ಕಾಸರಗೋಡು: ಜಿಲ್ಲೆಯ ವಿವಿಧೆಡೆ ವಿದ್ಯುತ್ ಇಲಾಖೆಯ ವಿದ್ಯುತ್ ಪರಿವರ್ತಕಗಳು ಅಪಾಯದ ಸ್ಥಿತಿಯಲ್ಲಿದ್ದು, ಅಂತಹ ಅಪಾಯಕಾರಿಯಾಗಿರುವ ವಿದ್ಯುತ್ ಪರಿವರ್ತಕ ಮೆಣಸಿನಪಾರೆಯಲ್ಲಿದೆ. ಕಾಸರಗೋಡು ಜಿಲ್ಲೆಯ ವಿವಿಧೆಡೆ ಈ ಹಿಂದೆ ಹಲವು ವಿದ್ಯುತ್ ದುರಂತಗಳು ಸಂಭವಿಸಿತ್ತು. ಆದರೂ ವಿದ್ಯುತ್ ಇಲಾಖೆ ಈ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಂಡು ಬರುವುದಿಲ್ಲ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಹಲವು ಉದಾಹರಣೆಗಳು ಲಭಿಸುತ್ತವೆ.ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭಗೊಳ್ಳುವುದಿದ್ದು, ಈ ಮಧ್ಯೆ ಮಳೆಗಾಲದ ಪ್ರಾಕೃತಿಕ ವಿಕೋಪಗಳನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿವಿಧ ಇಲಾಖೆಗಳು ವಹಿಸುತ್ತಿರುವ ನಿರ್ಲಕ್ಷ್ಯ ಮನೋಭಾವ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ನೀರ್ಚಾಲು ಸಮೀಪದ ಮೆಣಸಿನಪಾರೆಯ ಪರಿಶಿಷ್ಟ ಜಾತಿ ಕಾಲನಿಯ ಸಮೀಪವಿರುವ ವಿದ್ಯುತ್ ಪರಿವರ್ತಕವೊಂದು ಅಧಿಕೃತರ ನಿರ್ಲಕ್ಷ್ಯದಿಂದ ಮುಂದೆ ಭಾರೀ ಅನಾಹುತಗಳಿಗೆ ಕಾರಣವಾಗುವ ಭೀತಿ ಎದುರಾಗಿದ್ದು, ಸ್ಥಳೀಯರ ಮನವಿಗೆ ಅಧಿಕೃತರು ಈ ವರೆಗೆ ಸ್ಪಂದಿಸಿಲ್ಲ ಎಂದು ದೂರಲಾಗಿದೆ.ಮೆಣಸಿನಪಾರೆ ಕಾಲನಿಯಲ್ಲಿ ಸುಮಾರು 20 ಕ್ಕಿಂತಲೂ ಮಿಕ್ಕಿದ ಕುಟುಂಬ ವಾಸಿಸುತ್ತಿದ್ದು, ಜೊತೆಗೆ ಈ ಪರಿಸರದಲ್ಲಿ ಇತರ ಮನೆಗಳೂ ಸಾಕಷ್ಟಿದೆ. ಈ ಪರಿಸರದ ಮನೆಗಳಿಗೆ ವಿದ್ಯುತ್ ಸರಬರಾಜಿಗಾಗಿರುವ ಪರಿವರ್ತಕವೊಂದು ಅಪಾಯವನ್ನು ಆಹ್ವಾನಿಸುತ್ತಿದೆ. ಹಳೆಯದಾದ ಎರಡು ಕಂಬಗಳ ಆಧಾರದಲ್ಲಿ ನಿಂತಿರುವ ಈ ಪರಿವರ್ತಕದ ನೈಜ ಸ್ಥಿತಿಗನುಸರಿಸಿ ನಾಲ್ಕು ಕಂಬಗಳ ಅಗತ್ಯವಿದೆ. ಆದರೆ ತನ್ನೆಲ್ಲಾ ಭಾರವನ್ನು ಎರಡು ಕಂಬಗಳಲ್ಲಿ ಆತುಕೊಂಡಿರುವ ಈ ಪರಿವರ್ತಕ ಯಾವ ಕ್ಷಣದಲ್ಲೂ ಕುಸಿಯುವ ಭೀತಿಯಲ್ಲಿದೆ.
