Advertisement

ಶಿರ್ವ ದ್ವಿಪಥ ರಸ್ತೆಯಲ್ಲಿ ಅಪಾಯಕಾರಿ ಜಂಕ್ಷನ್‌ಗಳು! 

06:00 AM Sep 28, 2018 | |

ಶಿರ್ವ: ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ,ಪಟ್ಟಣ ಪಂಚಾಯತ್‌ ಆಗುವ ಎಲ್ಲಾ ಅರ್ಹತೆಯಿರುವ ಶಿರ್ವ -ಮಂಚಕಲ್‌ ಪೇಟೆಯಲ್ಲಿ ದ್ವಿಪಥ ರಸ್ತೆಯ ಕಾಮಗಾರಿ ನಡೆದು ಪೇಟೆಯ ಸೌಂದರ್ಯವೇನೋ ಹೆಚ್ಚಿದೆ ಆದರೆ ಇಲ್ಲಿನ ಕೆಲ ಜಂಕ್ಷನ್‌ಗಳು ಅಪಾಯಕಾರಿಯಾಗಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಅಪಾಯಕಾರಿ ಜಂಕ್ಷನ್‌ಗಳು 
ಶಿರ್ವ ಪೇಟೆಯು ಪ್ರಮುಖ ವ್ಯವಹಾರ ಕೇಂದ್ರವಾಗಿದೆ. ಇಲ್ಲಿನ ದ್ವಿಪಥ ರಸ್ತೆಯಲ್ಲಿ  ದಿನವೊಂದಕ್ಕೆ ಸಾವಿರಾರು ವಾಹನಗಳು ಚಲಿಸುತ್ತಿವೆ. ಈ ರಸ್ತೆಯಲ್ಲಿ ಬರುವ ಶಿರ್ವ- ಕಾಪು ರಸ್ತೆ, ಕುತ್ಯಾರು -ಶಿರ್ವ ಕ್ರಾಸ್‌, ಎಂಎಸ್‌ಆರ್‌ಎಸ್‌ ಕಾಲೇಜು ಕ್ರಾಸ್‌ ಮತ್ತು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಜಂಕ್ಷನ್‌ಗಳು ಅಪಾಯಕಾರಿಯಾಗಿದ್ದು ಹಲವು ಅಪಘಾತಗಳು ಸಂಭವಿಸಿ ಸಮಸ್ಯೆ ತಲೆದೋರಿದೆ.

ಅಪಘಾತಗಳ ಸರಮಾಲೆ
ಮುಖ್ಯರಸ್ತೆ ವಿಸ್ತರಣೆಯಿಂದಾಗಿ ರಸ್ತೆ ನೇರ ವಾಗಿದ್ದು ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುತ್ತಿವೆ. ಮುಖ್ಯ ರಸ್ತೆಗೆ ಬರುವವರಿಗೆ ಡಿವೈಡರ್‌ ಅಪಾಯಕಾರಿಯಾಗಿ ಪರಿಣಮಿಸಿದೆ. ದ್ವಿಪಥ ರಸ್ತೆಯಾಗಿ ಪರಿವರ್ತನೆಗೊಂಡರೂ ಲೋಕೋ ಪಯೋಗಿ ಇಲಾಖೆ ರಸ್ತೆ ಕೂಡುವಲ್ಲಿ ಎಲ್ಲಿಯೂ ಸೂಚನಾ ಫಲಕಗಳನ್ನಾಗಲೀ, ರಿಫ್ಲೆಕ್ಟರ್‌ಗಳನ್ನಾಗಲೀ ಅಳವಡಿಸಿಲ್ಲ. ಕುತ್ಯಾರು ಕ್ರಾಸ್‌ ಮತ್ತು ಕಾಪು ರಸ್ತೆಬಳಿ ಅಲ್ಲದೆ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪೆಟ್ರೋಲ್‌ ಪಂಪ್‌ನ ಬಳಿ ದ್ವಿಪಥ ರಸ್ತೆ ಪ್ರಾರಂಭ ವಾಗುವಲ್ಲಿ ಯಾವುದೇ ಸೂಚನಾ ಫಲಕವಿಲ್ಲದಿರುವು ದರಿಂದ ಈಗಾಗಲೇ ಹಲವು ಅಪಘಾತ ಸಂಭವಿಸಿದ್ದು ವಾಹನ ಸವಾರರು ಗಾಯಗೊಂಡಿದ್ದಾರೆ.

ಮುಖ್ಯ ರಸ್ತೆಯಲ್ಲಿ ನೂರಾರು ವಾಹನಗಳು ಚಲಿಸುತ್ತಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಓಡಾಡುವ ಪದವು ಕಾಲೇಜು ಜಂಕ್ಷನ್‌ವ ಬಳಿ ಕೂಡಾ ಅಪಘಾತ ತಾಣವಾಗಿದೆ ಇಲ್ಲಿ ಮಿತಿ ಮೀರಿದ ವೇಗ ತಡೆಯಲು ನಾಗರಿಕರ ಒತ್ತಾಯದ ಮೇರೆಗೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇನ್ನಷ್ಟು ಅನಾಹುತಗಳು ಸಂಭವಿಸುವ ಮುನ್ನ ತುರ್ತು ಸ್ಪಂದಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ.

