Advertisement

ಅಪಾಯಕಾರಿ ವಿದ್ಯುತ್‌ ಪ್ಯಾನಲ್ ಬಾಕ್ಸ್‌ಗಳು!

01:00 PM Jul 17, 2019 | Suhan S |

ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಜಲಮಂಡಳಿ ನಿರ್ವಹಿಸುವ ಕೊಳವೆ ಬಾವಿಗಳಿಗೆ ವಿದ್ಯುತ್‌ ಪೂರೈಸುವ ಪ್ಯಾನಲ್ ಬಾಕ್ಸ್‌ಗಳು, ನಗರಸಭೆ ನಿರ್ವಹಿಸುವ ಬೀದಿ ದೀಪಗಳಿಗೆ ವಿದ್ಯುತ್‌ ಪೂರೈಸುವ ಪ್ಯಾನಲ್ ಬಾಕ್ಸ್‌ಗಳು ತುಕ್ಕು ಹಿಡಿದು, ಬಾಗಿಲು ಕಿತ್ತು ಹೋಗಿ ನಾಗರಿಕರಿಗೆ ಅಪಾಯಕಾರಿಯಾಗಿದ್ದರೂ, ಎರಡೂ ಇಲಾಖೆಗಳ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ.

Advertisement

ಮುಂಜಾಗ್ರತೆ ವಹಿಸಿ: ಜಲಮಂಡಳಿ ಅಧಿಕರಿಗಳು ಮತ್ತು ನಗರಸಭೆಯ ಅಧಿಕಾರಿಗಳಿಗೆ ಮುಂಜಾಗ್ರತೆವಹಿಸಿ ಅಪಾಯವನ್ನು ತಪ್ಪಿಸಿ, ನಾಗರಿಕರನ್ನು ರಕ್ಷಿಸುವ ಹೊಣೆಗಾರಿಕೆಯೇ ಇಲ್ಲ ಎಂದು ನಾಗರಿಕರು ಹರಿಹಾಯ್ದಿದ್ದಾರೆ.

ತುಕ್ಕು ಹಿಡಿದ ಪ್ಯಾನಲ್ ಬಾಕ್ಸ್‌: ನಗರದ ಬಹುತೇಕ ಬಡಾವಣೆಗಳಲ್ಲಿ ಕೊಳವೆ ಬಾವಿಗಳಿಗೆ ವಿದ್ಯುತ್‌ ಪೂರೈಕೆ ನಿಯಂತ್ರಣಕ್ಕೆ ಅಳವಡಿಸಿರುವ ಪ್ಯಾನಲ್ ಬಾಕ್ಸ್‌ಗಳು ತುಕ್ಕು ಹಿಡಿದು, ಗಾಳಿ, ಮಳೆಗೆ ವಿದ್ಯುತ್‌ ಸಂಪರ್ಕ ಸಾಧನಗಳು ತೆರೆದುಕೊಂಡಿವೆ. ಇನ್ನು ಕೆಲವು ಬಾಕ್ಸುಗಳ ಬಾಗಿಲುಗಳು ಕಿತ್ತು ಹೋಗಿವೆ. ಕೆಲವೆಡೆ ಕಿತ್ತು ಹೋಗಿರುವ ಬಾಗಿಲುಗಳನ್ನೆ ಜೋಡಿಸಿ ತೇಪೆ ಕೆಲಸ ಮಾಡಲಾಗಿದೆ. ಕೆಲವು ಬಾಕ್ಸುಗಳಿಗೆ ರಟ್ಟಿನ ಪೆಟ್ಟಿಗೆಯನ್ನು ಕಟ್ಟಲಾಗಿದೆ. ಬಹುತೇಕ ಬಾಕ್ಸುಗಳನ್ನು ನೆಲಮಟ್ಟದಲ್ಲೇ ಅಳವಡಿಸಿರುವುದರಿಂದ ಬೇಗನೆ ತುಕ್ಕು ಹಿಡಿಯುತ್ತಿವೆ. ನಗರಾದ್ಯಂತ ಸಮಾರು 20ಕ್ಕೂ ಹೆಚ್ಚು ಪ್ಯಾನಲ್ ಬಾಕ್ಸ್‌ಗಳು ಅಪಾಯವನ್ನು ಒಡ್ಡುವ ಗಂಭೀರ ಸ್ಥಿತಿಯಲ್ಲಿವೆ ಎಂದು ಜಲಮಂಡಳಿ ಅಧಿಕಾರಿಗಳೇ ತಿಳಿಸಿದ್ದಾರೆ.