ಜೊತೆಗೆ ವಿದ್ಯುತ್ ಪರಿವರ್ತಕದ ಸುತ್ತಲೂ ಆವರಣ ಗೋಡೆ ನಿರ್ಮಿಸಬೇಕೆಂಬ ಅಧಿಕೃತ ಆದೇಶವನ್ನು ಸಂಪೂರ್ಣ ಮರೆತು ಯಾವುದೇ ಆವರಣಗಳಿಲ್ಲದೆ ಸಾರ್ವಜನಿಕರಿಗೆ ಭಯ ತರುವ ರೀತಿಯಲ್ಲಿ ಇಲ್ಲಿದೆ. ಹಲವಾರು ಶಾಲಾ ಮಕ್ಕಳು, ಸಾರ್ವಜನಿಕರು ನಿತ್ಯ ಈ ಪರಿವರ್ತಕದ ಸನಿಹದಿಂದಲೇ ಪ್ರಯಾಣಿಸುತ್ತಿದ್ದು, ಆವರಣ ಬೇಲಿ ನಿರ್ಮಿಸದಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿ ದುರಂತವನ್ನು ಆಹ್ವಾನಿಸುವಂತಿದೆ. ಕುತೂಹಲಿಗಳಾದ ಶಾಲಾ ಮಕ್ಕಳು ಪರಿವರ್ತಕವನ್ನು ಹತ್ತಿರದಿಂದ ವೀಕ್ಷಿಸುವ, ಸ್ಪರ್ಶಿಸುವ ಯತ್ನಗಳು ಈ ಹಿಂದೆ ನಡೆದಿದ್ದು, ಸಾರ್ವಜನಿಕರ ಸಕಾಲಿಕ ಪ್ರವೇಶದಿಂದ ದೊಡ್ಡ ಪ್ರಮಾಣದ ಅಪಾಯಗಳು ಕೂದಲೆಳೆಯ ಅಂತರದಿಂದ ಪಾರಾಗಿತ್ತು. ಯಾವತ್ತೂ ಇಂತಹ ನೆರವು ನಿರೀಕ್ಷಿಸಲಾಗದು.
ಸ್ಥಳೀಯರು ವಿದ್ಯುತ್ ಇಲಾಖಾ ಅಧಿಕೃತರಿಗೆ ಹಲವು ಬಾರಿ ಮನವಿ ನೀಡಿ ಪರಿವರ್ತಕಕ್ಕೆ ಬಲಿಷ್ಠವಾದ ಇನ್ನೆರಡು ಕಂಬಗಳು ಹಾಗೂ ಸಮರ್ಪಕ ಬೇಲಿ ನಿರ್ಮಿಸುವಂತೆ ಮನವಿನೀಡಿದ್ದರೂ ಈ ವರೆಗೆ ಸ್ಪಂದಿಸದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಉಗಿದಿದೆ,ಇನ್ನಾದರೂ ಸರಕಾರಿ ಯಂತ್ರ ಅಗತ್ಯಗಳಿಗೆ ಸ್ಪಂದಿಸಿತೇ ಕಾದು ನೋಡಬೇಕಿದೆ.
ಪರಿವರ್ತಕಗಳಿಗೆ ಬೇಲಿ ಇಲ್ಲ
ಜಿಲ್ಲೆಯ ವಿವಿಧೆಡೆ ವಿದ್ಯುತ್ ಪರಿವರ್ತಕಗಳಿಗೆ ಬೇಲಿ ಇಲ್ಲ. ಮೆಣಸಿನಪಾರೆ ಸಹಿತ ಕೆಲವು ಪ್ರದೇಶಗಳ ವಿದ್ಯುತ್ ಪರಿವರ್ತಕಗಳಿಗೆ ಇನ್ನೂ ಬೇಲಿ ನಿರ್ಮಿಸಲು ಸಾಧ್ಯವಾಗಿಲ್ಲ ಎಂಬುದು ನಿಜ. ಅಪಾಯಗಳಾಗದಂತೆ ಬೇಲಿ ನಿರ್ಮಿಸುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಒಂದು ತಿಂಗಳೊಳಗೆ ಬೇಲಿ ನಿರ್ಮಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು.
-ಶೇಖರನ್ ಸಹಾಯಕ ಅಭಿಯಂತರ.
ವಿದ್ಯುತ್ ಪ್ರಸರಣ ಇಲಾಖೆ, ಸೀತಾಂಗೋಳಿ ವಿಭಾಗೀಯ ವಲಯ.