ಅವೈಜ್ಞಾನಿಕ ಡಿವೈಡರ್‌
ರಸ್ತೆ ವಿಸ್ತರಣೆಯ ವೇಳೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಶಿರ್ವಪೆಟ್ರೋಲ್‌ ಪಂಪ್‌ನವರೆಗೆ ಡಿವೈಡರ್‌ ಅಳವಡಿಸಲಾಗಿದೆ. ಡಿವೈಡರ್‌ ಪ್ರಾರಂಭವಾಗುವಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ರಾತ್ರಿ ವೇಳೆ ವಾಹನ ಸವಾರರು ಡಿವೈಡರ್‌ ಗಮನಿಸದೆ ಅಪಘಾತ ಸಂಭವಿಸುತ್ತಿದೆ. ಜತೆಗೆ ಅವೈಜ್ಞಾನಿಕ ಡಿವೈಡರ್‌ನಿಂದಾಗಿ ಕುತ್ಯಾರು ಮತ್ತು ಕಾಪು ಕಡೆಯಿಂದ ಬರುವ ಮತ್ತು ಹೋಗುವ ವಾಹನಗಳಿಗೆ ಮುಖ್ಯ ರಸ್ತೆ ಸೇರುವಲ್ಲಿ ಸಮಸ್ಯೆಯಾಗಿದ್ದು ತೊಂದರೆಯಾಗಿದೆ. ಇದರೊಂದಿಗೆ ಕಾಮಗಾರಿ ಪೂರ್ತಿಯಾಗದೆ ಡಿವೈಡರ್‌ನಲ್ಲಿ ಹುಲ್ಲು, ಕಸ ತುಂಬಿದೆ. ಶಿರ್ವ ಗ್ರಾಮ ಪಂಚಾಯತ್‌ನ ಮಂಚಕಲ್‌ ಪೇಟೆಯ ಮಧ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಆತ್ರಾಡಿ-ಶಿರ್ವ-ಬಜ್ಪೆ  ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಪೆಟ್ರೋಲ್‌ ಪಂಪ್‌ನ ವರೆಗೆ 8.5 ಮೀ.ಅಗಲದ ರಸ್ತೆಯೊಂದಿಗೆ ಡಿವೈಡರ್‌ ಅಳವಡಿಸಿ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗಿದೆ. 

Advertisement

ಸೂಚನಾ ಫ‌ಲಕ, ರಿಫ್ಲೆಕ್ಟರ್‌ಗಳಿಲ್ಲ 
ಸಮುದಾಯ ಆಸ್ಪತ್ರೆಯ ಗೇಟಿನ ಎದುರು ಆರಂಭವಾದ ಡಿವೈಡರ್‌ಗೆ ಯಾವುದೇ ಸೂಚನಾ ಫಲಕ, ರೆಫ್ಲೆಕ್ಟರ್‌ ಅಳವಡಿಸಿಲ್ಲ. ಕೆಲವರು ವಾಹನಗಳನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸುವುದರಿಂದ ಢಿಕ್ಕಿ ಹೊಡೆಯುವ ಸಾಧ್ಯತೆಯಿದ್ದು ಅಪಾಯಕಾರಿಯಾಗಿದೆ.  
– ಡಾ| ಸಂತೋಷ್‌ ಕುಮಾರ್‌ ಬೈಲೂರು, ಆಡಳಿತ ವೈದ್ಯಾಧಿಕಾರಿ,ಸಮುದಾಯ ಆರೋಗ್ಯ ಕೇಂದ್ರ, ಶಿರ್ವ  

ರಸ್ತೆ ವಿಸ್ತರಣೆ ಅಪೂರ್ಣ
ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿಲ್ಲ,ಮಳೆಗಾಲದಲ್ಲಿ ಕೆಲಸ ಸ್ಥಗಿತಗೊಂಡಿದ್ದು ಗುತ್ತಿಗೆದಾರರಿಗೆ ಹೇಳಿ ಕೂಡಲೇ ಸೂಚನಾ ಫಲಕ ಹಾಗೂ ರಿಫ್ಲೆಕ್ಟರ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
– ಜಗದೀಶ್‌ ಭಟ್‌, ಸಹಾಯಕ ಕಾರ್ಯಕಾರಿ ಅಭಿಯಂತರು, ಲೋಕೋಪಯೋಗಿ ಇಲಾಖೆ. ಉಡುಪಿ

– ಸತೀಶ್ಚಂದ್ರ ಶೆಟ್ಟಿ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next