Advertisement
ಹುಣ್ಸೆಕೆರೆಯಲ್ಲಿರುವ ಈ ಬಾವಿ ಕುಂದಾಪುರ ಪುರಸಭೆ ಅಧೀನಕ್ಕೊಳಪಟ್ಟಿದ್ದು, ಇದರಲ್ಲಿ ಸ್ವಲ್ಪ ಪ್ರಮಾಣದ ನೀರಿದ್ದರೂ ಅದರ ಬಣ್ಣ ಬದಲಾಗಿರುವುದರಿಂದ, ಅದು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಹಾಗಾಗಿ ಇದು ಬಾವಿ ಯಾರಿಗೂ ಪ್ರಯೋಜನವಿಲ್ಲದೆ ನಿಷ್ಪ್ರಯೋಜಕವಾಗಿದೆ.
ಮೇ 17ರಂದು ಚಿತ್ರದುರ್ಗದಿಂದ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರೊಂದು ಮುಂಜಾನೆ 3.15ರ ಸುಮಾರಿಗೆ ಈ ಬಾವಿಯ ದಂಡೆಗೆ ಢಿಕ್ಕಿಯಾಗಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ, ಮಕ್ಕಳು ಸಹಿತ 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಾರು ಢಿಕ್ಕಿಯಾದ ಪರಿಣಾಮ ಬಾವಿಯ ದಂಡೆಯ ಒಂದು ಬದಿ ಕುಸಿದು ಬಿದ್ದಿದ್ದು, ಈಗ ಇದು ವಾಹನ ಸವಾರರಿಗೆ ಮತ್ತಷ್ಟು ಅಪಾಯಕಾರಿಯಾದಂತಿದೆ. ಆ ಬಳಿಕ ಇಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರಿ ಪೊಲೀಸ್ ಇಲಾಖೆ ವತಿಯಿಂದ ಬ್ಯಾರಿಕೇಡ್ ಇಡಲಾಗಿದೆ. ಮಳೆಗಾಲಕ್ಕೆ ಕುಸಿಯುವ ಭೀತಿ
ಈಗಿನ್ನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದ್ದು, ಅದಕ್ಕೂ ಮೊದಲು ಸೂಕ್ತ ಕ್ರಮಕೈಗೊಳ್ಳದಿದ್ದರೆ, ಮಳೆಗಾಲದಲ್ಲಿ ಈ ಬಾವಿ ಒಂದು ಬದಿಯಿಂದ ಕುಸಿಯುತ್ತ ಬಂದರೆ ರಾಜ್ಯ ಹೆದ್ದಾರಿಗೂ ಕಂಟಕ ಎದುರಾಗುವ ಭೀತಿಯಿದೆ. ಅದಕ್ಕಾಗಿ ಯಾರಿಗೂ ಪ್ರಯೋಜನವಿಲ್ಲದ ಬಾವಿಯನ್ನು ಮುಂದಿನ ದಿನಗಳಲ್ಲಿ ಮಳೆ ನೀರು ಇಂಗಿಸಲು ಬಳಸುವ ಬಗ್ಗೆ ಪುರಸಭೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತತ್‌ಕ್ಷಣ ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Related Articles
ಸೂಕ್ತ ಕ್ರಮ ಕೈಗೊಳ್ಳಲಿ
ಈ ಬಾವಿ ಹಲವು ವರ್ಷಗಳಿಂದ ಇದ್ದರೂ ಯಾರೂ ಕೂಡ ಇದರ ನೀರು ಉಪಯೋಗಿಸುತ್ತಿಲ್ಲ. ಹಲವು ಬಾರಿ ಈ ಬಾವಿಯಿಂದಾಗಿಯೇ ಅಪಘಾತಗಳು ಉಂಟಾಗಿ, ಇದೊಂದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಸಂಬಂಧ ಪಟ್ಟವರು ಈ ಬಾವಿಯನ್ನು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ, ಸದುಪಯೋಗ ಪಡಿಸಿಕೊಳ್ಳಲಿ.
– ವೇಣುಗೋಪಾಲ್ ಶೆಟ್ಟಿ, ಸ್ಥಳೀಯರು
Advertisement
ಸೂಕ್ತ ಕ್ರಮಅಲ್ಲಿನ ಜನರ ಅಭಿಪ್ರಾಯ ಪಡೆಯುವುದರ ಜತೆಗೆ ಇದರ ಸಾಧಕ – ಬಾಧಕಗಳನ್ನು ನೋಡಿಕೊಂಡು, ಸೂಕ್ತ ಕ್ರಮ ಕೈಗೊಳ್ಳಲು ಕೂಡಲೇ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅದನ್ನು ಮುಚ್ಚುವುದರ ಬದಲು ಅಪಾಯಕಾರಿಯಾಗದಂತೆ, ನೀರಿಂಗಿಸುವ ಬಗ್ಗೆಯೂ ಯೋಚನೆಯಿದೆ. ದುರಸ್ತಿ ಮಾಡುವುದಾದರೂ ಮಳೆಗಾಲಕ್ಕೂ ಮೊದಲೇ ಕಾಮಗಾರಿ ಆರಂಭಕ್ಕೂ ಆಗ್ರಹಿಸಲಾಗುವುದು.
-ಶೇಖರ್ ಪೂಜಾರಿ, ಹುಂಚಾರುಬೆಟ್ಟು , ಪುರಸಭೆ ಸದಸ್ಯರು