Advertisement

ಅಪಾಯಕಾರಿಯಾದ ಕಾಸರಗೋಡು ನಗರದ ಚರಂಡಿ ಸ್ಲಾಬ್‌ಗಳು

03:45 AM Jul 11, 2017 | Harsha Rao |

ಕಾಸರಗೋಡು: ಕಾಸರಗೋಡು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರಗಳಲ್ಲೊಂದು. ಆದರೆ ಇಲ್ಲಿನ ಸಮಸ್ಯೆ ಹತ್ತು ಹಲವು. ನಗರ ಬೆಳೆದಂತೆ ಅದಕ್ಕೆ ಅನುಗುಣವಾಗಿ ಪ್ರಾಥಮಿಕ ಸೌಲಭ್ಯಗಳನ್ನೂ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂಬುದು ಅಷ್ಟೇ ಸತ್ಯ. ಕೆಟ್ಟು ಹೋದ ರಸ್ತೆಗಳು, ಅಲ್ಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ರಾಶಿ. ಅದರೊಂದಿಗೆ ಚರಂಡಿ ಸಮಸ್ಯೆ ಬಿಗಡಾಯಿಸುತ್ತಿದೆ. ಚರಂಡಿ ಮುಚ್ಚಲು ಬಳಸಿರುವ ಸ್ಲಾಬ್‌ಗಳು ನಗರದ ಅಲ್ಲಲ್ಲಿ ಮುರಿದು ಬಿದ್ದಿರುವುದರಿಂದ ಪಾದಚಾರಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಹಲವಾರು ಮಂದಿ ಪಾದಚಾರಿಗಳು ಮುರಿದು ಬಿದ್ದ ಚರಂಡಿ ಸ್ಲಾಬ್‌ ಗಳೆಡೆಯಲ್ಲಿ ಸಿಲುಕಿ ಗಾಯಗೊಂಡ ಘಟನೆ ಹಲವು ನಡೆದಿದ್ದರೆ, ವಾಹನಗಳು ಚರಂಡಿಗೆ ಬಿದ್ದ ಘಟನೆಗಳೂ ನಡೆದಿವೆ.

Advertisement

ಕಾಸರಗೋಡು ನಗರಸಭೆಯ ವಿವಿಧೆಡೆಗಳಲ್ಲಿ ಚರಂಡಿಗೆ ಹಾಸಲಾಗಿರುವ ಸಿಮೆಂಟ್‌ ಸ್ಲಾಬ್‌ಗಳು ಮುರಿದು ಬಿದ್ದು ಅಪಾಯಕ್ಕೆ ಕಾರಣವಾಗುತ್ತಿವೆ. ವಿದ್ಯಾರ್ಥಿಗಳು ಸಹಿತ ನಡೆದು ಹೋಗುವ ಜನದಟ್ಟಣೆಯ ಪ್ರದೇಶದ ರಸ್ತೆ ಬದಿಯ ಚರಂಡಿಗೆ ಹಾಕಲಾಗಿರುವ ಸಿಮೆಂಟ್‌ ಸ್ಲಾಬ್‌ಗಳು ಮುರಿದು ಬಿದ್ದಿರುವುದರಿಂದ ಅಪಾಯಕ್ಕೆ ರಹದಾರಿಯಾಗಿದೆ.

ಹಳೆ ಬಸ್‌ ನಿಲ್ದಾಣ ಪರಿಸರದ ಚರಂಡಿಗೆ ಹಾಸಿದ್ದ ಮುರಿದು ಬಿದ್ದ ಸ್ಲಾಬ್‌ನೆಡೆಗೆ ಮಹಿಳೆಯೋರ್ವರ ಕಾಲು ಸಿಲುಕಿತ್ತು. ಸಿಲುಕಿದ್ದ ಕಾಲನ್ನು ಎಷ್ಟು ಪ್ರಯತ್ನಿಸಿದ್ದರೂ ಹೊರ ತೆಗೆಯಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಗ್ಯಾಸ್‌ ಕಟ್ಟರ್‌ ತಂದು ಕಾಂಕ್ರೀಟ್‌ ಸ್ಲಾಬ್‌ ಮುರಿದು ತೆಗೆದ ಬಳಿಕ ಮಹಿಳೆಯ ಕಾಲನ್ನು ಹೊರ ತೆಗೆಯಲಾಯಿತು.

ರೈಲು ನಿಲ್ದಾಣ  ಪರಿಸರದ ಚರಂಡಿಯ ಸ್ಲಾಬ್‌ ಮುರಿದು ಬಿದ್ದಿತ್ತು. ಈ ಸ್ಲಾಬ್‌ನೆಡೆಗೆ ಸರಕಾರಿ ನೌಕರನೋರ್ವನ ಕಾಲು ಸಿಲುಕಿ ಗಾಯಗೊಂಡ ಘಟನೆ ನಡೆದಿತ್ತು. ಇಂತಹ ಘಟನೆಗಳು ಕಾಸರಗೋಡು ನಗರದಲ್ಲಿ ಸಾಮಾನ್ಯವಾಗಿದ್ದು, ಹೀಗಿದ್ದರೂ ಮುರಿದು ಬಿದ್ದ ಸ್ಲಾಬ್‌ಗಳನ್ನು ಸರಿಪಡಿಸುವ ಇಲ್ಲವೇ ಬದಲಿ ಸ್ಲಾಬ್‌ ಹಾಕುವ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದಿಲ್ಲ ಎಂಬುದೇ ಇಲ್ಲಿನ ದೊಡ್ಡ ದುರಂತವಾಗಿದೆ.

