ಇತ್ತೀಚೆಗಷ್ಟೇ ಕನ್ನಡದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯನ್ನು ಅಧರಿಸಿದ “ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ತೆರೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಸದ್ಯ ಬಿಡುಗಡೆಯಾಗಿ ಮೂರು ವಾರಗಳ ಯಶಸ್ವಿ ಪ್ರದರ್ಶನ ಕಂಡಿರುವ “ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿತು.
ಇದೇ ವೇಳೆ ಮಾತನಾಡಿದ ನಟ ಧನಂಜಯ್, “ನಾನು ಈ ಸಿನಿಮಾದ ಗೆಲುವಿನ ಸಂಭ್ರಮವನ್ನು ನೋಡಲು ಬಂದಿದ್ದೇನೆ. ಎಲ್ಲ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್‌ಗೆ ಮಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜೊತೆಗೆ ನಿಂತಿವೆ. ಒಳ್ಳೆಯದು ಏನೂ ಆಗುತ್ತಿದೆ ಎಂದಾಗ ನಾವು ಅದರ ಭಾಗವಾಗುವುದು ತುಂಬಾ ಮುಖ್ಯ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್ ಮಾಡಲು ಸಿಕ್ಕ ಅವಕಾಶ. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆ’ ಎಂದರು.
ನಿರ್ದೇಶಕ ಶಶಾಂಕ್ ಸೋಗಲ್ ಮಾತನಾಡಿ, “ಒಳ್ಳೆ ಸಿನಿಮಾ ಮಾಡಬೇಕು ಅಂತಾ ಫೋಕಸ್ ಮಾಡಿದ್ದೆ. ಇಂಜನಿಯರಿಂಗ್ ಓದುವಾಗ ಕನ್ನಡ ಸಿನಿಮಾ ಹೋಗ್ತೀವಿ ಎಂದಾಗ ಬೇರೆ ರೀತಿ ನೋಡುವವರು. ಆಗ ತುಂಬಾ ಕೋಪ ಬರುವುದು. ಒಳ್ಳೆ ಸಿನಿಮಾ ಮಾಡಬೇಕು ಎಂಬ ಒಂದೆ ಉದ್ದೇಶವಿತ್ತು. ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಆ ಒಂದೊಳ್ಳೆ ಉದ್ದೇಶದಿಂದ ಎಷ್ಟು ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ಸಿನಿಮಾಗೆ ಎಲ್ಲೆಡೆಯಿಂದ ರೆಸ್ಪಾನ್ಸ್ ಸಿಗುತ್ತಿದೆ. ಜನಕ್ಕೆ ರೀಚ್ ಆಗುತ್ತಿರುವುದು ಖುಷಿಕೊಟ್ಟಿದೆ. ವೀಕೆಂಡ್‌ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ’ ಎಂದರು.
ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರಿ, “ರಾಮಾನುಜ ಅಯ್ಯಂಗಾರಿ ಪಾತ್ರದ ಮೇಲೆ ಪ್ರೀತಿ ಸಿಟ್ಟು ಎಲ್ಲದನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಎಲ್ಲರೂ ಎತ್ತಿ ಕೊಂಡಾಡುತ್ತಿದ್ದಾರೆ. 18 ವರ್ಷಕ್ಕೆ ಇಂಡಸ್ಟ್ರೀಗೆ ಬಂದೆ. ಎಷ್ಟೋ ಅವಮಾನ, ಕಾಯುವಿಕೆ ಬಳಿಕ ಒಂದೊಳ್ಳೆ ಪಾತ್ರ ಸಿಕ್ಕಿದೆ. ಜನ ಗುರುತಿಸುತ್ತಿದ್ದಾರೆ. ಈ ಸಿನಿಮಾದಿಂದ ಇನ್ನೊಂದು ಚಿತ್ರದಲ್ಲಿ ನಾಯಕ ನಟಿಸುವ ಅವಕಾಶ ಪಡೆದಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸಿದರು.
ಉಳಿದಂತೆ ಮುಸ್ತಾಫಾ ಪಾತ್ರಧಾರಿ ಶಿಶಿರ್ ಬೈಕಾಡಿ, ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಅನುಭವಗಳನ್ನು ಹಂಚಿಕೊಂಡರು.