ಅಪಾಯ ಕಟ್ಟಿಟ್ಟ ಬುತ್ತಿ: ನಗರದ ಛತ್ರದ ಬೀದಿಯಲ್ಲಿ ಶ್ರೀರಾಮ ದೇವಾಲಯದ ಬಳಿ ಇರುವ ಪ್ಯಾನಲ್ ಬಾಕ್ಸ್‌ನ ಬಾಗಿಲುಗಳು ಕಿತ್ತು ಹೋಗಿ ತಿಂಗಳುಗಳೇ ಸಂದಿವೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ದುರಸ್ತಿ ಆಗಿಲ್ಲ ಎಂದು ಈ ಭಾಗದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ಯಾನಲ್ ಬಾಕ್ಸ್‌ ಪಕ್ಕದಲ್ಲೇ ನಾಗರಿಕರು ಮನೆ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಇಲ್ಲಿ ಬೀದಿ ನಾಯಿಗಳು ತ್ಯಾಜ್ಯದಲ್ಲಿ ಆಹಾರ ಅರಸುವುದುಂಟು. ತ್ಯಾಜ್ಯ ಎಸೆಯುವಾಗ ನಾಗರಿಕರು ಆಕಸ್ಮಿಕವಾಗಿ ಪ್ಯಾನಲ್ ಬಾಕ್ಸ್‌ನ ಸಂಪರ್ಕಕ್ಕೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ರಸ್ತೆಯಲ್ಲಿ ನೂರಾರು ಶಾಲಾ ಮಕ್ಕಳು ಶಾಲೆಗಳಿಗೆ ಹೋಗಿ, ಬರುತ್ತಾರೆ, ಕುತೂಹಲಕ್ಕೆ ಕೈ ಇಟ್ಟರೆ ಹೊಣೆ ಯಾರು ಎಂದು ನಾಗರಿಕರು ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಹೈಮಾಸ್ಟ್‌ ದೀಪಗಳ ಕತೆಯೂ ಇದೆ!: ನಗರದಲ್ಲಿ ಬೀದಿ ದೀಪಗಳಿಗೆ ವಿದ್ಯುತ್‌ ಪೂರೈಸುವ ನಿಯಂತ್ರಣ ಪೆಟ್ಟಿಗೆಗಳದ್ದು ಸಹ ಇದೇ ಕತೆ. ಮುಖ್ಯ ರಸ್ತೆಯಲ್ಲಿ ಶ್ರೀ ಭಾರ್ಗವ ಸ್ವಾಮಿ ಭಜನೆ ಮಂದಿರದ ಬಳಿ ಬೀದಿ ದೀಪಗಳಿಗೆ ವಿದ್ಯುತ್‌ ಪೂರೈಸುವ ವೈರುಗಳು ಕಂಬದಿಂದ ಹೊರ ಬಂದಿವೆ. ವೈರುಗಳು ಅಲ್ಲಲ್ಲಿ ಕಿತ್ತು ಹೋಗಿವೆ. ಮಳೆ ಬಂದಾಗ ಕಂಬಗಳಲ್ಲಿ ವಿದ್ಯುತ್‌ ಹರಿಯುತ್ತದೆ ಎಂದು ಕೆಲವು ವ್ಯಾಪಾರಿಗಳು ದೂರಿದ್ದಾರೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳ ಗಮನ ಸೆಳೆದರು ಉಪಯೋಗವಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ.

Advertisement

ಹೈಮಾಸ್ಟ್‌ ದೀಪಗಳು ಕೆಟ್ಟು ಹೋಗಿವೆ: ಪೊಲೀಸ್‌ ಭವನದ ಬಳಿ ಇರುವ ಹೈಮಾಸ್ಟ್‌ ದೀಪಗಳು ಕೆಟ್ಟು ಹೋಗಿ ವಾರಗಳು ಸಂದಿವೆ. ಈ ಹೈಮಾಸ್ಟ್‌ ಕಂಬಕ್ಕೆ ಅಳವಿಡಿಸಿರುವ ಪ್ಯಾನಲ್ ಬಾಕ್ಸ್‌ನ ಬಾಗಿಲು ಸಹ ಕಿತ್ತು ಹೋಗಿ ವಾರಗಳೇ ಕಳೆದಿವೆ. ನಗರದ ಕೆಲವೆಡೆ ಹೈಮಾಸ್ಟ್‌ ದೀಪಗಳ ಸ್ಥಿತಿಯೂ ಹೀಗೆ ಇದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಅಪಾಯಕ್ಕೆ ಮುನ್ನ ಎಚ್ಚರವಹಿಸಿ ದುರಸ್ತಿ ಮಾಡ ಬೇಕಾದ ಅಧಿಕಾರಿಗಳು ಹೀಗೆ ನಿರ್ಲಕ್ಷವಹಿಸಿದರೆ ನಾಗರಿಕರನ್ನು ರಕ್ಷಿಸುವವರು ಯಾರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

 

● ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next