ಸಾಮಾನ್ಯವಾಗಿ ಎಲ್ಲೆಡೆ ಮಳೆಗಾಲ ಆರಂಭಕ್ಕೆ ಮುನ್ನ ಚರಂಡಿಗಳ ಸ್ಲಾಬ್‌ ತೆಗೆದು ಚರಂಡಿಯಲ್ಲಿ ತುಂಬಿರುವ ತ್ಯಾಜ್ಯ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವುದಿದೆ. ಆದರೆ ಕಾಸರಗೋಡು ನಗರದಲ್ಲಿ ಇಂತಹದ್ದು ನಡೆದಿಲ್ಲ. ಇದರಿಂದಾಗಿ ಮಳೆ ನೀರು ಚರಂಡಿಯಲ್ಲಿ ಹರಿಯುವ ಬದಲಾಗಿ ರಸ್ತೆಯಲ್ಲೇ ಹರಿಯುತ್ತದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ತುಂಬುವುದರಿಂದ ಮುರಿದು ಬಿದ್ದಿರುವ ಸ್ಲಾಬ್‌ ಗಮಕ್ಕೆ ಬಾರದೆ ಪಾದಚಾರಿಗಳು ಚರಂಡಿಗೆ ಬೀಳುವ ಪ್ರಸಂಗಗಳು ಇಲ್ಲಿ ಸಾಮಾನ್ಯವಾಗಿವೆೆ. 

Advertisement

ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪರಿಸರದಲ್ಲಿ ಮತ್ತು ಬ್ಯಾಂಕ್‌ ರಸ್ತೆಯಲ್ಲಿ ಮುರಿದು ಬಿದ್ದ ಸ್ಲಾಬ್‌ಗಳನ್ನು ಕಾಣಬಹುದು. ಕೋಟೆಕಣಿ ರಸ್ತೆಯಲ್ಲೂ ಮುರಿದು ಬಿದ್ದ ಸ್ಲಾಬ್‌ಗಳು ಅಪಾಯಕ್ಕೆ ಕಾರಣವಾಗುತ್ತಿವೆ. ಕೆಲವು ದಿನಗಳ ಹಿಂದೆ ಕಾರೊಂದು ಮುರಿದು ಬಿದ್ದ ಸ್ಲಾಬ್‌ಕಾರಣದಿಂದ ಚರಂಡಿಗೆ ಬಿದ್ದಿತ್ತು. ಆದರೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.

ಸ್ಲಾಬ್‌ ನಿರ್ಮಾಣದಲ್ಲಿ ಕಳಪೆ ಸ್ಲಾಬ್‌ಗಳು ಮುರಿದು ಬೀಳಲು ಪ್ರಮುಖ ಕಾರಣವಾಗಿದೆ ಎಂಬುದು ಸಾರ್ವ ತ್ರಿಕ ಅಭಿಪ್ರಾಯವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಕಚ್ಚಾ ಸಾಮಗ್ರಿಗಳನ್ನು ಬಳಸದೆ, ಕಡಿಮೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುವುದರಿಂದ ಇಂತಹ ಪರಿಸ್ಥಿತಿಗೆ ಕಾರಣವಾಗುತ್ತಿದೆ.

ಹಲವರು ಗಾಯಗೊಂಡರೂ ಅಧಿಕಾರಿಗಳ ನಿದ್ದೆ ಬಿಟ್ಟಿಲ್ಲ!
ತಿಂಗಳ ಹಿಂದೆ ಕಾಸರಗೋಡು ನಗರದ ಸರಕಾರಿ ಜನರಲ್‌ ಆಸ್ಪತ್ರೆಯ ಮುಂಭಾಗದಲ್ಲಿರುವ ಔಷಧದ ಅಂಗಡಿಯಿಂದ ಔಷಧ ಖರೀದಿಸಲು ಬಂದಿದ್ದ ರೋಗಿಯ ಕಾಲು ಚರಂಡಿಗೆ ಹಾಸಿದ್ದ ಮುರಿದು ಬಿದ್ದ ಸ್ಲಾಬ್‌ನ ಎಡೆಗೆ ಸಿಲುಕಿ ಗಾಯಗೊಂಡಿದ್ದರು. ಸ್ಲಾಬ್‌ನೆಡೆಗೆ ಸಿಲುಕಿಕೊಂಡ ಕಾಲು ಹೊರ ತೆಗೆಯಲು ಸಾಧ್ಯವಾಗದಿದ್ದಾಗ ಸ್ಥಳೀಯರು ಸಾಕಷ್ಟು ಪ್ರಯತ್ನಿಸಿದ್ದರು. ಆದರೂ ಕಾಲು ಹೊರ ತೆಗೆಯಲು ಸಾಧ್ಯವಾಗಿಲ್ಲ. ಇದರಿಂದ ಅಗ್ನಿಶಾಮಕ ದಳವನ್ನು ಕರೆಸಬೇಕಾಯಿತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಚರಂಡಿಯ ಸ್ಲಾಬ್‌ನೆಡೆಗೆ ಸಿಲುಕಿದ್ದ ರೋಗಿಯ ಕಾಲನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ಕೊನೆಗೆ ಚರಂಡಿಯ ಸ್ಲಾéಬ್‌ನ್ನು ಕಿತ್ತು ತೆಗೆದು ಬಳಿಕ ರೋಗಿಯ ಕಾಲನ್ನು ಹೊರ ತೆಗೆಯಲಾಯಿತು. ಈ ಸಂದರ್ಭದಲ್ಲಿ ರೋಗಿಯ ಕಾಲಿಗೆ ಸಾಕಷ್ಟು ಗಾಯಗಳಾಗಿದ್ದವು. ಇದು ಒಂದು ಘಟನೆಯಲ್ಲ. ಇಂತಹ ಹಲವು ಘಟನೆಗಳು ಕಾಸರಗೋಡು ನಗರದಲ್ಲಿ ನಡೆದಿವೆ.

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next