ಬಜಪೆ: ಕೆಂಜಾರು -ಅದ್ಯಪಾಡಿ- ಕೈಕಂಬ ಲೋಕೋ ಪಯೋಗಿ ಇಲಾಖೆ ರಸ್ತೆಯ ಅದ್ಯಪಾಡಿ ಕೊಲ್ಲೊಟ್ಟು ಬಳಿ ಅಪಾಯಕಾರಿ ತಿರುವು ಹಲವಾರು ಅಪಘಾತ ಹಾಗೂ ಸಾವಿಗೆ ಕಾರಣವಾಗಿದೆ. ಈ ತಿರುವಿನ ಬಳಿ ದೊಡ್ಡದಾದ ಬಂಡೆ, ಗುಡ್ಡ ಇದೆ. ಹಾಗಾಗಿ ಇಲ್ಲಿ ತಡೆಗೋಡೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಇಲ್ಲಿ ಈಗಾಗಲೇ 8 ಅಪಘಾತಗಳು ಸಂಭವಿಸಿದೆ. ಅದರಲ್ಲಿ 2 ಸಾವು 5 ವಿವಿಧ ಅಪಘಾತದಲ್ಲಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವುದು ಕಂಡು ಬಂದಿದೆ. ತಿರುವಿನಲ್ಲಿ ಎದುರಿನಿಂದ ಬಂದ ವಾಹನಗಳಿಗೆ ಗೊತ್ತಾಗುವಂತೆ ಕನ್ನಡಿಯನ್ನು ಇಡಲಾಗಿದೆ. ಆದರೆ ಏಕಾಏಕೀ ತಿರುವು ಇದ್ದಕಾರಣ ವಾಹನಗಳು ನಿಯಂತ್ರಣ ಸಾಧ್ಯವಾಗದೇ ಅಪಘಾತಕ್ಕೊಳಗಾಗುವುದು ಸಾಮಾನ್ಯವಾಗಿದೆ.
ಈಗ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದೆ. ವಿಮಾನ ನಿಲ್ದಾಣ, ಕೆಂಜಾರು, ಕೈಕಂಬಕ್ಕೆ ಹೋಗಲು ಈ ರಸ್ತೆಯನ್ನೇ ಹೆಚ್ಚು ಉಪಯೋಗಿಸುತ್ತಿದ್ದಾರೆ.
ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ
ಈ ತಿರುವಿನ ಕೆಳಗಡೆ ಕೊಲ್ಲೊಟ್ಟಿಗೆ ಹೋಗುವ ರಸ್ತೆ ಇದೆ. ಲೋಕೋಪಯೋಗಿ ರಸ್ತೆಯಿಂದ ಕೊಲ್ಲೊಟ್ಟು ರಸ್ತೆ 15 ಅಡಿ ಕೆಳಗಡೆ ಇದೆ. ಇದರಿಂದ ವಾಹನಗಳು ಹತೋಟಿ ತಪ್ಪಿದರೆ 15 ಅಡಿ ಕೆಳಗಡೆ ಇರುವ ಕೊಲ್ಲೊಟ್ಟು ರಸ್ತೆಗೆ ಬಂದು ಬೀಳುತ್ತಾರೆ. ಇದು ಪ್ರಾಣಾಪಾಯಕ್ಕೆ ಕಾರಣವಾಗಿದೆ. ಈ ತಿರುವಿನಲ್ಲಿ ತಡೆಗೋಡೆ ನಿರ್ಮಿಸಬೇಕಾಗಿದೆ. ಇದರಿಂದ ಅಪಘಾತವನ್ನು ತಪ್ಪಿಸಬಹುದಾಗಿದೆ.