ಓದುವ ಅಭಿರುಚಿಯಿರುವವರಿಗೆ ಕನ್ನಡದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ (ಪೂಚಂತೇ) ಅವರ ಕೃತಿಗಳು ಮತ್ತು ಅದರ ಪಾತ್ರಗಳ ಬಗ್ಗೆ ಕನಿಷ್ಟ ಪರಿಚಯ ಇದ್ದೇ ಇರುತ್ತದೆ. ಈಗಾಗಲೇ ತೇಜಸ್ವಿಯವರ “ಅಬಚೂರಿನಾ ಪೋಸ್ಟಾμàಸು’, “ತಬರನ ಕಥೆ’, “ಕಿರಗೂರಿನ ಗಯ್ನಾಳಿಗಳು’ ಹೀಗೆ ಒಂದಷ್ಟು ಕೃತಿಗಳು ಸಿನಿಮಾವಾಗಿದ್ದು, ಈಗ ಅಂಥದ್ದೇ ಮತ್ತೂಂದು ಕಥೆ ಮತ್ತದರ ಪಾತ್ರ “ಡೇರ್‌ಡೆವಿಲ್ ಮುಸ್ತಾಫಾ’ ಸಿನಿಮಾ ರೂಪ ಪಡೆದುಕೊಂಡು ಥಿಯೇಟರ್‌ಗೆ ಬಂದಿದೆ.
ಇನ್ನು ತೆರೆಮೇಲೆ “ಡೇರ್‌ಡೆವಿಲ್ ಮುಸ್ತಾಫಾ’ ನನ್ನು ನೋಡುವ ಕಾತುರದೊಂದಿಗೆ, ಸಿನಿಮಾ ತೆರೆದುಕೊಳ್ಳುತ್ತದೆ. ಎಲ್ಲ ಹಿಂದೂ ಧರ್ಮಿಯರೇ ಇರುವ ಅಬಚೂರಿನ ಪದವಿ ಪೂರ್ವ ಕಾಲೇಜಿಗೆ ಮೊದಲ ಬಾರಿಗೆ ಮುಸ್ಲಿಂ ಹುಡುಗ ಮುಸ್ತಾಫಾನ ಅಡ್ಮಿಷನ್ ಆಗಿರುತ್ತದೆ. ಮುಸ್ತಾಫಾ ನೀರಿಲ್ಲದೆ ಪಂಕ್ಚರ್ ಹಾಕ್ತಾನಂತೆ, ಸೆಂಟಿನಲ್ಲೇ ಮುಳುಗ್ತಾನಂತೆ.. ಹೀಗೆ ಅಂತೆ-ಕಂತೆಗಳಲ್ಲೇ ಮುಸ್ತಾಫಾನನ್ನು ಕಲ್ಪಿಸಿಕೊಂಡವರಿಗೆ, ಕಾಲೇಜು ಶುರುವಾದ ಸುಮಾರು ಇಪ್ಪತ್ತು ದಿನಗಳ ನಂತರ ಮುಸ್ತಾಫಾನ ದರ್ಶನವಾಗುತ್ತದೆ. ಆನಂತರ ಮುಸ್ತಾಫಾನ ನೈಜ ವ್ಯಕ್ತಿತ್ವದ ಚಿತ್ರಣ ತೆರೆಮೇಲೆ ತೆರೆದುಕೊಳ್ಳುತ್ತದೆ.
ಸಿನಿಮಾದ ಟೈಟಲ್ ಮತ್ತು ಸಬ್ ಟೈಟಲ್ ಹೇಳುವಂತೆ, ಮುಸ್ತಾಫಾ ಮತ್ತು ರಾಮಾನುಜ ಅಯ್ಯಂಗಾರಿ ಪಟಾಲಂ ನಡುವಿನ ಸೆಣೆಸಾಟದ ನಡುವೆಯೇ “ಡೇರ್‌ಡೆವಿಲ್ ಮುಸ್ತಾಫಾ’ ಸಿನಿಮಾದ ಕಥಾಹಂದರ ಸಾಗುತ್ತದೆ. ತೇಜಸ್ವಿಯವರ ಪುಸ್ತಕದಲ್ಲಿ ಓದುಗರ ಕಲ್ಪನೆಗೆ ತಕ್ಕಂತೆ “ಡೇರ್‌ಡೆವಿಲ್ ಮುಸ್ತಾಫಾ’ ತೆರೆಮೇಲೆ ಬೇರೆಯದ್ದೇ ರೀತಿಯಲ್ಲಿ ಕಾಣುತ್ತದೆ. ದೃಶ್ಯರೂಪದಲ್ಲಿ ಕೆಲವೊಂದಿಷ್ಟು ಬಲವಂತ’ದ ಬದಲಾವಣೆಗಳನ್ನು ಮಾಡಿರುವುದರಿಂದ, ಸಿನಿಮಾದಲ್ಲೂ ಈ ಬದಲಾವಣೆಯನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ!
“ಡೇರ್‌ಡೆವಿಲ್ ಮುಸ್ತಾಫಾ’ ನ ಚಿತ್ರಕಥೆ ಬಹುತೇಕ ಅಬಚೂರಿನ ಕಾಲೇಜು ವರಾಂಡದಲ್ಲಿಯೇ ನಡೆಯುವುದರಿಂದ, ಮೊದಲರ್ಧ ಕಾಲೇಜು ಹುಡುಗರ ಒಂದಷ್ಟು ತರಲೆ, ತುಂಟಾಟ, ಕಿತಾಪತಿ ನೋಡುಗರಿಗೆ ನಗುತರಿಸುವಂತಿವೆ. ಆದರೆ ದ್ವಿತೀಯರ್ಧ ಕೂಡ ಒಂದಷ್ಟು ಡೈಲಾಗ್ಸ್ ಜೊತೆ ಅಲ್ಲೇ ಗಿರಕಿ ಹೊಡೆಯುವುದರಿಂದ, ಬೇರೆಯದ್ದೇನನ್ನೂ ನಿರೀಕ್ಷಿಸುವಂತಿಲ್ಲ. ಕೆಲವೊಂದು ಪಾತ್ರಗಳ “ಅತಿ’ಯಾದ ಮಾತು, ಅನವಶ್ಯಕ ದೃಶ್ಯಗಳು ಮತ್ತು ಮಂದಗತಿಯ ನಿರೂಪಣೆ “ಡೇರ್‌ಡೆವಿಲ್ ಮುಸ್ತಾಫಾ’ ಜೊತೆಗಿನ ಪ್ರಯಾಣ ಅಲ್ಲಲ್ಲಿ “ದೀರ್ಘ’ವಾಗಿಸಿದಂತೆ ಬಾಸವಾಗುತ್ತದೆ. ಅದೆಲ್ಲವನ್ನು ಬದಿಗಿಟ್ಟು ಪೂರ್ಣಚಂದ್ರ ತೇಜಸ್ವಿಯವರ ಕೃತಿಯಾಗಿ ಸಿನಿಮಾವನ್ನು ನೋಡಿದವರಿಗೆ “ಡೇರ್‌ಡೆವಿಲ್ ಮುಸ್ತಾಫಾ’ ಮೆಚ್ಚುಗೆಯಾಗಬಹುದು.
ಜಿ.ಎಸ್.ಕಾರ್ತಿಕ ಸುಧನ್