Advertisement

ಪುಣಪ್ಪಾಡಿ: ಅಂಗನವಾಡಿ ಪಕ್ಕ ಅಪಾಯಕಾರಿ ಮರ

12:16 PM Aug 04, 2018 | Team Udayavani |

ಸವಣೂರು: ಪುಣcಪ್ಪಾಡಿ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಅಪಾಯಕಾರಿ ಮರಗಳಿದ್ದು, ಅವುಗಳನ್ನು ತೆರವುಗೊಳಿಸಬೇಕಿದೆ. ಈ ಕುರಿತು ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಮರ ತೆರವು ಕುರಿತಂತೆ ಕ್ರಮ ಕೈಗೊಂಡಿಲ್ಲ ಎಂದು ಹೆತ್ತವರು ತಿಳಿಸಿದ್ದಾರೆ.

Advertisement

4 ಮರಗಳು ಅಪಾಯಕಾರಿ
ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಇರುವ 4 ದೊಡ್ಡ ಮರಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಗಾಳಿ-ಮಳೆ ಸಂದರ್ಭದಲ್ಲಿ ಪುಟಾಣಿಗಳು ಭಯದಲ್ಲೇ ಕಾಲ ಕಳೆಯುವಂತಾಗಿದೆ. ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಇರುವ ಮರವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬುದು ಹೆತ್ತವರ ಅಳಲು.

22 ಪುಟಾಣಿಗಳು
ಪರಿಶಿಷ್ಟ ಜಾತಿ- ಪಂಗಡದವರೇ ಜಾಸ್ತಿ ಸಂಖ್ಯೆಯಲ್ಲಿರುವ ಪುಣcಪ್ಪಾಡಿ ಗ್ರಾಮದ ಈ ಅಂಗನವಾಡಿ ಕೇಂದ್ರದಲ್ಲಿ 22 ಪುಟಾಣಿಗಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಕ್ಕಳು ಗಾಳಿ-ಮಳೆ ಸಂದರ್ಭದಲ್ಲಿ ಭಯದಲ್ಲೇ ಇರುವಂತಹ ಸ್ಥಿತಿ ಇದೆ. ಈ ಅಪಾಯಕಾರಿ ಮರವಿರುವ ಕೆಳಗೆ ವಿದ್ಯುತ್‌ ತಂತಿ ಹಾದುಹೋಗಿದ್ದು, ಮರ ಬಿದ್ದರೆ ವಿದ್ಯುತ್‌ ತಂತಿಯ ಜತೆಗೆ ವಿದ್ಯುತ್‌ ಕಂಬಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ವಿದ್ಯುತ್‌ ತಂತಿಯ ಮೇಲೆ ಮರ ಬಿದ್ದರೆ ಅನಾಹುತವಾಗುವ ಸಾಧ್ಯತೆ ಇದೆ. ಇದರಿಂದಾಗಿ ಈ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ.

ಗ್ರಾಮ ಸಭೆಯಲ್ಲಿ ಪ್ರಸ್ತಾವ
ಈ ಸಮಸ್ಯೆಯ ಕುರಿತು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸವಣೂರು ಗ್ರಾ.ಪಂ. ಗ್ರಾಮ ಸಭೆಯಲ್ಲಿ ಪ್ರಸ್ತಾವ ಮಾಡಿದ್ದು, ಈವರೆಗೂ ಮರ ತೆರವುಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಗ್ರಾ.ಪಂ. ಸಾಮಾನ್ಯ ಸಭೆ, ವಾರ್ಡ್‌ ಸಭೆ, ಮಕ್ಕಳ ಗ್ರಾಮ ಸಭೆಯಲ್ಲೂ ನಿರ್ಣಯ ಕೈಗೊಂಡು ಅರಣ್ಯ ಇಲಾಖೆಗೆ ಬರೆದುಕೊಳ್ಳಲಾಗಿದೆ.

ಸವಣೂರು- ಕುಮಾರಮಂಗಲ- ಮಾಡಾವು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನೂ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸವಣೂರು ಗ್ರಾ.ಪಂ. ಹಿರಿಯ ಸದಸ್ಯ ಗಿರಿಶಂಕರ ಸುಲಾಯ ತಿಳಿಸಿದ್ದಾರೆ.

Advertisement

ಪರಿಶೀಲಿಸಿ ಕ್ರಮ
ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಕುಮಾರಸ್ವಾಮಿ
ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next