ಅದನ್ನು ನರಂಗೊಟ್ಟು ಕಡೆಯಿಂದ ವಾಲ್ಪಾಡಿಗೆ ಸಂಪರ್ಕ ಕಲ್ಪಿಸುವ ಕೂಡುರಸ್ತೆಯಾಗಿ ಮಾರ್ಪಾಡು ಮಾಡಬಹುದು.
  • ದರೆಗುಡ್ಡೆಯ “ನರಂಗೊಟ್ಟು ಕೆರೆ’ ಮತ್ತು ಪಣಪಿಲ ಹಿತ್ತಿಲುರಸ್ತೆಯ “ಕೆಂಚರಟ್ಟ’ ಇವು ಗಳ ಅಭಿವೃದ್ಧಿಯಾದರೆ ಜನರ ನಿತ್ಯಬಳಕೆ, ಕೃಷಿ ಉದ್ದೇಶಕ್ಕೆ ಮಾತ್ರವಲ್ಲ ಪ್ರಾಣಿ-ಪಕ್ಷಿಗಳಿಗೆ ಸಾಕಷ್ಟು ನೀರು ಲಭಿಸಲು ಸಾಧ್ಯ.
  • ದರೆಗುಡ್ಡೆ ಪ್ರಾಥಮಿಕ ಶಾಲೆಯ ಹೆಸರಲ್ಲಿ ಆರ್‌ಟಿಸಿ ಆಗಿಲ್ಲ . ಗ್ರಾ.ಪಂ. ಕಟ್ಟಡದ ನಿವೇಶನಕ್ಕೂ ಆರ್‌ಟಿಸಿ ಆಗಿಲ್ಲ!
  • ವಸತಿ ರಹಿತರಿಗೆ ನೀಡಲು ಮನೆ ನಿವೇಶನಕ್ಕೆ ಸೂಕ್ತವಾದ ಜಾಗ ದರೆಗುಡ್ಡೆಯಲ್ಲಿ ಸಾಕಷ್ಟಿದ್ದು, ವಸತಿ ರಹಿತರಿಗೆ ನೀಡಲು ಕ್ರಮ ಜರಗಿಸಬೇಕಿದೆ. 94ಸಿ ಅರ್ಜಿಗೆ ಸಂಬಂಧಿಸಿದ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಬಗೆಹರಿಸಬೇಕಾಗಿದೆ. ಅಕ್ರಮ ಸಕ್ರಮ ಪ್ರಕರಣಗಳು ಶೀಘ್ರ ಇತ್ಯರ್ಥಕ್ಕಾಗಿ ಕಾಯುತ್ತಿವೆ.
  • ಸರಕಾರಿ ಪ್ರೌಢಶಾಲೆ, ಸರಕಾರಿ ಹಾಸ್ಟೆಲ್‌ ಇರುವ ದರೆಗುಡ್ಡೆಯಲ್ಲಿ ಸರಕಾರಿ ಪ.ಪೂ. ಕಾಲೇಜು ಸ್ಥಾಪನೆಯಾಗಬೇಕೆಂಬ ಬೇಡಿಕೆ ಇದೆ. ಇದರಿಂದ ಆಸುಪಾಸಿನ ಗ್ರಾಮಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗುವುದು.

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next