Advertisement

ದೇಹದೊಳಗೆ ಸೇರಿದ ಅಪಾಯಕಾರಿ ವಿಷ:ಜೀವನ್ಮರಣ ಹೋರಾಟದಲ್ಲಿ ಉಪ ವಲಯಾರಣ್ಯಾಧಿಕಾರಿ ಯೋಗೇಶ್ ನಾಯ್ಕ

06:00 PM Jul 07, 2023 | Team Udayavani |

ದಾಂಡೇಲಿ : ದೇಹದೊಳಗೆ ಅಪಾಯಕಾರಿ ವಿಷ ಸೇರಿದ ಪರಿಣಾಮವಾಗಿ ಉಪ ವಲಯಾರಣ್ಯಾಧಿಕಾರಿಯೊಬ್ಬರು ಜೀವನ್ಮರಣ ಹೋರಾಟದಲ್ಲಿರುವ ಮನಕಲುಕುವ ಘಟನೆ ವರದಿಯಾಗಿದೆ.

Advertisement

ದಾಂಡೇಲಿ ತಾಲ್ಲೂಕಿನ ಕುಳಗಿ ಶಾಖೆಯ ಉಪ ವಲಯಾರಣ್ಯಾಧಿಕಾರಿ ಹಾಗೂ ಮೂಲತ: ಕುಮಟಾ ತಾಲ್ಲೂಕಿನ ಬಾಡ ಗ್ರಾಮದವರಾದ ಮತ್ತು ದಾಂಡೇಲಿ ಅರಣ್ಯ ವಸತಿ ಗೃಹದ ನಿವಾಸಿಯಾಗಿರುವ ಯೋಗೇಶ್ ನಾಯ್ಕ ಎಂಬವರೇ ಇದೀಗ ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವ್ಯಕ್ತಿಯಾಗಿದ್ದಾರೆ.

ವಿರ್ನೋಲಿ ಅರಣ್ಯ ವಲಯದ ಕುಳಗಿ ಶಾಖೆಯಲ್ಲಿ ಸಾಗುವನಿ ಮಡಿಯೊಳಗಿರುವ ಕಳೆಗಳನ್ನು ನಾಶಪಡಿಸಲು ಕೀಟನಾಶಕ ಸಿಂಪಡಿಸುವ ಸಂದರ್ಭದಲ್ಲಿ ತನ್ನ ಸಹೋದ್ಯೋಗಿಗಳ ಜೊತೆ ತಾನು ಸಹ ಕೀಟನಾಶಕವನ್ನು ಸಿಂಪಡಿಸಿದ್ದ್ದಾರೆಂಬ ಮಾಹಿತಿ ಹೊರ ಬೀಳುತ್ತಿದೆ. ಕೀಟನಾಶಕ ಸಿಂಪಡಿಸಿದ ನಂತರ ಯೋಗೇಶ್ ನಾಯ್ಕ ಅವರು ಕೈಯನ್ನು ಸರಿಯಾಗಿ ಸ್ವಚ್ಚಗೊಳಿಸದೇ ನೀರು ಹಾಗೂ ಆಹಾರ ಸೇವಿಸಿದ್ದರೆನ್ನಲಾಗಿದೆ. ಮರುದಿನ ಯೋಗೇಶ್ ನಾಯ್ಕ ಅವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಅನಾರೋಗ್ಯ ಉಲ್ಬಣಗೊಳ್ಳುತ್ತಿದ್ದಂತೆಯೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಯೋಗೇಶ್ ನಾಯ್ಕ ಅವರನ್ನು ದಾಖಲಿಸಲಾಗಿದೆ. ಅಲ್ಲಿಯು ಚೇತರಿಸಿಕೊಳ್ಳದ ನಂತರ ಕಳೆದೆರಡು ದಿನಗಳಿಂದ ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿರುವ ಯೋಗೇಶ್ ನಾಯ್ಕ ಅವರು ಇದೀಗ ಜೀವನ್ಮರಣ ಹೋರಾಟದಲ್ಲಿದ್ದಾರೆ.

ಅಂಬಿಕಾನಗರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಯೋಗೇಶ್ ನಾಯ್ಕ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಸಧ್ಯಕ್ಕೆ ಲಭ್ಯವಾಗುತ್ತಿದೆ. ಇನ್ನೂ ಯೋಗೇಶ್ ನಾಯ್ಕ ಅವರ ಕುಟುಂಬಸ್ಥರು ಆಸ್ಪತ್ರೆಯಲ್ಲಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮಿಂದಾದ ನೆರವನ್ನು ನೀಡುತ್ತಿದ್ದಾರೆ.

ಅತ್ಯಂತ ಬಡತನದ ಕುಟುಂಬದಿಂದ ಬಂದಿದ್ದ ಯೋಗೇಶ್ ನಾಯ್ಕ ಅವರು ಇಡೀ ಇಲಾಖೆಯಲ್ಲಿ ಅಜಾತಶತ್ರು ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಯಾರೇ ತಪ್ಪು ಮಾಡಿದಾಗ ದಂಡಿಸುವ ಮೊದಲು ಅವರನ್ನು ಸರಿದಾರಿಗೆ ತರುವ ಕಾರ್ಯವನ್ನು ಮಾಡುತ್ತಿದ್ದ ಅವರ ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಅನುಕರಣೀಯ. ಮಡದಿ ದಾಂಡೇಲಿ ಅರಣ್ಯ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎರಡುವರೆ ವರ್ಷದ ಪುಟ್ಟ ಮಗ ಇದ್ದಾನೆ.

Advertisement

ಇದನ್ನೂ ಓದಿ: Kerala; ಅಪರೂಪದ ಮೆದುಳಿನ ಸೋಂಕಿನಿಂದ ಬಾಲಕ ಮೃತ್ಯು

ಸಣ್ಣ ಅಜಾಗರೂಕತೆಯೆ ಈ ಮಟ್ಟಕ್ಕೆ ಮುಟ್ಟಿತ್ತಲ್ಲ ಎಂಬ ನೋವು ಎಲ್ಲರನ್ನು ಕಾಡತೊಡಗಿದೆ. ಈಗ ಅದ್ಯಾಕಾಯ್ತು, ಇದು ಯಾಕಾಯ್ತು ಎನ್ನುವುದನ್ನು ಚರ್ಚೆ ಮಾಡುವ ಸಮಯವಲ್ಲ. ಬದಲಾಗಿ ಮುಂದೇನು ಎಂಬ ಬಗ್ಗೆ ಯೋಚನೆ ಮಾಡಬೇಕಾಗಿದೆ.

ಸರಳತೆ, ಪ್ರಾಮಾಣಿಕತೆ, ಪ್ರೀತಿ, ಆತ್ಮೀಯತೆ, ಸಂಸ್ಕಾರಯುತವಾದ ನಡುವಳಿಕೆಗಳ ಮೂಲಕವೆ ಎಲ್ಲರ ವಾತ್ಸಲ್ಯಕ್ಕೆ ಪಾತ್ರರಾಗಿದ್ದ ಯೋಗೇಶ್ ನಾಯ್ಕ ಅವರು ಶೀಘ್ರ ಗುಣಮುಖರಾಗಿ ಹೊರಬರಲೆಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ. ಎರಡುವರೆ ವರ್ಷದ ಪುಟ್ಟ ಮಗುವಿನ ಅಪ್ಪ ಎಂಬ ಕೂಗಿಗೆ ಯೋಗೇಶ್ ನಾಯ್ಕ ಶೀಘ್ರ ಧ್ವನಿಸಲಿ, ಸ್ಪಂದಿಸಲೆನ್ನುವುದೆ ಎಲ್ಲರ ಪ್ರಾರ್ಥನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next