ಲಕ್ಷ್ಮೇಶ್ವರ: ಕಳೆದ 10-12 ದಿನಗಳಿಂದ ಲಕ್ಷ್ಮೇಶ್ವರ ತಾಲೂಕಿನಲ್ಲಿ ರೈತರು ಡಿಎಪಿ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದರೂ ಗೊಬ್ಬರ ಸಿಗದೇ ಪರದಾಡುವಂತಾಗಿದೆ.
ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಡಿಎಪಿ ಗೊಬ್ಬರ ಸಿಗದೇ ಇರುವುದರಿಂದ ರೈತರಲ್ಲಿ ಅಸಮಾಧಾನ-ಆತಂಕ ಮನೆಮಾಡಿದೆ. ಶೇ.46 ಪಾಸ್ಪರಸ್ ಪೋಷಕಾಂಶವಿರುವ ಡಿಎಪಿ ಎಲ್ಲ ಬೆಳೆಗೆ ಸೂಕ್ತ ಎಂಬ ನಂಬಿಕೆ ರೈತರದ್ದು. ಸಬ್ಸಿಡಿಯಿಂದಾಗಿ ಡಿಎಪಿ ಗೊಬ್ಬರದ ಬೆಲೆ ಚೀಲವೊಂದಕ್ಕೆ 1700 ರೂ. ಬದಲಾಗಿ 1200 ರೂ.ಗೆ ಇಳಿದಿದೆ. ಉಳಿದಂತೆ ಕಾಂಪ್ಲೆಕ್ಸ್ ಗೊಬ್ಬರದ ಬೆಲೆ ಡಿಎಪಿಗಿಂತಲೂ ಹೆಚ್ಚಿದೆ. ಈ ಕಾರಣದಿಂದ ಗೊಬ್ಬರಕ್ಕೆ ಅಲೆದರೆ ಅಂಗಡಿಗಳಲ್ಲಿ ಡಿಎಪಿ ಗೊಬ್ಬರ ಇಲ್ಲವೆಂಬ ಫಲಕ ಹಾಕಿರುವುದು ರೈತರನ್ನು ಚಿತೆಗೀಡು ಮಾಡಿದೆ.
ಡಿಎಪಿ ದಾಸ್ತಾನು ಖಾಲಿ: ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಎಲ್ಲ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಯಾವುದೇ ಕಂಪನಿಯ ಡಿಎಪಿ ಗೊಬ್ಬರ ದಾಸ್ತಾನು ಇಲ್ಲ. ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ನಡುವೆ 518 ಟನ್ ಡಿಎಪಿ ಗೊಬ್ಬರ ಬಂದಿದ್ದು, ಎಲ್ಲವೂ ಮಾರಾಟವಾಗಿದೆ.
ಕೊರೊನಾ ಭೀತಿ ಲೆಕ್ಕಿಸದೇ ಗೊಬ್ಬರ ಕೇಳಿ ಬರುವ ರೈತರಿಗೆ ಮಾರಾಟಗಾರರಿಂದ ಡಿಎಪಿ ಬಂದಿಲ್ಲ ನಾಳೆ ಬರಬಹುದು ಎಂಬ ಸಿದ್ಧ ಉತ್ತರ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ತಾಲೂಕಿನ ರೈತರಿಗೆ ಅನ್ಯಾಯ: ಸರ್ಕಾರ ರಸಗೊಬ್ಬರವನ್ನು ಆಯಾ ಜಿಲ್ಲೆಯ ಕೃಷಿ ಕ್ಷೇತ್ರಕ್ಕನುಗುಣವಾಗಿ ವಿತರಿಸುತ್ತದೆ. ಆದರೆ ನೆರೆಯ ಧಾರವಾಡ, ಹಾವೇರಿ ಜಿಲ್ಲೆಯ ರೈತರು ತಾಲೂಕಿನ ಪಾಲಿನ ಶೇ.60 ಗೊಬ್ಬರ ಖರೀದಿಸಿದ್ದಾರೆ. ಈ ನೀತಿಯಿಂದ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ರೈತರಿಗೆ ಡಿಎಪಿ ಗೊಬ್ಬರ ಸಿಗದೇ ಮುಂಗಾರು ಬಿತ್ತನೆಗೆ ಪೆಟ್ಟು ಬಿದ್ದಂತಾಗಿದೆ.
ರಸಗೊಬ್ಬರ ಮಾರಾಟ, ವಿತರಣೆಯಲ್ಲಿ ರೈತರನ್ನು ಜಿಲ್ಲಾ ತಾಲೂಕುವಾರು ವಿಭಜಿಸುವುದು ಬೇಡ.ಬೇಡಿಕೆಗೆ ತಕ್ಕಷ್ಟು ರಸಗೊಬ್ಬರ ಪೂರೈಸಬೇಕೆನ್ನುವುದು ರೈತರ ನಿಲುವು.