Advertisement
ಇದುವರೆಗೆ ರಸಗೊಬ್ಬರ ಕಂಪೆನಿಗಳು 1,700 ರೂ.ಗೆ ಡಿಎಪಿ ಮಾರಾಟ ಮಾಡುತ್ತಿದ್ದವು. ಕೇಂದ್ರ ಸರಕಾರ 500 ರೂ. ಸಬ್ಸಿಡಿ ಕೊಡುತ್ತಿದ್ದು, ರೈತರಿಗೆ 1,200 ರೂ.ಗೆ ಡಿಎಪಿ ರಸಗೊಬ್ಬರ ಸಿಗುತ್ತಿತ್ತು. ಈಗಿನ ಅಂತಾರಾಷ್ಟ್ರೀಯ ಕಚ್ಚಾವಸ್ತುಗಳ ಬೆಲೆಯೇರಿಕೆಯಿಂದಾಗಿ ಈಗ ಡಿಎಪಿ ರಸಗೊಬ್ಬರದ ಬೆಲೆ 2,400 ರೂ. ಆಗಿದೆ. ಕೇಂದ್ರ ಸರಕಾರ 1,200 ರೂ. ಸಬ್ಸಿಡಿ ನೀಡಲಿದ್ದು, ಇದರಿಂದಾಗಿ ನೈಜ ಬೆಲೆ ಹೆಚ್ಚಳವಾದರೂ ರೈತರಿಗೆ ಹಿಂದಿನಷ್ಟೇ ದರಕ್ಕೆ ಸಿಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿಗೆ ಬಳಕೆ ಮಾಡುವ ಫಾಸಾರಿಕ್ ಆಮ್ಲ ಮತ್ತು ಅಮೋನಿಯಾ ದರ ಹೆಚ್ಚಳವಾಗಿದೆ. ಹೀಗಾಗಿ ರಸಗೊಬ್ಬರ ಉತ್ಪಾದಕ ಕಂಪೆನಿಗಳು ಡಿಎಪಿ ದರವನ್ನು ಹೆಚ್ಚಿಸಿದ್ದವು. ಹಿಂದಿನ ಸಬ್ಸಿಡಿ 500 ರೂ. ಕಳೆದರೆ 1,900 ರೂ.ಗೆ ಡಿಎಪಿ ಬ್ಯಾಗ್ ಸಿಗುತ್ತಿತ್ತು. ಆದರೆ ಇದರಿಂದ ರೈತರಿಗೆ ಹೊರೆಯಾಗುತ್ತದೆ ಎಂಬುದನ್ನು ಮನಗಂಡ ಕೇಂದ್ರ ಸರಕಾರ, ಕಂಪೆನಿಗಳು ಏರಿಸಿರುವ ದರವನ್ನು ತಾನೇ ಭರಿಸಲು ನಿರ್ಧರಿಸಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಹೆಚ್ಚುವರಿಯಾಗಿ 14,775 ಕೋ.ರೂ. ವೆಚ್ಚವಾಗಲಿದೆ. ಪ್ರತೀ ವರ್ಷವೂ ಕೇಂದ್ರ ಸರಕಾರವು ರಸಗೊಬ್ಬರ ಸಬ್ಸಿಡಿಗಾಗಿ 80 ಸಾವಿರ ಕೋಟಿ ರೂ. ವ್ಯಯಿಸುತ್ತದೆ.